ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದರೆ ಉಚ್ಚಾಟನೆ: ಡಾ.ಜಿ.ಪರಮೇಶ್ವರ್
ಬೆಂಗಳೂರು, ಎ.2: ಕಾಂಗ್ರೆಸ್‌ನಲ್ಲಿರುವಾಗಲೆ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಶಾಸಕ ಮಾಲಿಕಯ್ಯ ಗುತ್ತೇದಾರ್‌ರನ್ನು ಉಚ್ಚಾಟಿಸಲಾಗಿದೆ. ಇದು ಪಕ್ಷ ವಿರೋಧಿ ಚಟುವಟಿಕೆ ನಡೆಸುವ ಎಲ್ಲರಿಗೂ ಅನ್ವಯವಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಎಚ್ಚರಿಸಿದ್ದಾರೆ.
ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಶಾಸಕ ಎಂ.ವೈ.ಪಾಟೀಲ್‌ರನ್ನು ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಸಕ ಮಾಲಿಕಯ್ಯ ಗುತ್ತೇದಾರ್‌ರನ್ನು ಪಕ್ಷ ಬಿಡದಂತೆ ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವೊಲಿಸಿದೆವು. ಆದರೆ, ಅವರು ಪಕ್ಷ ವಿರೋಧಿ ಹೇಳಿಕೆಯನ್ನು ನೀಡುತ್ತಿದ್ದರು. ಹೀಗಾಗಿ ಅವರನ್ನು ಉಚ್ಚಾಟಿಸಲಾಯಿತು ಎಂದು ಸಮರ್ಥಿಸಿಕೊಂಡರು.
ಕಾಂಗ್ರೆಸ್ ಪಕ್ಷ ಬಿಡಲು ಮಾಲಿಕಯ್ಯ ಗುತ್ತೇದಾರ್ ನೀಡಿದ ಕಾರಣ ಮಾತ್ರ ಸರಿಯಾದುದಲ್ಲ. ಕಾಂಗ್ರೆಸ್ ಮುಖಾಂತರ ಶಾಸಕರಾಗಿ, ಗೃಹ ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿ, ಪಕ್ಷದ ವಿರೋಧಿ ಹೇಳಿಕೆ ನೀಡುವುದು ಸರಿಯಾದುದ್ದಾಗಿರಲಿಲ್ಲ ಎಂದು ಅವರು ತಿಳಿಸಿದರು.
ಸಚಿವ ಶರಣ ಪ್ರಕಾಶ ಪಾಟೀಲ್ ಮಾತನಾಡಿ, ಕಳೆದ 5 ವರ್ಷಗಳಿಂದ ಅಧಿಕಾರ ಅನುಭವಿಸಿದ ಮಾಲಿಕಯ್ಯ ಗುತ್ತೇದಾರ್ ಚುನಾವಣಾ ಸಂದರ್ಭದಲ್ಲಿ ಬಿಜೆಪಿಗೆ ಸೇರಿದ್ದು ಸ್ವಾರ್ಥತೆಯಾಗಿದೆ. ಈಗ ಅವರ ಸ್ಥಾನಕ್ಕೆ ಹಿರಿಯ ನಾಯಕರಾದ ಎಂ.ವೈ.ಪಾಟೀಲ್ ಕಾಂಗ್ರೆಸ್ ಬಂದಿರುವುದು ಸಂತೋಷವಾಗಿದೆ ಎಂದು ತಿಳಿಸಿದರು.