ಕಾಂಗ್ರೆಸ್-ಬಿಜೆಪಿ ಸೋಲಿಸಲು ದಸಂಸ ಕರೆ
ಬೆಂಗಳೂರು, ಮಾ.31: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿಯನ್ನು ಹಾಗೂ ನ್ಯಾ.ಸದಾಶಿವ ಆಯೋಗದ ವರದಿ ಜಾರಿ ಮಾಡದೆ ಸಾಮಾಜಿಕ ನ್ಯಾಯದ ವಿರುದ್ದವಿರುವ ಕಾಂಗ್ರೆಸ್ ಪಕ್ಷವನ್ನು ಸೋಲಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಕರೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದುದರಿಂದ ಮುಂದಿನ ಚುನಾವಣೆಯಲ್ಲಿ ಎರಡೂ ಪಕ್ಷಗಳನ್ನು ತಿರಸ್ಕರಿಸಿ ಜಾತ್ಯತೀತ ಪಕ್ಷಗಳನ್ನು ಬೆಂಬಲಿಸುವ ಮೂಲಕ ಅತಂತ್ರ ವಿಧಾನಸಭೆ ಸೃಷ್ಟಿಸಬೇಕು. ಆಗ ನಮ್ಮ ಬೇಡಿಕೆಗಳನ್ನು ಈಡೇರಿಸುವ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದು ಹೇಳಿದರು.
ಕೇಂದ್ರ ಬಿಜೆಪಿ ನೇತೃತ್ವದ ಸರಕಾರ ಮೀಸಲಾತಿ, ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ದುರ್ಬಲಗೊಳಿಸುವ ಹುನ್ನಾರ ಮಾಡಲಾಗುತ್ತಿದೆ. ಈ ಮೂಲಕ ಜನವಿರೋಧಿ ನೀತಿ ಅನುಸರಿಸುತ್ತಿದೆ. ಆದುದರಿಂದ ಈ ಚುನಾವಣೆಯಲ್ಲಿ ಬಿಜೆಗೆ ಹಿನ್ನಡೆ ಆಗುವಂತೆ ಮಾಡಿ, ಜಾತ್ಯತೀತ ಶಕ್ತಿಯನ್ನು ಬಲಗೊಳಿಸಬೇಕು. ಈ ನಿಟ್ಟಿನಲ್ಲಿ ದಲಿತರು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರು ಎಚ್ಚೆತ್ತುಕೊಳ್ಳಬೇಕಿದೆ ಎಂದರು.
ಜನರು ಸಂವಿಧಾನ ಕಾಪಾಡುವ ನಿಟ್ಟಿನಲ್ಲಿ ಚಿಂತಿಸಬೇಕಿದೆ. ನ್ಯಾಯ ಪ್ರತಿಪಾದಿಸುವ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರಿದಿ ಅನುಷ್ಠಾನ ಮಾಡದ ಕಾಂಗ್ರೆಸ್ ಪಕ್ಷ ಮತ್ತು ಒಳಮೀಸಲಾತಿ ವಿರೋಧಿಸುತ್ತಿರುವ ಹಾಲಿ ಶಾಸಕರಿಗೆ ಹಿನ್ನಡೆ ಆಗುವಂತೆ ಮಾಡಬೇಕು ಎಂದು ಅವರು ಹೇಳಿದರು.
ಮುಂದಿನ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಮೀಸಲು ಕ್ಷೇತ್ರಗಳಲ್ಲಿ ಜಾತಿ ಜನಸಂಖ್ಯೆಗೆ ಅನುಗುಣವಾಗಿ ಟಿಕೆಟ್ ಹಂಚಿಕೆ ಮಾಡಿ, ಇತರೆ ಪರಿಶಿಷ್ಟರಲ್ಲಿ ಇರುವ ಅಸ್ಪೃಶ್ಯ ಜಾತಿಗಳಾದ ಬೋವಿ, ಲಂಬಾಣಿಗಳಿಗೆ ಅವರ ಜಾತಿ ಹಾಗೂ ಜನಸಂಖ್ಯೆಗೆ ತಕ್ಕಂತೆ ಟಿಕೆಟ್ ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.