×
Ad

ಪೌರಾಣಿಕ ನಾಟಕಕ್ಕೆ ಪ್ರಾಯೋಜಕತ್ವ ಅಗತ್ಯ: ಗೃಹ ಸಚಿವ ರಾಮಲಿಂಗಾರೆಡ್ಡಿ

Update: 2018-04-01 18:40 IST

ಬೆಂಗಳೂರು, ಎ.1: ಪೌರಾಣಿಕ ನಾಟಕಗಳ ಕುರಿತು ಜನತೆ ನಿರಾಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಸರಕಾರದ ಸಂಘ, ಸಂಸ್ಥೆಗಳು ಪ್ರಾಯೋಜಕತ್ವ ನೀಡಿ ನಾಟಕಗಳನ್ನು ಯುವ ತಲೆಮಾರಿಗೆ ತಲುಪಿಸುವ ಅಗತ್ಯವಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಕನ್ನಡ ಮತ್ತು ಸಂಸ್ಕತಿ ಇಲಾಖೆ ಹಾಗೂ ಪರಂಪರಾ ಕಲ್ಚರಲ್ ಫೌಂಡೇಶನ್ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಪರಂಪರಾ ಪುರಸ್ಕಾರ, ರಂಗಗೀತೆ, ನಾಟಕ ಪ್ರದರ್ಶನ ಮುಂತಾದ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ದಿನಗಳಲ್ಲಿ ಪೌರಾಣಿಕ ನಾಟಕಗಳನ್ನು ವೀಕ್ಷಿಸಲು ಮನೆಮಂದಿಯಲ್ಲ ಬರುತ್ತಿದ್ದರು. ಅದನ್ನು ನೆನೆಯುವುದೆ ಪರಮಹಾನಂದ ಎಂದು ಸಂತಸ ವ್ಯಕ್ತಪಡಿಸಿದರು.

ಇವತ್ತು ಎಲ್ಲರ ಮನೆಗಳಲ್ಲಿ ಟಿವಿಗಳಿವೆ. ಪ್ರತಿಯೊಬ್ಬರ ಕೈಯಲ್ಲಿ ಮೊಬೈಲ್‌ಗಳಿವೆ. ಅವುಗಳಲ್ಲಿ ದಿನಪೂರ್ತಿ ಕಾರ್ಯಕ್ರಮಗಳು ಬರುತ್ತವೆ. ಹೀಗಾಗಿ ರಂಗಭೂಮಿಯತ್ತ ಜನತೆ ಬರುವುದು ಕಡಿಮೆ ಮಾಡಿದ್ದಾರೆ. ಆದರೆ, ರಂಗಭೂಮಿಯ ವಿಶಿಷ್ಟತೆಯನ್ನು ಯುವ ತಲೆಮಾರಿಗೆ ತಲುಪಿಸುವುದು ನಮ್ಮ ಕರ್ತವ್ಯವಾಗಿದ್ದು, ಸಂಘ ಸಂಸ್ಥೆಗಳು ಇಂತಹ ನಾಟಕಗಳಿಗೆ ಪ್ರಾಯೋಜಕತ್ವ ನೀಡಬೇಕು ಎಂದು ಅವರು ಹೇಳಿದರು.

ರಂಗ ವಿಮರ್ಶಕ ರುದ್ರೇಶ್ ಅದರಂಗಿ ಮಾಗನಾಡಿ, ಹವ್ಯಾಸಿ ರಂಗ ಚಟುವಟಿಕೆಗಳ ಬೆಳವಣಿಗೆಯಲ್ಲಿ ಕಾಲೇಜು ಹಾಗೂ ಕಾರ್ಮಿಕ ರಂಗಭೂಮಿ ಬಹುದೊಡ್ಡ ಕೊಡುಗೆ ನೀಡಿವೆ. ಎಚ್‌ಎಎಲ್ ಹಿನ್ನೆಲೆಯ ಪರಂಪರಾ ಸಂಸ್ಥೆಯು ಜಿ.ಪಿ.ರಾಮಣ್ಣನವರ ನೇತೃತ್ವದಲ್ಲಿ ಶ್ರಮಿಕ ರಂಗಭೂಮಿಯನ್ನು  ಜೀವಂತವಾಗಿಟ್ಟಿದೆ ಎಂದು ಪ್ರಶಂಸಿಸಿದರು.

ಹಿರಿಯ ರಂಗಕಲಾವಿದೆ ಯಮುನಾಮೂರ್ತಿ ಹಾಗೂ ರಂಗನೇಪಥ್ಯ ಸಂಪಾದಕ, ರಂಗಕರ್ಮಿ ಗುಡಿಹಳ್ಳಿ ನಾಗರಾಜಗೆ ಪರಂಪರಾ ಪುರಸ್ಕಾರ ಪ್ರಶಸ್ತಿಯನ್ನು ನೀಡಿ ಗೌರಸಿದರು. ಇಂಡಿಯನ್ ಸೊಸೈಟಿ ಫಾರ್ ಟ್ರಡಿಷನಲ್ ಆರ್ಟ್ಸ್ ಅಂಡ್ ಲಿಟರೇಚರ್‌ನ ಅಧ್ಯಕ್ಷ ಜಿ.ಸೆಲ್ವಕುಮಾರ್, ನಗರಪಾಲಿಕೆ ಮಾಜಿ ಸದಸ್ಯ ಎಂ.ಮುನಿರಾಜು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News