×
Ad

ಜಿಸ್ಯಾಟ್ ಉಪಗ್ರಹದೊಂದಿಗೆ ಸಂಪರ್ಕ ಕಳೆದುಕೊಂಡ ಇಸ್ರೊ

Update: 2018-04-01 20:03 IST

ಬೆಂಗಳೂರು, ಎ. 1: ಮಾರ್ಚ್ 29ರಂದು ಉಡಾಯಿಸಲಾದ ಜಿಸ್ಯಾಟ್-6ಎ ಉಪಗ್ರಹದೊಂದಿಗಿನ ಸಂಪರ್ಕ ಕಡಿತಗೊಂಡಿದೆ ಎಂದು ಇಸ್ರೊ ರವಿವಾರ ಹೇಳಿದೆ. ಈ ಉಪಗ್ರಹದೊಂದಿಗೆ ಸಂಪರ್ಕ ಸ್ಥಾಪಿಸಲು ಪ್ರಯತ್ನ ನಡೆಯುತ್ತಿದೆ ಎಂದು ಇಸ್ರೊ ಹೇಳಿದೆ.

260 ಕೋ. ರೂ. ವೆಚ್ಚ ಹಾಗೂ 2140 ಕೆ.ಜಿ. ತೂಕದ ಸ್ವದೇಶಿ ನಿರ್ಮಿತ ಉಪಗ್ರಹ ಜಿಸ್ಯಾಟ್-6ಎ ಶನಿವಾರ ಬೆಳಗಿನ ವರೆಗೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುವುದನ್ನು ಗಮನಿಸಲಾಗಿತ್ತು. ಅದೇ ದಿನ ಅಂದರೆ, ಮಾರ್ಚ್ 31ರಂದು ಬೆಳಗ್ಗೆ ಲಿಕ್ವಿಡ್ ಅಪೋಜಿ ಮೋಟರ್ (ಎಲ್‌ಎಎಂ) ಅನ್ನು 53 ನಿಮಿಷಗಳ ಕಾಲ ಉರಿಸುವ ಮೂಲಕ ಜಿಎಸ್‌ಎಟಿ-6ಎಯನ್ನು ಎರಡನೇ ಕಕ್ಷೆಗೆ ಏರಿಸುವ ಕಾರ್ಯಾಚರಣೆ ಯಶಸ್ವಿಯಾಗಿ ನಡೆದಿತ್ತು. ಉಪಗ್ರಹವನ್ನು ಮುನ್ನುಗ್ಗಿಸುವ ಮೂರನೆ ಹಾಗೂ ಅಂತಿಮ ಹಂತ ಎಪ್ರಿಲ್ 1ರಂದು ನಿಗದಿಯಾಗಿತ್ತು. ಈ ಸಂದರ್ಭ ಉಪಗ್ರಹದೊಂದಿಗಿನ ಸಂಪರ್ಕ ಕಡಿತಗೊಂಡಿದೆ ಎಂದು ಇಸ್ರೊ ತನ್ನ ವೆಬ್‌ಸೈಟ್‌ನಲ್ಲಿ ಹೇಳಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜಿಸ್ಯಾಟ್-6ಎ ಉಪಗ್ರಹವನ್ನು ಹೊತ್ತಿದ್ದ ಭೂಸ್ಥಿರ ರಾಕೆಟ್ (ಜಿಎಸ್‌ಎಲ್‌ವಿ- ಎಫ್08) ಗುರುವಾರ ಆಕಾಶಕ್ಕೆ ನೆಗೆದಿತ್ತು. ಹಾಗೂ ಕಕ್ಷೆಯಲ್ಲಿ ನೆಲೆಗೊಳ್ಳುವುದರಲ್ಲಿ ಯಶಸ್ವಿಯಾಗಿತ್ತು.

ಕೈಯಿಂದಲೇ ನಿರ್ವಹಿಸಬಹುದಾದ ಭೂ ಟರ್ಮಿನಲ್‌ಗಳ ಮೂಲಕ ತೀರ ದುರ್ಗಮ ಪ್ರದೇಶದಲ್ಲೂ ಮೊಬೈಲ್ ಸಂವಹನಕ್ಕೆ ಈ ಉಪಗ್ರಹ ನೆರವಾಗಲಿತ್ತು. ಕಕ್ಷೆಗೇರಿಸುವ ಕಾರ್ಯಾಚರಣೆ ಬಗ್ಗೆ ಇಸ್ರೊ ಸಾಮಾನ್ಯವಾಗಿ ತನ್ನ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿದಂತೆ ಮಾರ್ಚ್ 30ರಂದು ಪ್ರಥಮ ಕಕ್ಷೆಗೇರಿಸುವ ಕಾರ್ಯಾಚರಣೆಯ ಯಶಸ್ವಿಯಾಗಿರುವುದರ ಬಗ್ಗೆ ಮಾಹಿತಿ ನೀಡಿತ್ತು. ಅನಂತರ ಯಾವುದೇ ಮಾಹಿತಿ ನೀಡಿರಲಿಲ್ಲ.

ಜನವರಿ ಇಸ್ರೊದ ಉಸ್ತುವಾರಿ ವಹಿಸಿಕೊಂಡ ಬಳಿಕದ ಶಿವನ್ ಅವರ ಮೊದಲ ಉಪಗ್ರಹ ಉಡಾವಣೆ ಇದಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News