ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ: ತೀರ್ಪು ಕಾಯ್ದಿರಿಸಿದ ಸಿಎಟಿ
ಬೆಂಗಳೂರು, ಎ.2: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ವಿವಾದದ ಸಂಬಂಧ ಸೋಮವಾರ ಸಿಎಟಿ ನ್ಯಾಯಾಲಯದಲ್ಲಿ ವಾದ, ಪ್ರತಿವಾದ ನಡೆಯಿತು. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪರ ಹಿರಿಯ ವಕೀಲ ಸುಬ್ರಮಣ್ಯ ಜೋಹಿಸ್ ವಾದ ಮಂಡಿಸಿದರು.
ಗಣಿ ಮಾಫಿಯಾ ವಿರುದ್ಧ ಕ್ರಮ ಕೈಗೊಂಡಿದ್ದಕ್ಕೆ ರೋಹಿಣಿ ಅವರನ್ನು ಸರಕಾರ ವರ್ಗಾವಣೆ ಮಾಡಿದೆ. ಹಾಸನದ ಸ್ಥಳೀಯ ರಾಜಕಾರಣಿಗಳ ದೂರಿನಿಂದ ರಾಜಕೀಯ ಒತ್ತಡಕ್ಕೊಳಗಾದ ಸಿಎಂ ವರ್ಗಾವಣೆ ಆದೇಶ ಮಾಡಿಸಿದ್ದಾರೆ. ಆದರೆ ಜಿಲ್ಲಾಧಿಕಾರಿಗೆ ಒಂದೇ ಸ್ಥಳದಲ್ಲಿ 2 ವರ್ಷ ಕಾರ್ಯ ನಿರ್ವಹಿಸಲು ನಿಯಮವಿದೆ. ಹೀಗಾಗಿ ರೋಹಿಣಿ ವರ್ಗಾವಣೆಯಲ್ಲಿ 2 ವರ್ಷದ ನಿಯಮ ಉಲ್ಲಂಘನೆಯಾಗಿದೆ ಎಂದು ರೋಹಿಣಿ ಪರ ವಕೀಲರು ವಾದ ಮಂಡಿಸಿದರು.
ಸರಕಾರದ ಪರ ವಕೀಲ ಪೊನ್ನಣ್ಣ ವಾದಿಸಿ, ಸಾರ್ವಜನಿಕ ಉದ್ದೇಶಕ್ಕಾಗಿ ರೋಹಿಣಿ ವರ್ಗಾವಣೆ ಮಾಡಲಾಗಿದೆ. ಇದರಲ್ಲಿ ಕನಿಷ್ಠ ಎರಡು ವರ್ಷದ ನಿಯಮ ಅನ್ವಯವಾಗುವುದಿಲ್ಲ. ಐಎಎಸ್ ಅಧಿಕಾರಿಗಳ ವರ್ಗಾವಣೆಗೆ ಯಾವುದೇ ಮಂಡಳಿ ಇಲ್ಲ. ಮಂಡಳಿ ಇದ್ದರೆ ಮಾತ್ರ ನಿಯಮಗಳು ಅನ್ವಯವಾಗುತ್ತವೆ. ವರ್ಗಾವಣೆಗೆ ನಿಖರ ಕಾರಣ ಬಹಿರಂಗಪಡಿಸುವ ಅಗತ್ಯವಿಲ್ಲ. ಕಾರ್ಯಾಂಗದ ಮುಖ್ಯಸ್ಥರಾಗಿ ಸಿಎಂ ಸಿಎ ಆದೇಶ ಮಾಡಿದ್ದಾರೆ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ಪೊನ್ನಣ್ಣ ವಾದ ಮಾಡಿದ್ದಾರೆ.
ಹೀಗೆ ಸುಮಾರು ಎರಡು ಗಂಟೆಗಳ ಕಾಲ ಎರಡೂ ಕಡೆಯವರ ವಾದ ಪ್ರತಿವಾದ ಅಲಿಸಿದ ನ್ಯಾಯಧೀಶರು ಪ್ರಕರಣದ ವಿಚಾರಣೆ ಪೂರ್ಣ ತೀರ್ಪು ಕಾಯ್ದಿರಿಸಿದ್ದಾರೆ.