‘‘ಕನ್ನಡ ತಂತ್ರಾಂಶ ತಯಾರಿಕೆ ಮತ್ತು ಅನುಷ್ಠಾನ ಕಾರ್ಯ ಕೇವಲ ಒಬ್ಬ ವ್ಯಕ್ತಿಯ ಕಾರ್ಯವಲ್ಲ’’

Update: 2018-03-31 18:04 GMT

ಕನ್ನಡ ತಂತ್ರಾಂಶ ಅಭಿವೃದ್ಧಿಗಾಗಿ ಒಂದು ಸ್ಥಾಯಿ ಸಮಿತಿಯನ್ನು ಸರಕಾರವು ರಚಿಸಬೇಕು ಎಂಬ ತೇಜಸ್ವಿಯವರ ಆಶಯವನ್ನು ಸಾಕಾರಗೊಳಿಸುವ ಪ್ರಯತ್ನವಾಗಿ ಡಾ.ಚಂದ್ರಶೇಖರ ಕಂಬಾರರು ಅಂತಹ ಸಮಿತಿಯನ್ನು ರಚಿಸುವಂತೆ ಕೋರಿ 2004ರಲ್ಲಿ ಕರ್ನಾಟಕ ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ನಾಲ್ಕು ವರ್ಷಗಳ ಕಾಲದ ಸತತ ಪ್ರಯತ್ನದ ಫಲವಾಗಿ 2008ರಲ್ಲಿ ಅಂತಹ ಸಮಿತಿಯೊಂದು ರಚನೆಯಾಯಿತು. ಅದಕ್ಕೆ ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಮತ್ತು ತಂತ್ರಾಂಶ ತಜ್ಞರಾದ ಡಾ.ಕೆ.ಚಿದಾನಂದಗೌಡರು ಅಧ್ಯಕ್ಷರಾದರು. 2010ರಲ್ಲಿ ಈ ಸಮಿತಿಯು ವರದಿಯೊಂದನ್ನು ನೀಡಿತು. ಅದರ ಅನುಷ್ಠಾನಕ್ಕಾಗಿ ಸಮಿತಿಯ ಅಧ್ಯಕ್ಷರು ಮಾಡಿದ ಪ್ರಯತ್ನಗಳು ಹಲವು. ಇವುಗಳ ಫಲವಾಗಿ ಕೆಲವೊಂದು ಶಿಫಾರಸುಗಳ ಅನುಷ್ಠಾನಗೊಂಡವು. ಆದರೂ, ಆಡಳಿತಯಂತ್ರದ ನಿಧಾನಗತಿಯಿಂದಾಗಿ ಹಾಗೂ ಮತ್ತಿತರ ಕಾರಣಗಳಿಗಾಗಿ ಬಹುತೇಕ ಮಹತ್ವದ ಶಿಫಾರಸುಗಳು ಇನ್ನೂ ಅನುಷ್ಠಾನಗೊಳ್ಳಬೇಕಾಗಿದೆ.

ಕನ್ನಡದ ಮಹತ್ವದ ವಿಜ್ಞಾನ ಬರಹಗಾರ, ಖ್ಯಾತ ಸಾಹಿತಿ, ಪರಿಸರ ಹಾಗೂ ಕನ್ನಡ ತಂತ್ರಜ್ಞಾನ ಪ್ರೇಮಿ ಶ್ರೀ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ಕಣ್ಮರೆಯಾಗಿ ಇದೇ ಎಪ್ರಿಲ್ 5ಕ್ಕೆ ಭರ್ತಿ 11 ವರ್ಷಗಳಾಗುತ್ತವೆ. ಕನ್ನಡ ಭಾಷೆಯು ಎಲೆಕ್ಟ್ರಾನಿಕ್ ಮಾಧ್ಯಮದ ಭಾಷೆಯಾಗಬೇಕು ಎಂಬ ಕಳಕಳಿಯಿಂದ ಹಲವು ಪ್ರಯತ್ನಗಳನ್ನು ಅವರು ಮಾಡಿದ್ದರು. ನಿಜಾರ್ಥದಲ್ಲಿ ಕನ್ನಡವು ರಾಜ್ಯದ ಆಡಳಿತ ಭಾಷೆಯಾಗದಿದ್ದರೆ, ಜನಸಾಮಾನ್ಯರು ತಮ್ಮ ವ್ಯವಹಾರದ ಎಲ್ಲ ರಂಗಗಳಲ್ಲಿ ಕನ್ನಡ ಬಳಸುವುದಕ್ಕೆ ಇರುವ ಅಡ್ಡಿ-ಆತಂಕಗಳನ್ನು ನಿವಾರಿಸಿಕೊಳ್ಳದಿದ್ದರೆ, ಕನ್ನಡವು ಜನಬಳಕೆಯಲ್ಲಿ ಉಳಿಯದಿದ್ದರೆ, ಕನ್ನಡವೂ ಸಹ ಸಂಸ್ಕೃತದಂತೆ ‘ಮೃತ ಭಾಷೆ’ಯಾಗುತ್ತದೆ ಎಂಬುದು ಖ್ಯಾತ ವಿಜ್ಞಾನಿ ಡಾ.ರಾಜಾರಾಮಣ್ಣನವರ ಎಚ್ಚರಿಕೆಯ ಕರೆಗಂಟೆ. ತೇಜಸ್ವಿಯವರೂ ಇಂತಹುದೇ ಎಚ್ಚರಿಕೆಯನ್ನು ನೀಡಿದ್ದರು ಮತ್ತು ಡಿಜಿಟಲ್ ಕನ್ನಡದ ಕುರಿತು ತಾವು ಹೊಂದಿದ್ದ ಸ್ಪಷ್ಟ ನಿಲವುಗಳನ್ನು ಅವರು ನಿರ್ಭಿಡೆಯಿಂದ ಪ್ರತಿಪಾದಿಸಿದ್ದರು. ‘‘ಕನ್ನಡ ತಂತ್ರಾಂಶ ತಯಾರಿಕೆ ಮತ್ತು ಅನುಷ್ಠಾನ ಕಾರ್ಯ ಕೇವಲ ಒಬ್ಬ ವ್ಯಕ್ತಿಯ ಕಾರ್ಯವಲ್ಲ ಸರಕಾರದ ಎಲ್ಲ ಪ್ರಮುಖರು ಇದರಲ್ಲಿ ಭಾಗಿಯಾದರೆ ಮಾತ್ರ ಕನ್ನಡವನ್ನು ಕಂಪ್ಯೂಟರ್‌ಗಳಲ್ಲಿ ಬಳಸಿ, ಅದನ್ನು ಉಳಿಸಿಕೊಳ್ಳಬಹುದು’’ ಎಂಬುದರ ಕುರಿತು ಶ್ರೀ ತೇಜಸ್ವಿಯವರು ಹೀಗೆ ಹೇಳಿದ್ದಾರೆ: ‘‘ಭಾಷೆಗೆ ಸಂಬಂಧಪಟ್ಟ ತಂತ್ರಾಂಶ ಅಬಿವೃದ್ಧಿ ಕೇವಲ ಸಾಫ್ಟ್‌ವೇರ್ ಇಂಜಿನಿಯರುಗಳ ಕೆಲಸ ಮಾತ್ರವಲ್ಲ. ಅದಕ್ಕೆ ಭಾಷಾಶಾಸ್ತ್ರಜ್ಞರು, ವ್ಯಾಕರಣ ಶಾಸ್ತ್ರಜ್ಞರು, ಸಾಹಿತ್ಯ ಪರಿಣತರು, ಉಚ್ಚಾರಣ ಶಾಸ್ತ್ರಜ್ಞರು ಮುಂತಾದವರೆಲ್ಲಾ ಸೇರಿ ಮಾಡಬೇಕಾದ ಕೆಲಸ. ಇದರ ಸಂಕೀರ್ಣತೆಯನ್ನೂ ಪ್ರಾಮುಖ್ಯತೆಯನ್ನೂ ಅರಿತು ಇವರೆಲ್ಲರನ್ನೂ ಒಟ್ಟು ಮಾಡಿ ಕೆಲಸ ಮಾಡಲು ಮುಂದಾಗುವಷ್ಟು ಸೂಕ್ಷ್ಮಜ್ಞತೆ ನಮ್ಮ ರಾಜಕಾರಣಿಗಳಲ್ಲಾಗಲೀ ಅಧಿಕಾರ ಶಾಹಿಯಲ್ಲಾಗಲೀ ಕಾಣದೇ ಅಸಹಾಯಕರಾಗಿ ನಾವು ಕುಳಿತಿದ್ದೇವೆ’’. ಕಂಪ್ಯೂಟರ್ ಸೇರಿದಂತೆ ಡಿಜಿಟಲ್ ಸಾಧನಗಳಲ್ಲಿ ಸಮಗ್ರವಾಗಿ ಕನ್ನಡವು ಅನುಷ್ಠಾನಗೊಳ್ಳದಿದ್ದರೆ ಆಗುವ ಅಪಾಯಗಳ ಕುರಿತು ತೇಜಸ್ವಿಯವರು ಹೀಗೆಂದಿದ್ದಾರೆ: ‘‘ಇಂಟರ್‌ನೆಟ್ ಆಗಮನದೊಂದಿಗೆ ಐಟಿ ಕ್ಷೇತ್ರ ಅಡೆತಡೆ ಇಲ್ಲದ ವೇಗದಲ್ಲಿ ವೈದ್ಯಕೀಯ ಕ್ಷೇತ್ರದಿಂದ ಹಿಡಿದು ವ್ಯಾಪಾರ ವಹಿವಾಟಿನವರೆಗೆ ತ್ರಿವಿಕ್ರಮ ಸದೃಶವಾಗಿ ಆಕ್ರಮಿಸುತ್ತಿದೆ. ಇ-ಮೇಲ್, ಇ-ವಾಣಿಜ್ಯ, ಇ-ಆಡಳಿತ ಇತ್ಯಾದಿಗಳನ್ನು ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಹಸ್ತಾಂತರಿಸಲಾಗುತ್ತಿದೆ. ವಾಣಿಜ್ಯ ಮತ್ತು ಆಡಳಿತವೇ ನಮ್ಮ ದೈನಂದಿನ ವ್ಯವಹಾರಗಳ ಮುಕ್ಕಾಲು ಅಂಶವಾಗಿರುವುದಿಂದ, ಇಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಕನ್ನಡವನ್ನು ಸಮರ್ಥವಾಗಿ ಉಪಯೋಗಿಸಲಾಗದಿದ್ದರೆ ಕನ್ನಡದ ದಿನಬಳಕೆ ಸಂಪೂರ್ಣ ಸ್ಥಗಿತವಾಗುತ್ತದೆ.’’ ಕನ್ನಡವನ್ನು ಕಂಪ್ಯೂಟರ್‌ಗಳಲ್ಲಿ ಅಳವಡಿಸುವಲ್ಲಿನ ಸಮಸ್ಯೆಗಳ ಕುರಿತು ಬರೆಯುತ್ತಾ ಶ್ರೀ ತೇಜಸ್ವಿಯವರು ಹೀಗೆಂದಿದ್ದಾರೆ: ‘‘ಕಂಪ್ಯೂಟರೇನು ಕನ್ನಡಕ್ಕೆ ಹೊಸದಲ್ಲ. ನಮ್ಮ ತಂತ್ರಜ್ಞರು ಬಹಳ ಹಿಂದೆಯೇ ಕನ್ನಡ ಭಾಷೆಯನ್ನು ಕಂಪ್ಯೂಟರಿಗೆ ಅಳವಡಿಸಿದ್ದರು. ಮುದ್ರಣ, ಪುಸ್ತಕ ಪ್ರಕಾಶನ, ಕಚೇರಿಯ ವಹಿವಾಟುಗಳಲ್ಲಿ, ಟೈಪ್‌ರೈಟರ್ ಯಂತ್ರಕ್ಕಿಂತ ಹೆಚ್ಚು ವ್ಯಾಪಕವಾಗಿ, ಸಮರ್ಪಕವಾಗಿ ಕನ್ನಡವನ್ನು ಕಂಪ್ಯೂಟರಿನಲ್ಲಿ ಬಳಸಲು ಸಾಧ್ಯವಿತ್ತು. ಆದರೆ ಕನ್ನಡ ತಂತ್ರಾಂಶ ಕ್ಷೇತ್ರ ವಿಪರೀತ ಅಸ್ಪಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿತ್ತು. ಕನ್ನಡಕ್ಕೆ ಬಳಸುವ ಕೀಲಿಮಣೆ ವಿನ್ಯಾಸದಲ್ಲಿ ಏಕರೂಪತೆ ಇರಲಿಲ್ಲ. ಅಷ್ಟೆ ಅಲ್ಲದೆ ಕನ್ನಡ ಅಕ್ಷರಗಳ ಎನ್‌ಕೋಡಿಂಗ್ ಸಹ ಒಬ್ಬೊಬ್ಬರದು ಒಂದೊಂದು ರೀತಿ ಇತ್ತು. ಒಬ್ಬರ ತಂತ್ರಾಂಶದಲ್ಲಿ ರೂಪಿಸಿದ ಫೈಲ್‌ಗಳನ್ನು ಇನ್ನೊಬ್ಬರ ಕಂಪ್ಯೂಟರಿಗೆ ಹಾಕಿ ತೆರೆಯುವಂತಿರಲಿಲ್ಲ. ಕೀಲಿಮಣೆ ವಿನ್ಯಾಸ ಸಹ ಬದಲಾಗುತ್ತಿದ್ದುದರಿಂದ, ಒಂದು ತಂತ್ರಾಂಶದಲ್ಲಿ ಕೆಲಸ ಮಾಡಿದವನು ಇನ್ನೊಂದರಲ್ಲಿ ಮಾಡುವಂತಿರಲಿಲ್ಲ. ದಿನಗಳೆದಂತೆ ಕನ್ನಡ ತಂತ್ರಾಂಶ ಕ್ಷೇತ್ರ ಅವ್ಯವಸ್ಥೆಯ ಆಗರವಾಗತೊಡಗಿತು. ಇವೆಲ್ಲವನ್ನೂ ನಿರ್ದೇಶಿಸಿ ನಿಯಂತ್ರಿಸಲು ಸಾಧ್ಯವಿದ್ದುದು ತಂತ್ರಾಂಶದ ಅತೀ ದೊಡ್ಡ ಗ್ರಾಹಕವಾದ ಸರಕಾರಕ್ಕೆ, ಇಲ್ಲವೆ ಈ ನಾಡಿನ ವಿಶ್ವವಿದ್ಯಾನಿಲಯಗಳಿಗೆ. ದುರದೃಷ್ಟವಶಾತ್ ಇವರು ಯಾರಿಗೂ ಎಲೆಕ್ಟ್ರಾನಿಕ್ ಮಾಧ್ಯಮದಿಂದ ನಮ್ಮ ಭಾಷೆಗಳಿಗೆ ಮುಂದೊದಗಲಿರುವ ಅಪಾಯವನ್ನು ಅಂದಾಜು ಮಾಡಲಾಗಲಿಲ್ಲ.’’

 ಪೂರ್ಣಚಂದ್ರ ತೇಜಸ್ವಿ

ಸರಕಾರದ ತಂತ್ರಾಂಶ ನೀತಿ ರೂಪಿಸುವಲ್ಲಿ ಹಲವು ತಜ್ಞರು ಕಾಲಕಾಲಕ್ಕೆ ಸಲಹೆಗಳನ್ನು ನೀಡುತ್ತಲೇ ಬಂದಿದ್ದಾರೆ. ಅದರಲ್ಲಿಯೂ ಕನ್ನಡ ಭಾಷಾ ಅಳವಡಿಕೆಯ ಬಗ್ಗೆ ವಿಶೇಷವಾದ ಕಳಕಳಿ ಕಾಳಜಿಗಳು ವ್ಯಕ್ತವಾಗಿವೆ. ಆದರೆ, ಕಾಲಕಾಲಕ್ಕೆ ಬಂದ ರಾಜ್ಯ ಸರಕಾರಗಳು ಇವುಗಳಿಗೆ ಸ್ಪಂದಿಸಿದ ಬಗೆ ಗಮನಿಸಿದರೆ, ತಜ್ಞ ಶಿಫಾರಸುಗಳು ಜಾರಿಗೊಂಡ ಬಗ್ಗೆ ಹುಡುಕುತ್ತಾ ಹೋದರೆ ದೊರೆಯುವ ಫಲಿತಾಂಶ ನಿರಾಸೆಯೇ. ಉತ್ತರಪ್ರದೇಶದ ಐಐಟಿ-ಕಾನ್‌ಪುರ್ ಭಾರತೀಯ ಭಾಷೆಗಳ ಕುರಿತಾಗಿ ದಶಕಗಳ ಹಿಂದೆಯೇ ಹೆಚ್ಚಿನ ಸಂಶೋಧನೆ ಕೈಗೊಂಡಿತ್ತು. ಅಲ್ಲಿ ಪ್ರಾಧ್ಯಾಪಕರಾಗಿದ್ದ ಖ್ಯಾತ ಕಂಪ್ಯೂಟರ್ ತಜ್ಞರಾದ ಕನ್ನಡಿಗ ಪ್ರೊ. ಎಚ್.ಎನ್.ಮಹಾಬಲ ಇನ್‌ಫೋಸಿಸ್ ನಾರಾಯಣಮೂರ್ತಿಯವರಂತಹ ಐಟಿ ದಿಗ್ಗಜರನ್ನು ರೂಪಿಸಿದವರು. ಮಹಾಬಲರವರು ತಮ್ಮ ನಿವೃತ್ತಿಯ ನಂತರ ಇನ್‌ಫೋಸಿಸ್‌ನ ಸಲಹೆಗಾರರಾಗಿಯೂ ಸಹ ಕಾರ್ಯನಿರ್ವಹಿಸಿದ್ದಾರೆ. ಕನ್ನಡವನ್ನು ಕಂಪ್ಯೂಟರ್‌ಗಳಲ್ಲಿ ಸಮಗ್ರವಾಗಿ ಬಳಸುವಲ್ಲಿ ಕರ್ನಾಟಕ ಸರಕಾರವು ಅನುಸರಿಸಬೇಕಾದ ನಾಲ್ಕು ಅಂಶಗಳ ಕಾರ್ಯಸೂಚಿಯನ್ನು 1998ರಲ್ಲಿಯೇ ಅವರು ಸಲಹೆ ಮಾಡಿದ್ದರು. ಕಂಪ್ಯೂಟರ್‌ಗಳನ್ನು ಬಳಸುವಲ್ಲಿ ಸರಕಾರದಲ್ಲಿ ಕಾರ್ಯನಿರ್ವಹಿಸುವ ಎಲ್ಲರಿಗೂ ತಜ್ಞರನ್ನು ಒದಗಿಸಲು ಸಾಧ್ಯವಿಲ್ಲ. ಎಲ್ಲರೂ ಕಂಪ್ಯೂಟರ್‌ಗಳನ್ನು ಬಳಸುವುದನ್ನು ಕಲಿಯಲು ಅವರಿಗೆ ತರಬೇತಿಯನ್ನು ನೀಡಬೇಕು; ಕನ್ನಡದ ಗಣಕೀಕರಣದ ಉಸ್ತುವಾರಿ ವಹಿಸಲು ತಜ್ಞರ ಒಂದು ಸ್ಥಾಯೀ ಸಮಿತಿಯನ್ನು ನೇಮಿಸಬೇಕು; ತಂತ್ರಾಂಶಗಳಿಗೆ ಶಿಷ್ಟತೆಯನ್ನು ನಿಗದಿಪಡಿಸಬೇಕು ಮತ್ತು ತಂತ್ರಾಂಶಗಳ ಮಾರಾಟಗಾರರ ಕನ್ನಡದ ತಂತ್ರಾಂಶಗಳು ಶಿಷ್ಟತೆಯ ಅನುಸಾರ ಇವೆ ಎಂಬುದರ ಪ್ರಮಾಣೀಕರಣ ವ್ಯವಸ್ಥೆಯನ್ನು ಕಲ್ಪಿಸಬೇಕು; ಕನ್ನಡ ತಂತ್ರಾಂಶ ಅಭಿವೃದ್ಧಿಗಾಗಿ ಒಂದು ನಿಧಿಯನ್ನು ಸ್ಥಾಪಿಸಬೇಕು - ಎಂಬ ನಾಲ್ಕು ಅಂಶಗಳ ಸಲಹೆಯನ್ನು ಅವರು ನೀಡಿದ್ದರು. ಈ ಸಲಹೆಗಳಲ್ಲಿ ತಂತ್ರಾಂಶ ಶಿಷ್ಟತೆ ಮತ್ತು ಪ್ರಮಾಣೀಕರಣ ವ್ಯವಸ್ಥೆಯ ಸಲಹೆಗಳು ಮಾತ್ರ ಕಾರ್ಯರೂಪಕ್ಕೆ ಬಂದವು. ಆದರೆ, ಇತರೆ ಸಲಹೆಗಳ ಕುರಿತು 1998ರಿಂದ ಇಂದಿನವರೆಗೂ ಅನೇಕ ತಜ್ಞರು, ಬೇರೆ ಬೇರೆ ವೇದಿಕೆಗಳಲ್ಲಿ ನಿರ್ಣಯಗಳನ್ನು ಕೈಗೊಂಡು, ಸರಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ, ಯಾವುದೂ ಸಹ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ.

 ಪ್ರೊ.ಎಚ್.ಎನ್. ಮಹಾಬಲ

ಕನ್ನಡ ತಂತ್ರಾಂಶ ಅಭಿವೃದ್ಧಿಗಾಗಿ ಒಂದು ಸ್ಥಾಯಿ ಸಮಿತಿಯನ್ನು ಸರಕಾರವು ರಚಿಸಬೇಕು ಎಂಬ ತೇಜಸ್ವಿಯವರ ಆಶಯವನ್ನು ಸಾಕಾರಗೊಳಿಸುವ ಪ್ರಯತ್ನವಾಗಿ ಡಾ.ಚಂದ್ರಶೇಖರ ಕಂಬಾರರು ಅಂತಹ ಸಮಿತಿಯನ್ನು ರಚಿಸುವಂತೆ ಕೋರಿ 2004ರಲ್ಲಿ ಕರ್ನಾಟಕ ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ನಾಲ್ಕು ವರ್ಷಗಳ ಕಾಲದ ಸತತ ಪ್ರಯತ್ನದ ಫಲವಾಗಿ 2008ರಲ್ಲಿ ಅಂತಹ ಸಮಿತಿಯೊಂದು ರಚನೆಯಾಯಿತು. ಅದಕ್ಕೆ ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಮತ್ತು ತಂತ್ರಾಂಶ ತಜ್ಞರಾದ ಡಾ.ಕೆ.ಚಿದಾನಂದಗೌಡರು ಅಧ್ಯಕ್ಷರಾದರು. 2010ರಲ್ಲಿ ಈ ಸಮಿತಿಯು ವರದಿಯೊಂದನ್ನು ನೀಡಿತು. ಅದರ ಅನುಷ್ಠಾನಕ್ಕಾಗಿ ಸಮಿತಿಯ ಅಧ್ಯಕ್ಷರು ಮಾಡಿದ ಪ್ರಯತ್ನಗಳು ಹಲವು. ಇವುಗಳ ಫಲವಾಗಿ ಕೆಲವೊಂದು ಶಿಫಾರಸುಗಳ ಅನುಷ್ಠಾನಗೊಂಡವು. ಆದರೂ, ಆಡಳಿತಯಂತ್ರದ ನಿಧಾನಗತಿಯಿಂದಾಗಿ ಹಾಗೂ ಮತ್ತಿತರ ಕಾರಣಗಳಿಗಾಗಿ ಬಹುತೇಕ ಮಹತ್ವದ ಶಿಫಾರಸುಗಳು ಇನ್ನೂ ಅನುಷ್ಠಾನಗೊಳ್ಳಬೇಕಾಗಿದೆ.

ಡಿಜಿಟಲ್ ಕನ್ನಡ ಕ್ಷೇತ್ರದ ಮಹತ್ವದ ನಿರ್ಧಾರದ ಕುರಿತಾಗಿ ಆದೇಶ ಹೊರಡಿಸುವಲ್ಲಿನ ಕಸರತ್ತುಗಳ ಒಂದು ಉದಾಹರಣೆ ಇಲ್ಲಿದೆ. ‘‘ಯೂನಿಕೋಡ್ ಕನ್ನಡಕ್ಕೂ ಒಂದು ಶಿಷ್ಟತೆ’’ ಎಂದು 2012ರಲ್ಲಿ ಸರಕಾರ ಆದೇಶಿಸಿತು. ಯೂನಿಕೋಡ್‌ನ್ನು ಡಿಜಿಟಲ್ ಕನ್ನಡದ ಶಿಷ್ಟತೆಯನ್ನಾಗಿ ಘೋಷಿಸುವ ಪ್ರಯತ್ನಗಳು ಸರಕಾರದಲ್ಲಿ ಫಲನೀಡಬೇಕಾದರೆ ಎರಡು ವರ್ಷಗಳ ಸತತ ಪರಿಶ್ರಮ ಅಗತ್ಯವಾಯಿತು! ಇದಕ್ಕಾಗಿ ಪತ್ರಿಕೆಗಳು ವಿಶೇಷ ಲೇಖನಗಳನ್ನು ಪ್ರಕಟಿಸಿದವು. ತಜ್ಞರು ಮತ್ತು ಪತ್ರಕರ್ತರು ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಕುಳಿತು ಚರ್ಚೆಗಳನ್ನು ಮಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ತಂತ್ರಾಂಶ ತಜ್ಞರು ಸರಕಾರಗಳನ್ನು ಒತ್ತಾಯಿಸಿದ್ದರು. ಆದೇಶ ಹೊರಡಿಸಲು ಇ-ಆಡಳಿತ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳಲ್ಲಿ ಹಲವು ಗೊಂದಲಗಳು ಏರ್ಪಟ್ಟವು. ಅಧಿಕಾರಿಗಳು ಪರಸ್ಪರ ಗೊಂದಲದ ಹೇಳಿಕೆಗಳನ್ನು ನೀಡಿದರು. ಇಲಾಖೆಗಳ ಸಮನ್ವಯದ ಕೊರತೆ, ಅಧಿಕಾರಿಗಳಲ್ಲಿ ತಂತ್ರಜ್ಞಾನ ವಿಷಯ-ಮಾಹಿತಿಗಳ ಕೊರತೆ ಇತ್ಯಾದಿಗಳ ಕಾರಣದಿಂದಾಗಿ ‘‘ಕನ್ನಡಕ್ಕೆ ಯೂನಿಕೋಡ್ ಶಿಷ್ಟತೆ’’ ಎಂದು ಆದೇಶವಾಗಲು ಎರಡು ವರ್ಷಗಳ ಕಾಲ ನಿರಂತರ ಹೋರಾಟವನ್ನೇ ಮಾಡಬೇಕಾದುದು ನಮ್ಮ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ತಂತ್ರಜ್ಞಾನದ ಭರದ ಬೀಸಿನ ನಡುವೆ, ಡಿಜಿಟಲ್ ಕ್ಷೇತ್ರದ ತಜ್ಞರ ಶಿಫಾರಸುಗಳು ದಶಕಗಳ ಕಾಲ ಪರಿಶೀಲನೆಯಲ್ಲಿವೆ ಎಂದಾದರೆ ತಂತ್ರಜ್ಞಾನದ ವೇಗಕ್ಕೆ ನಾವು ಸ್ಪಂದಿಸುವ ರೀತಿಯನ್ನು ಇದು ಎತ್ತಿತೋರುತ್ತಿದೆ. ಡಿಜಿಟಲ್ ಕನ್ನಡದ ಅನುಷ್ಠಾನದ ಹಾದಿ ಅಷ್ಟು ಸುಗಮವಾದದ್ದಲ್ಲ ಎಂಬುದು ಸಹ ಸಾಬೀತಾಗಿದೆ. ಇದು ‘ಡಿಜಿಟಲ್ ಕನ್ನಡ ಕ್ಷೇತ್ರ’ದ ಆತಂಕಕಾರಿ ಅಂಶವಾಗಿದೆ. ಅಲ್ಲದೆ, ಸರಕಾರಗಳ ಇಚ್ಛಾಶಕ್ತಿಯನ್ನೂ ಸಹ ಪ್ರಶ್ನಿಸುವಂತೆ ಮಾಡಿದೆ.

Writer - ಡಾ. ಎ. ಸತ್ಯನಾರಾಯಣ

contributor

Editor - ಡಾ. ಎ. ಸತ್ಯನಾರಾಯಣ

contributor

Similar News