×
Ad

'ಬಿಜೆಪಿ ಸೇರಿ ಮುಸ್ಲಿಂ, ದಲಿತ ಸಮುದಾಯವನ್ನು ದೂರ ಮಾಡಿದ್ದೆ'

Update: 2018-04-02 18:43 IST

ಬೆಂಗಳೂರು, ಎ.2: ಮೂಲ ಕಾಂಗ್ರೆಸಿಗನಾದ ನಾನು ಬಿಜೆಪಿ ಸೇರಿ ಮುಸ್ಲಿಂ ಮತ್ತು ದಲಿತ ಸಮುದಾಯವನ್ನು ದೂರು ಮಾಡಿಕೊಳ್ಳಬೇಕಾಯಿತು. ಈಗ ಪುನಃ ಕಾಂಗ್ರೆಸ್‌ಗೆ ಬಂದಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಮಾಜಿ ಶಾಸಕ ಎಂ.ವೈ.ಪಾಟೀಲ್ ತಿಳಿಸಿದರು.

ಸೋಮವಾರ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇಪರ್ಡೆಗೊಂಡ ನಂತರ ಮಾತನಾಡಿದ ಅವರು, ನಾನೆಂದಿಗೂ ಬಿಜೆಪಿ ತೊರೆಯುವಂತಹ ಮನಸು ಮಾಡಿರಲಿಲ್ಲ. ಆದರೆ, ನನ್ನ ಸ್ಥಾನಕ್ಕೆ ಮಾಲಿಕಯ್ಯ ಗುತ್ತೇದಾರ್‌ರನ್ನು ಬಿಜೆಪಿಗೆ ಕರೆತಂದರು. ಹೀಗಾಗಿ ಅನಿವಾರ್ಯವಾಗಿ ಬಿಜೆಪಿಯನ್ನು ಬಿಡಬೇಕಾಯಿತು ಎಂದು ತಿಳಿಸಿದರು.

ಕಳೆದ 30ವರ್ಷಗಳಿಂದ ಮಾಲಿಕಯ್ಯ ಗುತ್ತೇದಾರ್ ಮಾಡುತ್ತಿರುವ ಅಕ್ರಮಗಳನ್ನು ವಿರೋಧಿಸುತ್ತಲೆ ಅಫ್ಜಲಪುರ ಕ್ಷೇತ್ರದಲ್ಲಿ ಜನಪರ ಕೆಲಸಗಳನ್ನು ಮಾಡಿಕೊಂಡು ಬಂದಿದ್ದೇನೆ. ಈಗ ಅವರು ಬಿಜೆಪಿಗೆ ಸೇರಿಕೊಂಡು ಹೈ-ಕರ್ನಾಟಕವನ್ನು ಗುತ್ತಿಗೆ ಪಡೆದವರಂತೆ ವರ್ತಿಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸಲಹೆ ಮೇರೆಗೆ ಪುನಃ ಕಾಂಗ್ರೆಸ್‌ಗೆ ಬಂದಿದ್ದೇನೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ರವರ ವಿಶೇಷ ಕಾಳಜಿಯ ಮೇರೆಗೆ ಹೈ-ಕರ್ನಾಟಕ ಭಾಗಕ್ಕೆ 371ಜೆ ಅಡಿಯಲ್ಲಿ ವಿಶೇಷ ಪ್ರಾತಿನಿಧ್ಯ ಸಿಕ್ಕಿದೆ. ಇದರಿಂದಾಗಿ ಹೈ-ಕರ್ನಾಟಕ ಭಾಗದಲ್ಲಿ ನೀರಾವರಿ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

 ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪಕ್ಷಭೇದವಿಲ್ಲದೆ ಹೈ-ಕರ್ನಾಟಕ ಭಾಗದ ಅಭಿವೃದ್ಧಿಯಲ್ಲಿ ತೊಡಗಿದ್ದಾರೆ. ನಮ್ಮ ಭಾಗದ ಸಮಸ್ಯೆಗಳನ್ನು ರಾಷ್ಟ್ರಮಟ್ಟದಲ್ಲಿ ದನಿ ಎತ್ತುವ ಸಮರ್ಥ ನಾಯಕರಾಗಿದ್ದಾರೆ. ಹೀಗಾಗಿ ಅವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್‌ನಲ್ಲಿ ಕಾರ್ಯನಿರ್ವಹಿಸುವುದು ಹೆಮ್ಮೆಯ ಸಂಗತಿಯೆಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ವೈದ್ಯಕೀಯ ಸಚಿವ ಶರಣಪ್ರಕಾಶ್ ಪಾಟೀಲ್, ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

ಅಫ್ಜಲಪುರ ಕ್ಷೇತ್ರದ ಮಾಜಿ ಶಾಸಕ ಎಂ.ವೈ.ಪಾಟೀಲ್ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿರುವುದು ಹೈ.ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ. ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಶರಣ ಪ್ರಕಾಶ್ ಪಾಟೀಲ್, ಪ್ರಿಯಾಂಕ ಖರ್ಗೆ ಅವರೊಂದಿಗೆ ಚರ್ಚಿಸಿ ಅಫ್ಜಲ್‌ಪುರ ಕ್ಷೇತ್ರದಲ್ಲಿ ಎಂ.ವೈ.ಪಾಟೀಲ್‌ರಿಗೆ ಟಿಕೆಟ್ ನೀಡುವ ಕುರಿತು ಹೈ-ಕಮಾಂಡ್‌ಗೆ ಮಾಹಿತಿ ನೀಡಲಿದ್ದೇವೆ.
-ಡಾ.ಜಿ.ಪರಮೇಶ್ವರ್ ಅಧ್ಯಕ್ಷ ಕೆಪಿಸಿಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News