×
Ad

ಕಾಂಗ್ರೆಸ್ ನಾಯಕ ಅಲ್ತಾಫ್‌ಖಾನ್ ಜೆಡಿಎಸ್ ಸೇರ್ಪಡೆ

Update: 2018-04-02 18:50 IST

ಬೆಂಗಳೂರು, ಎ.2: ಚಾಮರಾಜಪೇಟೆ ಕ್ಷೇತ್ರದ ಶಾಸಕರಾಗಿದ್ದ ಝಮೀರ್‌ಅಹ್ಮದ್ ಖಾನ್, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಬೆನ್ನಲ್ಲೆ, ಸ್ಥಳೀಯ ಪ್ರಭಾವಿ ಕಾಂಗ್ರೆಸ್ ನಾಯಕ ಅಲ್ತಾಫ್‌ಖಾನ್, ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸಮ್ಮುಖದಲ್ಲಿ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದಾರೆ.

ಸೋಮವಾರ ನಗರದ ಜೆ.ಪಿ.ಭವನ(ಜೆಡಿಎಸ್ ಕಚೇರಿ)ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಪಕ್ಷದ ಬಾವುಟ ನೀಡುವ ಮೂಲಕ ಅಲ್ತಾಫ್‌ಖಾನ್‌ರನ್ನು ಪಕ್ಷಕ್ಕೆ ಬರ ಮಾಡಿಕೊಂಡರು.

ಈ ಪಕ್ಷದಿಂದ ಬೆಳೆದು ಇಲ್ಲಿಂದ ಹೊರಹೋದ ಅನೇಕ ಸ್ನೇಹಿತರಿದ್ದಾರೆ. ಕೆಲವರು ಮುಖ್ಯಮಂತ್ರಿಯೂ ಆಗಿದ್ದಾರೆ. ನಮ್ಮ ಪಕ್ಷ ಉಪಮುಖ್ಯಮಂತ್ರಿ ಮಾಡಿತ್ತು. ಆದರೆ, ಅವರಿಗೆ ತೃಪ್ತಿ ಆಗಲಿಲ್ಲ. ಈಗ ಬೇರೆ ಪಕ್ಷಕ್ಕೆ ಹೋಗಿ ಮುಖ್ಯಮಂತ್ರಿ ಆಗಿದ್ದಾರೆ. ಈಗಲೂ ಜೆಡಿಎಸ್ ಅನ್ನು ಮುಗಿಸಲು ಅವರು ಕಾಯುತ್ತಿದ್ದಾರೆ. ಅವರಿಗೆ ಏಳು ಜನ ಮಾಜಿ ಶಾಸಕರು ಕೈ ಜೋಡಿಸಿದ್ದಾರೆ ಎಂದು ದೇವೇಗೌಡ ಹೇಳಿದರು.

ನಾನು ದೈವದಲ್ಲಿ ನಂಬಿಕೆ ಇಟ್ಟವನು. ಈಶ್ವರ, ಅಲ್ಲಾ ಇಬ್ಬರೂ ಒಂದೇ. ನಾವು ಎಲ್ಲಿಂದ ಬಂದಿದ್ದೇವೆ, ಯಾರು ನಮ್ಮನ್ನು ಬೆಳೆಸಿದ್ದಾರೆ, ಅನ್ನೊ ಕನಿಷ್ಟ ಜ್ಞಾನ ಇರಬೇಕು. ಕಳೆದ ನಾಲ್ಕು ವರ್ಷಗಳಿಂದ ಅನೇಕ ಟೀಕೆ ಮಾಡಿದ್ದಾರೆ. ಯಾರೆಲ್ಲ ನಮ್ಮ ವಿರುದ್ದ ಮಾತಾಡುತ್ತಿದ್ದಾರೋ ಅವರ ಹೆಸರೂ ನಾನು ಹೇಳುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಝಮೀರ್ ಅಹ್ಮದ್‌ಖಾನ್ ವಿರುದ್ಧ ಪರೋಕ್ಷವಾಗಿ ಅವರು ವಾಗ್ದಾಳಿ ನಡೆಸಿದರು.

ಯಾವಾಗಲೂ ತಾಯಿ ಹೆಸರಲ್ಲಿ ಪ್ರಮಾಣ ಮಾಡುವ ಪ್ರವೃತ್ತಿ ಬಿಡಿ. ನೀವು ಮಕ್ಕಾ-ಮದೀನಾಗೆ ಹೋಗುವವರು, ತಾಯಿ ಹೆಸರು ಹೇಳಿ ಪ್ರಮಾಣ ಮಾಡೋದು ಶ್ರೇಯಸ್ಸಲ್ಲ ಎಂದು ಝಮೀರ್‌ಅಹ್ಮದ್‌ಖಾನ್‌ಗೆ ದೇವೇಗೌಡರು ಕಿವಿಮಾತು ಹೇಳಿದರು.

ಇವತ್ತು ಸೋಮವಾರ ಬೆಳಗ್ಗೆ 10.15ಕ್ಕೆ ಸಮಯ ನೋಡಿ ಅಲ್ತಾಫ್‌ಖಾನ್ ಕೈಗೆ ಪಕ್ಷದ ಬಾವುಟ ಕೊಟ್ಟಿದ್ದೇನೆ. ನನಗೆ ಈಶ್ವರನ ಮೇಲೆ ನಂಬಿಕೆಯಿದೆ. ಈಶ್ವರ-ಅಲ್ಲಾ ತೇರೆನಾಮ್, ನೋಡಿ ಆತ ಎಷ್ಟು ಕೆಲಸ ಮಾಡುತ್ತಾರೆ. ಇವತ್ತಿನಿಂದ ಈ ಪಕ್ಷ ಅಲ್ತಾಫ್‌ರದ್ದು ಎಂದು ದೇವೇಗೌಡ ಹೇಳಿದರು.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸಾಚಾರ್ ಸಮಿತಿ ವರದಿಯನ್ನು ಜಾರಿ ಮಾಡಿದ್ದರು. ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಇನ್ನೂ ಬೆಳೆಯಬೇಕು. ಜೆಡಿಎಸ್ ಅಂದರೆ ಜನತಾ ದಳ ಸಂಘಪರಿವಾರ ಎಂದು ಹೇಳಿದ್ದಾರೆ. ನನಗೆ ಬೇಜಾರಿಲ್ಲ. ಆದರೆ, ಒಬ್ಬ ರಾಷ್ಟ್ರೀಯ ಪಕ್ಷದ ಅಧ್ಯಕ್ಷನ ಬಳಿ ಈ ರೀತಿ ಹೇಳಿಸಬಾರದು ಎಂದು ಅವರು ತಿಳಿಸಿದರು.

ನಮ್ಮನ್ನು ‘ಕಮ್ ಕ್ಲೀನ್’(ಸ್ವಚ್ಛವಾಗಿ ಬನ್ನಿ) ಎಂದು ಹೇಳಿದ್ದಾರೆ. ನಾನು ಏನು ಮಾಡಿದ್ದೇನೆ ಅನ್ನೋದನ್ನು ಅವರೇ ಹೇಳಲಿ. ದರಿದ್ರ ನಾರಾಯಣ ರ್ಯಾಲಿ ಮಾಡಿದ್ದೆ. ಅವತ್ತು ಈ ಮುಖ್ಯಮಂತ್ರಿ ಎಲ್ಲಿಗೆ ಹೋಗಿದ್ದರು. ಚಾಮರಾಜಪೇಟೆ ಕ್ಷೇತ್ರದ ಅರಿವು ನನಗಿದೆ. ಅಲ್ತಾಫ್ ಗೆಲ್ಲುವುದರಲ್ಲಿ ಯಾವುದೆ ಸಂಶಯವಿಲ್ಲ ಎಂದು ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಚುನಾವಣೆ ಆಗುವವರೆಗೆ ಏನು ಬೇಕಾದರೂ ಆಗಬಹುದು. ಅದಕ್ಕಾಗಿ, ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇನೆ. ಕೆಂಪಯ್ಯ ಅಧಿಕಾರ ಹೋಗಬೇಕು. ಅಲ್ತಾಫ್ ಮೇಲೆ ಕೆಲವರಿಗೆ ದ್ವೇಷ ಇದೆ. ಅವರ ಬೆಂಬಲಕ್ಕೆ ನಾನಿದ್ದೇನೆ. ಕುಮಾರಸ್ವಾಮಿ ಇದ್ದಾರೆ ಹಾಗೂ ಪಕ್ಷದ ಲಕ್ಷಾಂತರ ಕಾರ್ಯಕರ್ತರಿದ್ದಾರೆ ಮತ್ತು ಚಾಮರಾಜಪೇಟೆ ಜನರ ಆಶೀರ್ವಾದವಿದೆ ಎಂದು ಅವರು ಹೇಳಿದರು.

ಚಾಮರಾಜಪೇಟೆಯಲ್ಲಿ ಹೊಸ ಶಕೆ ಪ್ರಾರಂಭವಾಗಿದೆ. ನಾನು ಪ್ರತಿಯೊಂದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಆ ಕ್ಷೇತ್ರದಲ್ಲಿ ಎಲ್ಲ ಸಮಾಜದವರು ಅವರ ಮೇಲೆ ಬೇಸತ್ತಿದ್ದಾರೆ. ನಾನು ಯಾರಿಗೂ ದ್ರೋಹ ಮಾಡಿಲ್ಲ. ಪಕ್ಷಕ್ಕೆ ದ್ರೋಹ ಬಗೆದವರು ತಾಯಿಗೆ ದ್ರೋಹ ಮಾಡಿದಂತೆ ಎಂದು ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ಸೇರ್ಪಡೆ ಬಳಿಕ ಮಾತನಾಡಿದ ಅಲ್ತಾಫ್‌ಖಾನ್, ನನಗೆ ತುಂಬಾ ತೊಂದರೆ ಕೊಟ್ಟರು. ನನಗೆ ಮೋಸ ಮಾಡಿದರೆ, ನಿಮಗೆ ದೇವರು ಮೋಸ ಮಾಡುತ್ತಾನೆ. ಚಾಮರಾಜಪೇಟೆ ಒಂದೇ ಅಲ್ಲ, ಎಲ್ಲಾ ಕ್ಷೇತ್ರಗಳಲ್ಲೂ ಓಡಾಡುತ್ತೇನೆ ಎಂದರು. ಝಮೀರ್ ಕೇವಲ ಮುಸ್ಲಿಮರ ನಾಯಕ ಎಂದು ಹೇಳಿಕೊಳ್ಳುತ್ತಾರೆ. ಆದರೆ, ನಾನು ಜನ ನಾಯಕ. ಸುಳ್ಳು ಹೇಳುವ ಝಮೀರ್‌ಗೆ ದೇವರು ಪಾಠ ಕಲಿಸ್ತಾನೆ. ತಂದೆಯಂತೆ ಇರುವ ದೇವೇಗೌಡರಿಗೆ, ತಾಯಿಯಂತೆ ಇರುವ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ಝಮೀರ್ ಅಹ್ಮದ್ ಸಿಕ್ಕಿದರೆ ಕಿಸ್, ಬಿಟ್ಟರೆ ಆರು ತಿಂಗಳು ಮಿಸ್. ನೀನು ನಾಲ್ಕೂವರೆ ಅಡಿ ಇದಿಯಾ, ನಾನು ಆರೂವರೆ ಅಡಿ ಇದ್ದೀನಿ. ನಿನಗೆ ಸವಾಲು ಚಾಮರಾಜಪೇಟೆಯಲ್ಲಿ ಮನೆ ಮಾಡು, ಬಾಡಿಗೆ ಹಾಗೂ ಅಡ್ವಾನ್ಸ್ ನನ್ನದು. ನನ್ನ ಕೈಕಾಲು ಹಿಡಿದು ಮತ ಹಾಕಿಸು ಎಂದು ಮನವಿ ಮಾಡಿರುವ ವಿಡಿಯೋ ಇದೆ. ಅದನ್ನು ಬಿಡುಗಡೆ ಮಾಡುತ್ತೇನೆ ಎಂದು ಅಲ್ತಾಫ್‌ಖಾನ್ ಹೇಳಿದರು.

300 ಕೋಟಿ ರೂ.ಹೇಗೆ ಮಾಡಿದೆ. ಮಾರುಕಟ್ಟೆಯಲ್ಲಿ ಬಡವರ ಹತ್ತು ಅಂಗಡಿ ಮಾರಾಟ ಮಾಡಿದ್ದು ಸೇರಿದಂತೆ ಎಲ್ಲ ದಾಖಲೆಗಳು ನನ್ನ ಬಳಿಯಿದೆ. ಎಲ್ಲವನ್ನು ಬಿಡುಗಡೆ ಮಾಡುತ್ತೇನೆ. ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಯಾರದ್ದೋ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಂಡಿರುವ ದಾಖಲೆ ನನ್ನ ಬಳಿಯಿದೆ. ಇಷ್ಟು ದಿನ ನಾನು ಸುಮ್ಮನೆ ಕೂತಿರಲಿಲ್ಲ, ಎಲ್ಲ ದಾಖಲೆಗಳನ್ನು ಸಂಗ್ರಹಿಸಿದ್ದೇನೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News