ಕಾವೇರಿ ನಿರ್ವಹಣಾ ಮಂಡಳಿ ರಚಿಸಿದರೆ ಉಗ್ರ ಹೋರಾಟ: ಕೇಂದ್ರಕ್ಕೆ ವಾಟಾಳ್ ನಾಗಾರಾಜ್ ಎಚ್ಚರಿಕೆ

Update: 2018-04-01 12:55 GMT

ಬೆಂಗಳೂರು, ಎ.1: ಕಾವೇರಿ ನಿರ್ವಹಣಾ ಮಂಡಳಿ ರಚಿಸಲು ಮುಂದಾದರೆ ಕೇಂದ್ರ ಸರಕಾರ ಕರ್ನಾಟಕದ ತೀವ್ರ ವಿರೋಧ ಎದುರಿಸಬೇಕಾಗುತ್ತದೆ ಎಂದು ಕನ್ನಡ ಚಳವಳಿ ಒಕ್ಕೂಟದ ಮುಖಂಡ ವಾಟಾಳ್ ನಾಗಾರಾಜ್ ಎಚ್ಚರಿಸಿದ್ದಾರೆ.

ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಮತ್ತು ವಿರೋಧ ಪಕ್ಷ ಡಿ.ಎಂ.ಕೆ. ಪ್ರತಿಭಟನೆ ನಡೆಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಸಂಜೆವಾಣಿಗೆ ಪ್ರತಿಕ್ರಿಯೆ ನೀಡಿರುವ ಕನ್ನಡ ಪರ ಸಂಘಟನೆಗಳ ಮುಖಂಡರು ಯಾವುದೇ ಕಾರಣಕ್ಕೂ ಕಾವೇರಿ ನಿರ್ವಹಣಾ ಮಂಡಳಿ ರಚನೆಯನ್ನು ಕರ್ನಾಟಕ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.

ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ, ವಾಟಾಳ್ ನಾಗರಾಜ್ ಮಾತನಾಡಿ, ತಮಿಳುನಾಡು ನೀತಿ ವಿರುದ್ಧ ನಾಳೆ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ತಮಿಳುನಾಡು ಭೂತ ದಹನ ಮಾಡಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಗುವುದು ಎಂದರು.

ತಮಿಳುನಾಡು ಒತ್ತಡಕ್ಕೆ ಪ್ರಧಾನ ಮಂತ್ರಿಯವರು ಮಣಿಯಬಾರದು. ತಮಿಳುನಾಡು ಗಂಭೀರವಾಗಿರಬೇಕು. ಅದನ್ನು ಬಿಟ್ಟು ಒತ್ತಡದ ತಂತ್ರ ಹೇರಿದರೆ ನಾವೂ ಸಹ ಅದನ್ನೇ ಮಾಡಬೇಕಾಗುತ್ತದೆ.

ತಮಿಳುನಾಡು ಬಂದ್ ಮಾಡಿದರೆ, ತಮಿಳುನಾಡು ನೀತಿ ವಿರೋಧಿಸಿ ಕರ್ನಾಟಕ ಬಂದ್ ಮಾಡಲು ಸಿದ್ಧ ಎಂದು ವಾಟಾಳ್ ಎಚ್ಚರಿಕೆ ನೀಡಿದರು. ನಟ ರಜನಿಕಾಂತ್ ಈ ವಿಷಯದಲ್ಲಿ ಗಂಭೀರವಾಗಿರಬೇಕು. ಹಾಗೇನಾದರೂ ಮತ್ತೆ ತಮಿಳುನಾಡಿಗೆ ಬೆಂಬಲ ನೀಡಿ ಹೇಳಿಕೆ ನೀಡಿದರೆ, ರಾಜ್ಯದಲ್ಲಿ ರಜನಿಕಾಂತ್ ಸಿನಿಮಾಗಳ ಪ್ರದರ್ಶನ ರದ್ದುಪಡಿಸಲಾಗುವುದು. ರಜನಿಕಾಂತ್ ಕರ್ನಾಟಕ ಪ್ರವೇಶ ಮಾಡಿದರೆ ಘೇರಾವ್ ಹಾಕಲಾಗುತ್ತದೆ ಎಂದು ಅವರು ತಿಳಿಸಿದರು.

ವಾಟಾಳ್ ನಾಗರಾಜ್ ಅವರ ಹೇಳಿಕೆಗೆ ಒಕ್ಕೂಟದ ಸಾ.ರಾ. ಗೋವಿಂದು ಕೆ.ಆರ್. ಕುಮಾರ್, ಶಿವರಾಮೇಗೌಡ ಪ್ರವೀಣ್ ಕುಮಾರ್ ಶೆಟ್ಟಿ, ಗಿರೀಶ್ ಗೌಡ ಸೇರಿದಂತೆ ಅನೇಕ ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಮಾತನಾಡಿ, ಕಾವೇರಿ ನಿರ್ವಹಣಾ ಮಂಡಳಿ ರಚನೆಯಾದರೆ ರಾಜ್ಯದಲ್ಲಿ ಸಂಕಷ್ಟಗಳು ಎದುರಾಗುತ್ತವೆ. ಹಾಗಾಗಿ ಅದನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದರು. ಪ್ರಧಾನ ಮಂತ್ರಿಗಳು ತಮಿಳುನಾಡು ಒತ್ತಡಕ್ಕೆ ಮಣಿದು ಆತುರದ ನಿರ್ಧಾರಕ್ಕೆ ಮಂದಾದರೆ ಕರ್ನಾಟಕದಿಂದ ತೀವ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಅವರು ತಮಿಳುನಾಡಿನ ಹಠಮಾರಿ ಧೋರಣೆ ವಿರುದ್ಧ ಪ್ರತಿಭಟಿಸುವ ನಿಟ್ಟಿನಲ್ಲಿ ಸಂಘಟನೆಯ ಪ್ರಮುಖರ ಸಭೆ ನಡೆಸಿ ತೀರ್ಮಾನಿಸಿ ಎರಡು ದಿನಗಳಲ್ಲಿ ಪ್ರತಿಭಟನೆಯ ಬಿಸಿ ನೀಡಲಾಗುವುದು ಎಂದು ಹೇಳಿದರು.

ಎಐಎಡಿಎಂಕೆಯ ಶಾಸಕರು, ಸಂಸದರು ಮತ್ತು ನಾಯಕರು ತಮಿಳುನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಸೋಮವಾರ ದಿನ ಪೂರ್ತಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಜೊತೆಗೆ ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಇಂದು ಅರ್ಜಿ ಸಲ್ಲಿಸುವುದಾಗಿ ಮುಖ್ಯಮಂತ್ರಿ ಪಳನಿ ಸ್ವಾಮಿ ತಿಳಿಸಿದ್ದಾರೆ.

ಆರು ವಾರಗಳ ಗಡುವಿನ ಒಳಗೆ ಕಾವೇರಿ ನಿರ್ವಹಣಾ ಮಂಡಳಿ ರಚಿಸದ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಸಹ ತಮಿಳುನಾಡು ಸಚಿವ ಸಂಪುಟ ನಿರ್ಧರಿಸಿದೆ.

ಈ ನಡುವೆ ರೈತ ಸಂಘಟನೆಗಳು ಎ.11ರಂದು ತಮಿಳುನಾಡು ಬಂದ್ ಕರೆ ನೀಡಿವೆ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಘೋಷಣೆ ಆಗಿದ್ದು ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಜನಪ್ರತಿನಿಧಿಗಳು ಈ ಬಗ್ಗೆ ಪ್ರತಿಕ್ರಿಯಿಸುವಂತಿಲ್ಲ ಎಂಬುದನ್ನು ಅರಿತಿರುವ ತಮಿಳುನಾಡು ಸಮಯ ನೋಡಿಕೊಂಡು ದಾಳ ಉರುಳಿಸುವ ಪ್ರಯತ್ನಕ್ಕೆ ಕೈ ಹಾಕಿದೆ. ಆದರೆ, ಸರಕಾರದ ಮಟ್ಟದಲ್ಲಿ, ಉತ್ತರ ನೀಡಬಹುದಾಗಿದೆ. ಇಂತಹ ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಗಳು ತಮ್ಮ ಸ್ವಾರ್ಥಗಳನ್ನು ಕೈಬಿಟ್ಟು ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News