'ಫೋರ್ಬ್ಸ್ ಮಿಡ್ಲ್ ಈಸ್ಟ್ ಹೆಲ್ತ್ ಕೇರ್' ಮುಖಪುಟದಲ್ಲಿ ತುಂಬೆ ಸಮೂಹದ ಸ್ಥಾಪಕಾಧ್ಯಕ್ಷ ಡಾ.ತುಂಬೆ ಮೊಹಿಯುದ್ದೀನ್

Update: 2018-04-02 09:43 GMT

ದುಬೈ, ಎ. 2: ತುಂಬೆ ಸಮೂಹದ ಸ್ಥಾಪಕಾಧ್ಯಕ್ಷ ಡಾ. ತುಂಬೆ ಮೊಹಿಯುದ್ದೀನ್ ಅವರ ಯಶೋಗಾಥೆ ಫೋರ್ಬ್ಸ್ ಮಿಡ್ಲ್ ಈಸ್ಟ್ ಮ್ಯಾಗಝಿನ್ ನ ಮುಖಪುಟ ಲೇಖನವಾಗಿ ಹೊರಹೊಮ್ಮಿದೆ.

ಮ್ಯಾಗಝಿನ್ ನ ಮುಖಪುಟದಲ್ಲಿ ಡಾ. ತುಂಬೆ ಮೊಹಿಯುದ್ದೀನ್ ಅವರ ಛಾಯಾಚಿತ್ರವೂ ರಾರಾಜಿಸುತ್ತಿದೆ. ಫೋರ್ಬ್ಸ್ ಮಿಡ್ಲ್ ಈಸ್ಟ್ ಮ್ಯಾಗಝಿನ್ ನ ಮುಖಪುಟ ಲೇಖನದಲ್ಲಿ ತುಂಬೆ ಮೊಹಿಯುದ್ದೀನ್ ಅವರ ಬಗ್ಗೆ ಪ್ರಕಟವಾಗಿರುವುದು ಇದು ಎರಡನೇ ಬಾರಿ.

ಮಾರ್ಚ್ 31ರಂದು ಬಿಡುಗಡೆಯಾದ ಫೋರ್ಬ್ಸ್ ಮಿಡ್ಲ್ ಈಸ್ಟ್ ಹೆಲ್ತ್ ಕೇರ್ ವಿಶೇಷ ಪುರವಣಿಯಲ್ಲಿ ಡಾ. ತುಂಬೆ ಮೊಹಿಯುದ್ದೀನ್ ಅವರನ್ನು ಪ್ರತಿಷ್ಠಿತ (ಐಕಾನಿಕ್) ತುಂಬೆ ಸಮೂಹದ ಸ್ಥಾಪಕರೆಂದು ವರ್ಣಿಸಲಾಗಿದೆ. ಸಂಸ್ಥೆ ತನ್ನ 20ನೇ ವಾರ್ಷಿಕೋತ್ಸವವನ್ನು ಆಚರಿಸುವ ಹೊಸ್ತಿಲಲ್ಲಿರುವ ಈ ಸಂದರ್ಭದಲ್ಲಿ ಅವರು ತಮ್ಮ ಸಮೂಹ ಜಾಗತಿಕ ವಿಸ್ತರಣೆಗೆ ಒತ್ತು ನೀಡಲಿದೆ ಎಂದು ಹೇಳಿಕೊಂಡಿದ್ದಾರೆ.

‘ದಿ ಹೆಲ್ತ್ ಒಡಿಸ್ಸಿ’ ಎಂಬ ಶೀರ್ಷಿಕೆಯ ಮುಖ ಪುಟ ಲೇಖನದಲ್ಲಿ ಡಾ. ತುಂಬೆ ಮೊಹಿಯುದ್ದೀನ್ ಅವರ ಜೀವನ ಪಯಣ, ಸಾಧನೆ, ಯಶಸ್ವೀ ಉದ್ಯಮಿಯಾಗಿ ಅವರು ಹೊರಹೊಮ್ಮಿದ ರೀತಿ ಹಾಗೂ ಪ್ರಾಂತ್ಯದ ಪ್ರಥಮ ಮತ್ತು ಏಕೈಕ ಖಾಸಗಿ ವೈದ್ಯಕೀಯ ವಿಶ್ವವಿದ್ಯಾಲಯ- ಗಲ್ಫ್ ಮೆಡಿಕಲ್ ಯುನಿವರ್ಸಿಟಿಯನ್ನು ಅವರು ಅಜ್ಮಾನ್ ನಲ್ಲಿ 1998ರಲ್ಲಿ ಆರಂಭಿಸಿದ ಬಗ್ಗೆ ಹಾಗೂ ಮುಂದೆ ಅವರು ಆರೋಗ್ಯ ಕ್ಷೇತ್ರದ ಹೊರತಾಗಿ ಸಂಶೋಧನೆ, ರಿಯಲ್ ಎಸ್ಟೇಟ್, ವೆಲ್ನೆಸ್ ಮತ್ತು ಹಾಸ್ಪಿಟಾಲಿಟಿ ಕ್ಷೇತ್ರಗಳಿಗೂ ತಮ್ಮ ಉದ್ಯಮವನ್ನು ಯಶಸ್ವಿಯಾಗಿ ವಿಸ್ತರಿಸಿರುವ ಚಿತ್ರಣವನ್ನೂ ನೀಡಲಾಗಿದೆ.

ತುಂಬೆ ಸಮೂಹದ ಗಲ್ಫ್ ಮೆಡಿಕಲ್ ಯುನಿವರ್ಸಿಟಿಯಲ್ಲಿ 80 ದೇಶಗಳ ವಿದ್ಯಾರ್ಥಿಗಳಿದ್ದು 25 ದೇಶಗಳ ಶಿಕ್ಷಕ/ ಸಿಬ್ಬಂದಿಗಳಿದ್ದಾರೆ ಎಂದು ಡಾ. ತುಂಬೆ ಮೊಹಿಯುದ್ದೀನ್ ಹೇಳಿದ್ದಾರೆಂದು ಲೇಖನದಲ್ಲಿ ವಿವರಿಸಲಾಗಿದೆ.

ಡೈವರ್ಸಿಫಿಕೇಶನ್ ತನ್ನ ಸಂಸ್ಥೆಯ ಮುಖ್ಯ ತಂತ್ರಗಾರಿಕೆಯಲ್ಲಿ ಒಂದಾಗಿದೆ ಎಂದೂ ಅವರು ಹೇಳಿದ್ದಾರೆ. ಸಂಸ್ಥೆ ವಿಸ್ತರಣೆಯ ಪ್ರಮುಖ ಘಟ್ಟದಲ್ಲಿದೆ. ಅದರ ಒಟ್ಟು ಸಿಬ್ಬಂದಿ ಬಲವು 25,000 ರಷ್ಟು ಏರಿಕೆಯಾಗಲಿದ್ದು, ಆಸ್ಪತ್ರೆಯ ಸಾಮರ್ಥ್ಯವನ್ನೂ ಹೆಚ್ಚಿಸುವ ಯೋಜನೆಯಿದೆ ಎಂದು ತಿಳಿಸಿದ್ದಾರೆ.

‘‘ಸದ್ಯದಲ್ಲಿಯೇ ಗಲ್ಫ್ ಮೆಡಿಕಲ್ ಯುನಿವರ್ಸಿಟಿ ಮ್ಯಾನೇಜ್ಮೆಂಟ್ ಮತ್ತು ಇಂಜಿನಿಯರಿಂಗ್ ಕೋರ್ಸುಗಳನ್ನೂ ಆರಂಭಿಸಲಿದೆ. ಮೂರು ದೇಶಗಳಲ್ಲಿ ಮೂರು ಕ್ಯಾಂಪಸ್ ಗಳನ್ನು ತೆರೆಯಲಾಗುವುದು’’ ಎಂದು ಮೊಹಿಯುದ್ದೀನ್ ಹೇಳಿದ್ದಾರೆಂದು ಲೇಖನದಲ್ಲಿ ವಿವರಿಸಲಾಗಿದೆ.

‘‘2022ರೊಳಗಾಗಿ ತುಂಬೆ ಸಮೂಹವು 25ಕ್ಕೂ ಹೆಚ್ಚು ತುಂಬೆ ಲ್ಯಾಬ್, 100 ತುಂಬೆ ಫಾಮರ್ಸಿ, 40 ಝೊ ಆ್ಯಂಡ್ ಮೊ ಆಪ್ಟಿಕಲ್ಸ್ ಔಟ್ಲೆಟ್ಸ್, 100 ಬ್ಲೆಂಡ್ಸ್ ಆ್ಯಂಡ್ ಬ್ರೂಸ್ ಕಾಫಿ ಶಾಪ್ಸ್, 25 ಬಾಡಿ ಎಂಡ್ ಸೋಲ್ ಹೆಲ್ತ್ ಕ್ಲಬ್ ಹಾಗೂ 50 ನುಟ್ರಿ ಪ್ಲಸ್ ವಿಟಾ ಸ್ಟೋರ್ಸ್ ಆರಂಭಿಸಲಿದೆ’’ ಎಂದೂ ಡಾ ತುಂಬೆ ಮೊಹಿಯುದ್ದೀನ್ ಹೇಳಿರುವುದನ್ನು ಫೋರ್ಬ್ಸ್ ಮ್ಯಾಗಝಿನ್ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News