ಚಾಲನಾ ಪರವಾನಗಿಯೊಂದಿಗೆ ಆಧಾರ್ ಜೋಡಣೆ ಅಗತ್ಯ: ಕೇಂದ್ರ ಸಚಿವ ರವಿಶಂಕರ್ ಪ್ರಸಾದ್

Update: 2018-04-01 17:57 GMT

ಬೆಂಗಳೂರು, ಎ. 1: ದ್ವಿಚಕ್ರ ವಾಹನ ಪರವಾನಗಿಯೊಂದಿಗೆ ಆಧಾರ್ ಜೋಡಣೆ ಮಾಡಬೇಕು. ಇದರಿಂದ ಅಪಘಾತಗಳಿಂದ ತಪ್ಪಿಸಿಕೊಂಡು ಮತ್ತೊಂದು ರಾಜ್ಯದಲ್ಲಿ ಪರವಾನಗಿ ಪಡೆಯಲು ಅವಕಾಶವಿರಬಾರದು ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

ರವಿವಾರ ಇಲ್ಲಿನ ಮಹದೇವಪುರ ಕ್ಷೇತ್ರದಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನಮೋಹನ್ ಸಿಂಗ್ ಸರಕಾರ 358 ಕಿ.ಮೀ ಆಪ್ಟಿಕಲ್ ಫೈಬರ್ ಅಳವಡಿಸಿತ್ತು. ಆದರೆ ಮೋದಿ ಸರಕಾರ ಮೂರುವರೆ ವರ್ಷಗಳಲ್ಲಿ 3ಲಕ್ಷಕ್ಕೂ ಹೆಚ್ಚು ಕಿ.ಮೀ ಆಪ್ಟಿಕಲ್ ಫೈಬರ್‌ಗಳ ಅಳವಡಿಸಿದೆ ಎಂದ ಅವರು, ಯುಪಿಎ ಸರಕಾರದ ಆಧಾರ್‌ಗೆ ಯಾವುದೇ ಕಾನೂನಿನ ರಕ್ಷಣೆ ಇರಲಿಲ್ಲ. ಆದರೆ ನಮ್ಮ ಸರಕಾರ ಕಾನೂನಿನ ರಕ್ಷಣೆ ನೀಡಿದೆ ಎಂದರು.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಒಂದು ಸಾರ್ವಜನಿಕ ಹೇಳಿಕೆ ನೀಡಿದ್ದರು. ನಾನು ಸರಕಾರದಿಂದ ಒಂದು ರೂ.ಕಳಿಸಿದರೆ ಜನಸಾಮಾನ್ಯನಿಗೆ ಕೇವಲ 15 ಪೈಸೆ ತಲುಪುತ್ತದೆ ಎಂದಿದ್ದರು. ಆದರೆ, ನಮ್ಮ ಸರಕಾರ 1 ಸಾವಿರ ರೂ. ನೀಡಿದರೆ ಪೂರ್ತಿ 1 ಸಾವಿರ ರೂ. ನಿಮ್ಮ ಖಾತೆಗೆ ತಲುಪುತ್ತದೆ ಎಂದು ಹೇಳಿದರು.

ನಮ್ಮ ಸರಕಾರ ಬಂದ ನಂತರ 120 ಕಂಪೆನಿಗಳು ಆರಂಭವಾಗಿದ್ದು, 39.68 ಲಕ್ಷ ಜನರು ನೇರವಾಗಿ ಐಟಿ ಕ್ಷೇತ್ರದಲ್ಲಿ ಉದ್ಯೋಗಿಗಳಾಗಿದ್ದಾರೆ ಎಂದ ಅವರು, ಸಾರ್ಟ್ ಅಪ್ ಕಂಪೆನಿಗಳ ಆರಂಭಕ್ಕೆ ಐಟಿ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಅರವಿಂದ ಲಿಂಬಾವಳಿ, ನನ್ನ ಕ್ಷೇತ್ರ ವ್ಯಾಪ್ತಿಯ ಹೊರ ವರ್ತುಲ ರಸ್ತೆಯೊಂದರಲ್ಲೆ ಅಮೆರಿಕಾದಲ್ಲಿ ಇಲ್ಲದಷ್ಟು ಸಾಫ್ಟ್‌ವೇರ್ ಕಂಪೆನಿಗಳಿವೆ. ಇದು ಭಾರತದ ನಿಜವಾದ ಸಿಲಿಕಾನ್ ವ್ಯಾಲಿ. ಆದರೆ, ಇಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News