ಪೊಲೀಸರ ಮೇಲೆ ದಾಳಿಗೆ ಯತ್ನ: ಕಾಲಿಗೆ ಗುಂಡು ಹಾರಿಸಿ ರೌಡಿಯ ಬಂಧನ
ಬೆಂಗಳೂರು, ಎ. 1: ಕೊಲೆ, ಕೊಲೆಯತ್ನ, ಹಲ್ಲೆ, ದರೋಡೆ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ರೌಡಿಯ ಬಂಧನ ಕಾರ್ಯಾಚರಣೆ ವೇಳೆ, ಪೊಲೀಸರ ಮೇಲೆ ಪಿಸ್ತೂಲ್‌ನಿಂದ ಗುಂಡು ಹಾರಿಸಲು ಯತ್ನಿಸಿದ ರೌಡಿ ಮತ್ತು ಆತನ ಸಹಚರನ ಕಾಲಿಗೆ ಗುಂಡು ಹಾರಿಸಿದ ತಲಘಟ್ಟಪುರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರನ್ನು ರೌಡಿ, ಕೆಂಬತ್ತಹಳ್ಳಿಯ ಪರಮೇಶ್ (30) ಹಾಗೂ ಆತನ ಸಹಚರ ಸಂತೋಷ್ (25) ಎಂದು ಗುರುತಿಸಲಾಗಿದೆ. ಇಬ್ಬರ ಕಾಲಿಗೆ ಗುಂಡು ತಗುಲಿದ್ದು, ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಲಘಟ್ಟಪುರ ಹಾಗೂ ಕಗ್ಗಲೀಪುರ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿದ್ದ ಪರಮೇಶ್ ತನ್ನ ಸಹಚರರ ರೌಡಿ ಸಂತೋಷ್ ಜೊತೆ ನೈಸ್ ರಸ್ತೆಯ ಬಳಿ ರವಿವಾರ ಬೆಳಗಿನ ಜಾವ ಕಾರಿನಲ್ಲಿ ಹೋಗುತ್ತಿದ. ಈ ಬಗ್ಗೆ ಸಿಕ್ಕ ಖಚಿತ ಮಾಹಿತಿ ಆಧರಿಸಿದ ತಲಘಟ್ಟಪುರ ಪೊಲೀಸ್ ಇನ್ಸ್‌ಪೆಕ್ಟರ್ ಶಿವಸ್ವಾಮಿ, ಸಬ್ ಇನ್ಸ್‌ಪೆಕ್ಟರ್ ಶ್ರೀನಿವಾಸ್ ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆ ನಡೆಸಿದೆ ಎಂದು ಗೊತ್ತಾಗಿದೆ.
ತಲಘಟ್ಟಪುರದ ನೈಸ್‌ರಸ್ತೆ ಬಳಿ ಬೆಳಗಿನ ಜಾವ 6.30ರ ಸುಮಾರಿಗೆ ಕಾರನ್ನು ಪೊಲೀಸ್ ವಿಶೇಷ ತಂಡದ ಮುಖ್ಯಪೇದೆ ಸುರೇಶ್, ಪೇದೆ ನೇಮಿನಾಥ್ ಬಂಧಿಸಲು ತೆರಳಿದ್ದು, ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಗೊತ್ತಾಗಿದೆ.
ಸಬ್ ಇನ್ಸ್‌ಪೆಕ್ಟರ್ ಶ್ರೀನಿವಾಸ್ ಹಾರಿಸಿದ ಗುಂಡುಗಳು ಇಬ್ಬರ ಕಾಲಿಗೆ ತಗುಲಿ ಸ್ಥಳದಲ್ಲಿ ಕುಸಿದು ಬಿದ್ದಿದ್ದಾರೆ. ಕೂಡಲೆ ಅವರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು, ಅವರ ಬಳಿಯಿದ್ದ ಪಿಸ್ತೂಲ್, ಮಾರಕಾಸ್ತ್ರಗಳು ಕಾರನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರೌಡಿಗಳ ಹಲ್ಲೆಯಿಂದ ಗಾಯಗೊಂಡಿರುವ ಪೇದೆಗಳಾದ ಸುರೇಶ್ ಹಾಗೂ ನೇಮಿನಾಥ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಡಿಸಿಪಿ ಡಾ.ಎಸ್.ಡಿ.ಶರಣಪ್ಪಭೇಟಿ ನೀಡಿ ಪರಿಶೀಲಿನೆ ನಡೆಸಿದ್ದಾರೆ. ಈ ಸಂಬಂಧ ತಲಘಟ್ಟಪುರ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.