ಬೆಂಗಳೂರು: ಶಿಕ್ಷಣದ ಖಾಸಗೀಕರಣ ವಿರೋಧಿಸಿ ಎಸ್‌ಎಫ್‌ಐ ಯಿಂದ ಪ್ರತಿಭಟನೆ
ಬೆಂಗಳೂರು, ಎ.1: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಸ್ವಾಯತ್ತತೆ ಹೆಸರಲ್ಲಿ ಶಿಕ್ಷಣದ ಖಾಸಗೀಕರಣಕ್ಕೆ ಮುಂದಾಗಿರುವ ಕ್ರಮ ವಿರೋಧಿಸಿ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆಯ ಜಾಲದ ತನಿಖೆ ಮಾಡಬೇಕೆಂದು ಆಗ್ರಹಿಸಿ ಎಸ್‌ಎಫ್‌ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ರವಿವಾರ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಎಸ್‌ಎಫ್‌ಐ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಶಿಕ್ಷಣ ಖಾಸಗೀಕರಣವನ್ನು ಮುಂದುವರೆಸಿದೆ. ಇದರ ಭಾಗವಾಗಿ 60 ಶಿಕ್ಷಣ ಸಂಸ್ಥೆಗಳಿಗೆ ಯುಜಿಸಿ ಸ್ವಾಯತ್ತತೆ ನೀಡಿ, ಉನ್ನತ ಶಿಕ್ಷಣವನ್ನು ಖಾಸಗೀಕರಣ ಮಾಡುವ ಹುನ್ನಾರ ಮಾಡುತ್ತಿದೆ ಎಂದು ಆರೋಪಿಸಿದರು.
ಯುಜಿಸಿಯು 5 ಕೇಂದ್ರೀಯ ವಿಶ್ವದ್ಯಾಲಯಗಳು, 21 ರಾಜ್ಯ ವಿವಿಗಳು, 24 ಡೀಮ್ಡ್ ವಿವಿಗಳನ್ನು, 08 ಅಟೋನಾಮಸ್ ಕಾಲೇಜ್ ಹಾಗೂ 2 ಖಾಸಗಿ ಕಾಲೇಜುಗಳಿಗೆ ಪೂರ್ಣ ಪ್ರಮಾಣದ ಸ್ವತಂತ್ರ ಅಧಿಕಾರವನ್ನು ಕೊಡಲು ಕೇಂದ್ರಕ್ಕೆ ಪ್ರಸ್ತಾಪವನ್ನು ಸಲ್ಲಿಸಿದ್ದು, ಕೇಂದ್ರ ಸರಕಾರ ಇದಕ್ಕೆ ಸಮ್ಮತಿಯನ್ನು ಸೂಚಿಸಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಗ್ರಾಮೀಣ ಭಾಗದ, ಬಡ ಮತ್ತು ದಲಿತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕಡಿಮೆ ಹಣದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದ ಜೆಎನ್‌ಯು, ಹೈದ್ರಾಬಾದ್ ಕೇಂದ್ರೀಯ ವಿವಿ, ಮಾನಸ ಗಂಗೋತ್ರಿ ವಿಶ್ವದ್ಯಾಲಯ, ಜಾಧವಪುರ ಸಂಸ್ಥೆಗಳಲ್ಲಿ ಶುಲ್ಕ ಸೇರಿದಂತೆ ಇನ್ನಿತರ ಸೌಲಭ್ಯಗಳ ಶುಲ್ಕ ಹೆಚ್ಚಾಗುತ್ತದೆ. ಹೀಗಾಗಿ, ಯುಜಿಸಿ ಯ ಪ್ರಸ್ಥಾವನೆಗಳಿಗೆ ಒಪ್ಪಿಗೆ ನೀಡದೇ ಉನ್ನತ ಶಿಕ್ಷಣ ವಿದ್ಯಾರ್ಥಿಗಳ ಕೈಗೆಟಕುವ ರೀತಿಯಲ್ಲಿ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವೇಡ್ಕರ್ ಸಿಬಿಎಸ್‌ಇ ಎಸೆಸೆಲ್ಸಿ ಗಣಿತ ಮತ್ತು ಪಿಯುಸಿ ಅರ್ಥಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ನೈತಿಕ ಹೊಣೆ ಹೊರಬೇಕು. ಅಲ್ಲದೆ, ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದೆ ಸ್ಟಡಿಮಿಷನ್ ಹಾಗೂ ಎಬಿವಿಪಿ ಸಂಘಟನೆಯ ನಾಯಕರಿದ್ದಾರೆ ಎಂಬ ಆರೋಪವಿದೆ. ಈ ಬಗ್ಗೆ ಸೂಕ್ತ ತನಿಕೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಪದವಿಪೂರ್ವ ಶಿಕ್ಷಣ ಇಲಾಖೆಯು ಪ್ರವೇಶ ಶುಲ್ಕ, ಪರೀಕ್ಷಾ ಶುಲ್ಕ ಹಾಗೂ ಮರುಮೌಲ್ಯಮಾಪನ ಶುಲ್ಕವನ್ನು ಶೆ. 33 ರಷ್ಟು ಹೆಚ್ಚಳ ಮಾಡಿದೆ. ಇದನ್ನು ವಾಪಾಸ್ ಪಡೆಯಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಸ್‌ಎಫ್‌ಐ ರಾಷ್ಟ್ರಾಧ್ಯಕ್ಷ ವಿ.ಪಿ.ಸಾನು, ರಾಜ್ಯಾಧ್ಯಕ್ಷ ವಿ.ಅಂಬರೀಶ್, ಕಾರ್ಯದರ್ಶಿ ಗುರುರಾಜ್‌ದೇಸಾಯಿ, ಮುಖಂಡರಾದ ಮಹೇಶ್, ಎಂ.ವೇಗಾನಂದ, ಸಿ.ಅಮರೇಶ್, ದಿಲೀಪ್, ಶಿವಪ್ಪ ಉಪಸ್ಥಿತರಿದ್ದರು.