ಹೊಸ ಚಿಂತನಾಕ್ರಮ ರೂಪಿಸುವಲ್ಲಿ ಸಾಹಿತ್ಯ ಪತ್ರಿಕೆ ಕೊಡುಗೆ ಸ್ಮರಣೀಯ: ಆರ್.ಪೂರ್ಣಿಮಾ
ಬೆಂಗಳೂರು, ಎ.1: ಓದುಗರಲ್ಲಿ ಹೊಸ ಚಿಂತನಾಕ್ರಮವನ್ನು ರೂಪಿಸುವಲ್ಲಿ ಸಾಹಿತ್ಯ ಪತ್ರಿಕೆಗಳ ಕೊಡುಗೆ ಅಪಾರವಾಗಿದೆ. ಸಾಹಿತ್ಯ ಹಾಗೂ ಸಂಸ್ಕೃತಿಗಳ ಕುರಿತು ಸಂವಾದ, ಚರ್ಚೆಗಳಿಗೆ ಸಾಹಿತ್ಯ ಪತ್ರಿಕೆಗಳು ಉತ್ತಮ ವೇದಿಕೆಯಾಗಬಲ್ಲವು ಎಂದು ಹಿರಿಯ ಪತ್ರಕರ್ತೆ ಆರ್.ಪೂರ್ಣಿಮಾ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ಆಕೃತಿ ಪುಸ್ತಕ ಮಳಿಗೆಯಲ್ಲಿ ಆಯೋಜಿಸಿದ್ದ ಸಾಹಿತಿ ಟಿ.ಎಸ್.ಗೊರವರ ಸಂಪಾಕತ್ವದಲ್ಲಿ ನೂತನವಾಗಿ ಮೂಡಿಬರುತ್ತಿರುವ ‘ಸಂಗಾತ ತ್ರೈ ಮಾಸಿಕ ಸಾಹಿತ್ಯ’ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಾಹಿತ್ಯ ಪತ್ರಿಕೆಗಳ ದೊಡ್ಡ ಪರಂಪರೆಯಿದೆ. ಹಿರಿಯ ಸಾಹಿತಿಗಳಾದ ಗೋಪಾಲಕೃಷ್ಣ ಅಡಿಗರು, ಅನಂತಮೂರ್ತಿ, ಜಿ.ಎಸ್.ಶಿವರುದ್ರಪ್ಪ ಸೇರಿದಂತೆ ಹಲವು ಸಾಹಿತಿಗಳು ಸಾಹಿತ್ಯ ಪತ್ರಿಕೆಗಳನ್ನು ರೂಪಿಸುವ ಮೂಲಕ ಹೊಸ ಬರಹಗಾರರನ್ನು ಸಾಹಿತ್ಯ ಕ್ಷೇತ್ರಕ್ಕೆ ಪರಿಚಯಿಸಿದ್ದಾರೆ ಎಂದು ಅವರು ಸ್ಮರಿಸಿದರು.
ನಾವು ಎಂಎ ವಿದ್ಯಾಭ್ಯಾಸ ಮಾಡುವಾಗ ‘ಸಾಕ್ಷಿ’ ಪತ್ರಿಕೆಯನ್ನು ಓದುವುದು ನಮ್ಮ ಕಲಿಕೆಯ ಒಂದು ಭಾಗವಾಗಿತ್ತು. ಅದರಲ್ಲಿ ಪ್ರಕಟಗೊಳ್ಳುತ್ತಿದ್ದ ಲೇಖನಗಳು ನಮ್ಮ ಅರಿವನ್ನು ಹೆಚ್ಚಿಸುತ್ತಿದ್ದವು. ಇದರ ಜೊತೆಗೆ ಜಿ.ಎಸ್.ಶಿವರುದ್ರಪ್ಪ ಮುಂದಾಳತ್ವದಲ್ಲಿ ರೂಪಿತಗೊಳ್ಳುತ್ತಿದ್ದ ‘ಸಾಧನೆ’ ಸಾಹಿತ್ಯ ಪತ್ರಿಕೆಯು ನಮ್ಮ ಬರವಣಿಗೆಗೆ ವೇದಿಕೆಯಾಗಿತ್ತು. ವಿದ್ಯಾರ್ಥಿಗಳಿಂದ ಲೇಖನಗಳನ್ನು ಬರೆಯಿಸಿ ಪ್ರಕಟಿಸುತ್ತಿದ್ದರು ಎಂದು ಪತ್ರಕರ್ತೆ ಆರ್.ಪೂರ್ಣಿಮಾ ಸ್ಮರಿಸಿದರು.
ಯುವ ಸಾಹಿತಿ ಟಿ.ಎಸ್.ಗೊರವರ ಸಂಪಾದಕತ್ವದಲ್ಲಿ ನೂತನವಾಗಿ ಹೊರಬರುತ್ತಿರುವ ಸಂಗಾತ ತ್ರೈಮಾಸಿಕ ಪತ್ರಿಕೆ ವಿಶಿಷ್ಟವಾಗಿ ಮೂಡಿಬರಲಿ. ಆ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹೊಸ ಚಿಂತನಾ ಕ್ರಮ ಹಾಗೂ ಹೊಸ ಬರಹಗಾರರನ್ನು ಸಂಗತಾ ಪತ್ರಿಕೆಯು ಕೊಡುಗೆಯಾಗಿ ನೀಡಲಿ ಎಂದು ಅವರು ಶುಭ ಹಾರೈಸಿದರು.
ಲೇಖಕ ಶಶಿಕುಮಾರ್ ಮಾತನಾಡಿ, ಇವತ್ತಿನ ಯುವ ಬರಹಗಾರರು ಈವರೆಗಿನ ಎಲ್ಲ ಸಾಹಿತ್ಯ ಪ್ರಕಾರಗಳನ್ನು ಕಳಚಿಕೊಂಡು ಭಿನ್ನವಾಗಿ ಬರೆಯುತ್ತಿದ್ದಾರೆ. ಇಂತಹ ಬರಹಗಳನ್ನು, ಬರಹಗಾರರನ್ನು ಸಾಹಿತ್ಯ ಕ್ಷೇತ್ರದ ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಸಾಹಿತ್ಯ ಪತ್ರಿಕೆಯಾದ ಸಂಗಾತ ಕಾರ್ಯನಿರ್ವಹಿಸಲಿ ಎಂದು ಆಶಿಸಿದರು.
ಇವತ್ತಿನ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಡಿಜಿಟಲ್ ಮಾಧ್ಯಮ ಮುನ್ನೆಲೆಗೆ ಬಂದಿವೆ. ಜಗತ್ತಿನಲ್ಲಿರುವ ಎಲ್ಲ ವಿಷಯಗಳನ್ನು ಕ್ಷಣ ಮಾತ್ರದಲ್ಲಿ ಡಿಜಿಟಲ್ ಮಾಧ್ಯಮದ ಮೂಲಕ ನೋಡಬಹುದಾಗಿದೆ. ಇಂತಹ ಸಂದರ್ಭದಲ್ಲಿ ಸಾಹಿತ್ಯ ಪತ್ರಿಕೆಯೊಂದನ್ನು ನಡೆಸುವುದು ಸವಾಲಿನ ಸಂಗತಿಯಾಗಿದೆ. ಇವೆಲ್ಲವನ್ನು ನಿಭಾಹಿಸಿ ಸಾಹಿತ್ಯ ಪತ್ರಿಕೆಯನ್ನು ನಿರಂತರವಾಗಿ ತರುವ ನಿಟ್ಟಿನಲ್ಲಿ ಸರಿಯಾದ ಯೋಜನೆಯನ್ನು ಹಮ್ಮಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಸಂಚಯ ಪತ್ರಿಕೆಯ ಸಂಪಾದಕ ಡಿ.ವಿ.ಪ್ರಹ್ಲಾದ್ ಮಾತನಾಡಿ, ನಾನು 30ವರ್ಷಗಳಿಗೂ ಹೆಚ್ಚು ಕಾಲ ಸಂಚಯ ಸಾಹಿತ್ಯ ಪತ್ರಿಕೆಯನ್ನು ಹೊರ ತಂದಿದ್ದೇನೆ. ಸಾಹಿತ್ಯ ಕ್ಷೇತ್ರದಲ್ಲಿನ ಪ್ರೀತಿಯಿಂದಾಗಿ ಇಷ್ಟು ಸುದೀರ್ಘಕಾಲ ಸಾಹಿತ್ಯ ಪತ್ರಿಕೆಯನ್ನು ಹೊರತರಲು ಸಾಧ್ಯವಾಯಿತು ಎಂದು ತಿಳಿಸಿದರು.
ಮಾಸಿಕ ಹಾಗೂ ತ್ರೈಮಾಸಿಕದಂತಹ ಸಾಹಿತ್ಯ ಪತ್ರಿಕೆಗಳು ನಿರಂತರವಾಗಿ ಮುನ್ನಡೆಸಲು ಚಂದಾದಾರರು ಮುಖ್ಯರಾಗುತ್ತಾರೆ. ಪತ್ರಿಕೆಗೆ ಚಂದಾದಾರರನ್ನು ಮಾಡಿಸುವುದು ಅಷ್ಟು ಸುಲಭವಲ್ಲ. ಕನಿಷ್ಟ ಎರಡು ವರ್ಷಗಳ ಕಾಲ ಪತ್ರಿಕೆ ನಿಲ್ಲದಂತೆ ಮುನ್ನಡೆಸಿದರೆ ಚಂದಾದಾರರು ಪತ್ರಿಕೆಯತ್ತ ಒಲವು ತೋರುತ್ತಾರೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸಂಗಾತ ತ್ರೈಮಾಸಿಕ ಪತ್ರಿಕೆಯ ಟಿ.ಎಸ್.ಗೊರವರ, ಸಂಶೋಧಕ ಸುರೇಶ್ ನಾಗಲಮಡಿಕೆ, ಕವಿ ಗಿರೀಶ್ ಹಂದಲಗೆರೆ, ಬರಹಗಾರ ನರಸಿಂಹಮೂರ್ತಿ ಮತ್ತಿತರರಿದ್ದರು.