ಅದ್ಧೂರಿಯಾಗಿ ಜರುಗಿದ ಬೆಂಗಳೂರಿನ ಐತಿಹಾಸಿಕ ಕರಗ ಮಹೋತ್ಸವ
ಬೆಂಗಳೂರು, ಮಾ.31: ಐತಿಹಾಸಿಕ ಬೆಂಗಳೂರು ಕರಗ ಶನಿವಾರ ರಾತ್ರಿ ಪೂರ್ತಿ ಅದ್ಧೂರಿಯಾಗಿ ನಗರದಾದ್ಯಂತ ಸಂಚರಿಸಿತು. ಸದಾ ಜನರಿಂದ, ವಾಹನಗಳಿಂದ ಕೂಡಿದ್ದ ನಗರದಲ್ಲಿ ಮಧ್ಯರಾತ್ರಿ ಗೆಜ್ಜೆ ಸದ್ದು, ಪೂಜಾಕುಣಿತ, ವಾದ್ಯಗಳ ಮೇಳದ ನಡುವೆ ಅದ್ಧೂರಿಯಾಗಿ ಕರಗ ಮಹೋತ್ಸವ ಜರುಗಿತು.
ನಗರದ ಚಿಕ್ಕಪೇಟೆಯಲ್ಲಿರುವ ಧರ್ಮರಾಯ ದೇವಸ್ಥಾನದಿಂದ ಹೊರಟ ಹೂವಿನ ಕರಗ ನಗರದಾದ್ಯಂತ ಸಂಚರಿಸಿತು. ಉತ್ಸವದಲ್ಲಿ ರಾಜಕೀಯ ಮುಖಂಡರು, ಮೇಯರ್ ಹಾಗೂ ಪಾಲಿಕೆ ಸದಸ್ಯರು ಸೇರಿದಂತೆ ನಾನಾ ಕ್ಷೇತ್ರದ ಗಣ್ಯರು ಭಾಗವಹಿಸಿ ಕರಗ ದರ್ಶನದೊಂದಿಗೆ ಪ್ರಸಾದ ಸ್ವೀಕರಿಸಿದರು. ಹಾಗೂ ಸಾವಿರಾರು ಜನರು ಕರಗ ಉತ್ಸವಕ್ಕೆ ಸಾಕ್ಷಿಯಾದರು.
ಕರಗವು ಚಿಕ್ಕಪೇಟೆಯಲ್ಲಿರುವ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಆರಂಭಗೊಂಡು ಹಲಸೂರು ಪೇಟೆ, ನಗರ್ತಪೇಟೆ, ಸಿದ್ದಣ್ಣಗಲ್ಲಿ, ಕಬ್ಬನ್‌ಪೇಟೆ, ಕೆ.ಆರ್.ಮಾರುಕಟ್ಟೆ, ಅರಳೇಪೇಟೆ, ಗಾಣಿಗರಪೇಟೆ, ಅಕ್ಕಿಪೇಟೆ, ಅರಳೇಪೇಟೆ, ಕುಂಬಾರಪೇಟೆ ಮೂಲಕ ಯಲಹಂಕ ಗೇಟ್‌ವರೆಗೂ ಸಂಚರಿಸಿ ಅನಂತರ ಕುಂಬಾರಪೇಟೆ ಮುಖ್ಯರಸ್ತೆ ಮೂಲಕ ಗೊಲ್ಲರಪೇಟೆ, ತಿಗಳರ ಪೇಟೆಯಲ್ಲಿ ಪೂಜೆ ಸ್ವೀಕರಿಸಿ ಜೋಯಿಸ್ ಗಲ್ಲಿ ಮೂಲಕ ಹಾದು ಬೆಳಗಿನ ಜಾವ ಮರಳಿ ಧರ್ಮರಾಯ ದೇವಸ್ಥಾನಕ್ಕೆ ತಲುಪಿತು.
ಧಾರ್ಮಿಕ ವಿಧಾನಗಳು: ಅಗ್ನಿಯಿಂದ ಉದಯಿಸಿದ ಶಕ್ತಿ ದೇವತೆ, ದ್ರೌಪದಿಯ ಆರಾಧನೆ ಹೆಸರಿನಲ್ಲಿ ನಡೆಯುವ ಕರಗ ಮಹೋತ್ಸವದಲ್ಲಿ ಚಂದ್ರೋದಯವಾಗುತ್ತಿದ್ದಂತೆ ಧರ್ಮರಾಯ ದೇವಸ್ಥಾನದ ಅರ್ಚಕರಾದ ಜ್ಞಾನೇಂದ್ರ ಅವರು, ಗೌಡರು, ಗಣಾಚಾರಿ, ಗಂಟೆ ಪೂಜಾರಿಯ ಉಸ್ತುವಾರಿಯಲ್ಲಿ ನೂರಾರು ವೀರಕುಮಾರರ ಜತೆ ಮಂಗಳವಾದ್ಯಗಳೊಂದಿಗೆ ಮೂಲಸ್ಥಾನ ಕರಗದ ಕುಂಟೆಯಲ್ಲಿ ಪುಣ್ಯ ಸ್ನಾನ ಾಡಿ ಗಂಗಾ ಪೂಜೆ ನೆರವೇರಿಸಿದರು.
ಹೂವಿನ ಅಲಂಕಾರ: ಶಕ್ತಿ ದೇವತೆ, ದ್ರೌಪದಿ ಕರಗ ಎಂಬ ಪ್ರಸಿದ್ಧಿಯ ಉತ್ಸವದಲ್ಲಿ ಕುಂಭದಲ್ಲಿ ದುರ್ಗೆಯನ್ನು ಆವಾಹಿಸಿ, ಪೂಜಿಸಿ, ಹೂವಿನಿಂದ ಅಲಂಕಾರ ಮಾಡಲಾಗಿತ್ತು. ಮಧ್ಯರಾತ್ರಿ ವೇಳೆಗೆ ಹಳದಿ ಸೀರೆ, ಬಳೆ ತೊಟ್ಟಿದ್ದ ಧರ್ಮರಾಯ ದೇವಸ್ಥಾನದ ಅರ್ಚಕ ಜ್ಞಾನೇಂದ್ರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ದೇವಸ್ಥಾನಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ, ಸಮೀಪದ ಶಕ್ತಿ ಗಣಪತಿ ಮತ್ತು ಮುತ್ಯಾಲಮ್ಮದೇವಿ ದೇವಸ್ಥಾನದಲ್ಲಿ ಪೂಜೆ ಸ್ವೀಕರಿಸಿದರು. ಬಳಿಕ ನೂರಾರು ವೀರ ಕುಮಾರರು ಹಾಗೂ ಸಹಸ್ರಾರು ಭಕ್ತರ ‘ಗೋವಿಂದ ಗೋವಿಂದ’ ಎಂಬ ಘೋಷಣೆಯ ನಡುವೆ ದರ್ಶನ ನೀಡುತ್ತ ನಗರ ಪ್ರದಕ್ಷಿಣೆಗೆ ಸಾಗಿದರು.
ಪಲ್ಲಕ್ಕಿ ಉತ್ಸವ: ಕರಗ ಶಕೋತ್ಸವ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನದಿಂದಲೇ ನಗರದ ನಾನಾ ಭಾಗಗಳಿಂದ ಪಲ್ಲಕ್ಕಿ ಉತ್ಸವ ಆರಂಭವಾಯಿತು. ಅಣ್ಣಮ್ಮ ದೇವಿ ಸೇರಿದಂತೆ ನಗರದ ಸುತ್ತಮುತ್ತಲ ದೇವಾಲಯಗಳಿಂದ ಉತ್ಸವ ಮೂರ್ತಿಗಳನ್ನು ಹೊತ್ತ 360ಕ್ಕೂ ಹೆಚ್ಚು ರಥಗಳು ರಾತ್ರಿವೇಳೆಗೆ ಮಾರುಕಟ್ಟೆ ಪ್ರದೇಶ ತಲುಪಿದವು. ಇದರಿಂದಕೆ.ಆರ್.ರಸ್ತೆ, ಮೈಸೂರು ಸರ್ಕಲ್, ಚಾಮರಾಜಪೇಟೆ, ಪುರಭವನ, ನೃಪತುಂಗ ರಸ್ತೆ ಸೇರಿದಂತೆ ಮಾರುಕಟ್ಟೆಯ ಸುತ್ತಮುತ್ತಲ ರಸ್ತೆಗಳಲ್ಲಿ ಮಧ್ಯಾಹ್ನ ಉಂಟಾದ ಸಂಚಾರ ದಟ್ಟಣೆ ರಾತ್ರಿಯೂ ಮುಂದುವರೆದಿದ್ದು, ಸುಗಮ ಸಂಚಾರಕ್ಕೆ ಪೊಲೀಸರು ಹರಸಾಹಸ ಪಡುವಂತಾಯಿತು.
ಸಂಗೀತ ಕಾರ್ಯಕ್ರಮ: ಹೂವಿನ ಕರಗದ ಅಂಗವಾಗಿ ದೇವಳದಲ್ಲಿ ರಾತ್ರಿ ಪೂರ ಸಂಗೀತ ಕಾರ್ಯಕ್ರಮ ನಡೆಯಿತು. ವಿದ್ವಾನ್ ಆರ್.ಕೆ. ಪ್ರಕಾಶ್ ಮತ್ತು ತಂಡದರು ವೀಣಾ ವಾದನ ನಡೆಸಿಕೊಟ್ಟರು.
ಸಂಚಾರ ದಟ್ಟಣೆ: ಕರಗ ಉತ್ಸವದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಲು ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ನಗರದಾದ್ಯಂತ ಸಂಚಾರಿ ಪೊಲೀಸರು ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಪೊಲೀಸ್‌ರನ್ನು ನಿಯೋಜಿಸಲಾಗಿತ್ತು. ಮುಂಜಾಗ್ರತೆಯಾಗಿ ಉತ್ಸವ ಸಂಚರಿಸುವ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಿ, ಬದಲಿ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿತ್ತು.
ಇ-ಶೌಚಾಲಯ
ಶನಿವಾರ ಮಧ್ಯರಾತ್ರಿಯಿಂದ ಆರಂಭಗೊಂಡ ಕರಗ ಉತ್ಸವದಲ್ಲಿ ಸಾವಿರಾರು ಜನರು ಭಾಗವಹಿಸಿದ್ದ ಹಿನ್ನೆಲೆಯಲ್ಲಿ ಶೌಚಾಲಯ ಸಮಸ್ಯೆ ನಿವಾರಿಸುವ ಸಲುವಾಗಿ ಬಿಬಿಎಂಪಿ ವತಿಯಿಂದ ಕರಗ ಸಾಗುವ ದಾರಿಯಲ್ಲಿ 14 ಸ್ಥಳಗಳಲ್ಲಿ ಇ-ಶೌಚಾಲಯ ವ್ಯವಸ್ಥೆ ಮಾಡಲಾಗಿತ್ತು. ಸಾರಿಗೆ ಇಲಾಖೆ, ಸಂಚಾರ ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳ ಸಮನ್ವಯದಿಂದ ಕಾರ್ಯನಿವಹಿರ್ಸಲು ಸೂಚಿಸಲಾಗಿತ್ತು.