ಸಿದ್ದರಾಮಯ್ಯ ತಪ್ಪು ದಾರಿಯಲ್ಲಿ ನಡೆಯುತ್ತಿದ್ದಾರೆ: ಕೇಂದ್ರ ಸಚಿವ ರವಿಶಂಕರ್ ಪ್ರಸಾದ್
ಬೆಂಗಳೂರು, ಎ.1: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಜನರ ಮನ ಗೆಲ್ಲುವಲ್ಲಿ ವಿಫಲವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಪ್ಪು ದಾರಿಯಲ್ಲಿ ಸಾಗುತ್ತಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ, ಸಿಎಂರನ್ನು ನಿಯಂತ್ರಿಸುವಲ್ಲಿ ಸೋತಿದ್ದಾರೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.
ರವಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ಪಕ್ಷದ 2018 ರ ವಿಧಾನಸಭಾ ಚುನಾವಣೆಗೆ ನೂತನ ಮಾಧ್ಯಮ ಕೇಂದ್ರ ಉದ್ಘಾಟನೆ ಹಾಗೂ ಕಾಂಗ್ರೆಸ್ ವಿರುದ್ಧ ಚಾರ್ಜ್ ಶೀಟ್ ಬಿಡುಗಡೆ ಮಾಡಿ ಮಾತನಾಡಿದ ಅವರು, ದೇಶದ 17 ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿದೆ. ಇತ್ತೀಚಿಗೆ ನಡೆದ ತ್ರಿಪುರ ಮತ್ತು ನಾಗಾಲ್ಯಾಂಡ್ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ. ನಾಗಾಲ್ಯಾಂಡ್‌ನಲ್ಲಿ ಬಹುತೇಕ ಕ್ರೈಸ್ತ ಸಮುದಾಯವಿದ್ದು, ಅಲ್ಲಿ ಬಿಜೆಪಿ 26 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ಶೋಚನೀಯ ಸ್ಥಿತಿಗೆ ತಲುಪಿದೆ ಎಂದು ಲೇವಡಿ ಮಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತ ನಡೆಸಲು ಅರ್ಹತೆ ಇಲ್ಲ. ರಾಜ್ಯದ ಜನರಿಗೆ ಅಗ್ಯವಿರುವ ಯಾವುದೇ ಯೋಜನೆಗಳನ್ನು ಜಾರಿ ಮಾಡುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. 10 ವರ್ಷ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗಲೂ ಏನು ಅಭಿವೃದ್ಧಿ ಕಾರ್ಯಗಳು ಆಗಿರಲಿಲ್ಲ. ಆದರೆ, ಈಗ ಬೆಂಗಳೂರಿಗೆ ಮೆಟ್ರೋ ಸೇರಿ ಕರ್ನಾಟಕ ಅಭಿವೃದ್ಧಿ ರಾಜ್ಯವಾಗಿ ಹೊರಹೊಮ್ಮುತ್ತಿದೆ. ಅದಕ್ಕೆ ಕಾರಣ ಸಿದ್ದರಾಮಯ್ಯ ಸರಕಾರವಲ್ಲ, ಹಿಂದಿನ ಬಿಜೆಪಿ ಸರಕಾರದ ಕಾರಣ ಎಂದು ಹೇಳಿದರು.
ಕೇಂದ್ರ ಸಚಿವ ಸದಾನಂದಗೌಡ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ರಾಜ್ಯ ಕಾಂಗ್ರೆಸ್ ಸರಕಾರ ಐದು ವರ್ಷಗಳಲ್ಲಿ ಜನವಿರೋಧಿ ಆಡಳಿತ ರಾಜ್ಯದ ಜನರಿಗೆ ನೀಡಿದೆ. 22 ರಾಜಕೀಯ ಪ್ರೇರಿತ ಕೊಲೆಗಳು ನಡೆದಿವೆ. ಆದರೆ, ಸರಕಾರ ಹಾಗೂ ಗೃಹ ಇಲಾಖೆ ಕೊಲೆಗಳನ್ನು ನಿಯಂತ್ರಿಸಲು ಯಾವುದೇ ಕಾನೂನು ರೂಪಿಸಿಲ್ಲ. ಅಲ್ಲದೆ, ಕೊಲೆ ಮಾಡಿದವರನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಸಿಎಂ ವರುಣಾದಿಂದ ಗೆದ್ದು ಬರಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಗೆದ್ದು ಬರಲಿ ನೋಡೋಣ ಎಂದು ಸವಾಲು ಹಾಕಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಿಎಂ ಪುತ್ರನನ್ನು ಚಾಮುಂಡೇಶ್ವರಿ ಕ್ಷೇತ್ರದಿಂದ ಸಿದ್ದರಾಮಯ್ಯ ಗೆಲ್ಲಿಸಲಿ ನೋಡೋಣ ಎಂದು ಬಹಿರಂಗವಾಗಿ ಸವಾಲು ಹಾಕಿದರು.
ಅನ್ನಕೊಟ್ಟ ರೈತನಿಗೆ ನೋವು ಕೊಟ್ಟ ಕಾಂಗ್ರೆಸ್ ಹೆಸರಿನ 22ಪುಟಗಳ ಚಾರ್ಜ್ ಶೀಟ್‌ನಲ್ಲಿ ಕೃಷಿ ಬಿಕ್ಕಟ್ಟಿನ ಕರಾಳಯುಗ, ಏರುಗತಿಯಲ್ಲಿ ರೈತರ ಆತ್ಮಹತ್ಯೆ, ದುಡ್ಡು ಹರಿದರೂ ಹೊಲಕ್ಕೆ ಬರಲಿಲ್ಲ ನೀರು, ಸಣ್ಣ ನೀರಾವರಿಯಲ್ಲಿ ಭ್ರಷ್ಟಾಚಾರ, ನೀರು ಕೇಳಿದವರಿಗೆ ಸಿಕ್ಕಿದ್ದು ಬೆತ್ತದ ರುಚಿ, ವರ್ಷಗಳೇ ಕಳೆದರೂ ಸಿಗದ ಸಬ್ಸಿಡಿ, ರೈತ ಮಾರುಕಟ್ಟೆಯ ಅನಾಹುತಗಳು ಹಾಗೂ ‘ಸಿದ್ದರಾಮಯ್ಯ ಸರಕಾರ ಬೆಂಗಳೂರಿಗೆ ಸಂಚಕಾರ’ದಲ್ಲಿ ಬೆಂಗಳೂರು ಅವ್ಯವಸ್ಥೆ ಹಾಗೂ ‘ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಅಧೋಗತಿ’ ಹೆಸರಿನ ಚಾರ್ಜ್‌ಶೀಟ್‌ನಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲದಿರುವುದು ಸೇರಿದಂತೆ ಅನೇಕ ಅಂಶಗಳನ್ನು ಪ್ರಸ್ಥಾಪಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಪಿ.ಸಿ.ಮೋಹನ್, ಅವಿನಾಶ್ ಮಾಳವಿಕಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಚಾರ್ಜ್‌ಶೀಟ್‌ನಲ್ಲಿ ಎಡವಟ್ಟು
‘ಬಿಜೆಪಿ ಪ್ರಕಟಿಸಿರುವ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಅಧೋಗತಿ ಹೆಸರಿನ 26 ಪುಟಗಳ ಪುಸ್ತಕದ ಚಾರ್ಜ್‌ಶೀಟ್‌ನ 7ನೆ ಪುಟದಲ್ಲಿ ಕಾಂಗ್ರೆಸ್ ಶಾಸಕ ಮುನಿರತ್ನ ಬೆಂಬಲಿಗರು ಜೆಡಿಎಸ್ ಬಿಬಿಎಂಪಿ ಸದಸ್ಯೆ ಮಂಜುಳಾ ನಾರಾಯಣಸ್ವಾಮಿಗೆ ಸೀರೆ ಎಳೆದಾಡಿದ ಪ್ರಕರಣಕ್ಕೆ ಸಂಬಂಧಿಸಿದ ವಿಷಯಕ್ಕೆ ಮಂಜುಳಾ ನಾರಾಯಣಸ್ವಾಮಿ ಫೋಟೋ ಬದಲಿಗೆ ಮಂಗಳೂರಿನ ಕಾರ್ಪೋರೇಟರ್ ಪ್ರತಿಭಾ ಕುಲಾಯಿ ಅವರ ಭಾವಚಿತ್ರ ಬಳಕೆ ಮಾಡಲಾಗಿದೆ’ಅಕ್ರಮಕ್ಕೆ ಇಂದಿರಾ ಕ್ಯಾಂಟೀನ್ ಸ್ಥಾಪನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿ ಕಾರ್ಯ ನಿರ್ವಹಿಸುತ್ತಿರುವ ಇಂದಿರಾ ಕ್ಯಾಂಟೀನ್‌ಗಳನ್ನು ಹಸಿದವರಿಗೆ ಅನ್ನ ಕೊಡುತ್ತೇವೆ ಎಂಬ ಆಶ್ವಾಸನೆಯಲ್ಲಿ ಇಂದಿರಾ ಕ್ಯಾಂಟೀನ್ ಹುಟ್ಟಿಕೊಂಡಿದೆ. ಆದರೆ, ಅಕ್ರಮ ಮಾಡುವ ಉದ್ದೇಶದಿಂದಲೇ ಕ್ಯಾಂಟೀನ್ ಸ್ಥಾಪನೆ ಮಾಡಲಾಗಿದೆ ಎಂಬ ಸಂದೇಶವಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಆರೋಪಿಸಲಾಗಿದೆ.