ಜೆಡಿಎಸ್‌ನ ಬಂಡಾಯ ಶಾಸಕರನ್ನು ಅನರ್ಹಗೊಳಿಸಿದರೆ ಏನು ಪ್ರಯೋಜನ: ಅರ್ಜಿದಾರರಿಗೆ ಹೈಕೋರ್ಟ್ ಪ್ರಶ್ನೆ
ಬೆಂಗಳೂರು, ಎ.2: ಜೆಡಿಎಸ್‌ನ್ ಬಂಡಾಯ ಶಾಸಕರು ಈಗಾಗಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿರುವುದರಿಂದ ವಿಧಾನಸಭಾಧ್ಯಕ್ಷರು ಒಂದು ವೇಳೆ ಅವರನ್ನು ಅನರ್ಹಗೊಳಿಸಿದರೆ ಏನು ಪ್ರಯೋಜನ ಎಂದು ಹೈಕೋರ್ಟ್ ಅರ್ಜಿದಾರರನ್ನು ಪ್ರಶ್ನಿಸಿದೆ.
ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಏಳು ಜನ ಬಂಡಾಯ ಶಾಸಕರಿಗೆ ಮತದಾನಕ್ಕೆ ಅವಕಾಶ ನೀಡಬಾರದು ಎಂದು ಕೋರಿ ಮೂಡಿಗೆರೆ ಶಾಸಕ ಬಿ.ಬಿ.ನಿಂಗಯ್ಯ ಹಾಗೂ ಶ್ರವಣಬೆಳಗೊಳದ ಶಾಸಕ ಸಿ.ಎನ್. ಬಾಲಕೃಷ್ಣ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಆರ್.ಎಸ್.ಚೌಹಾಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ವಿಧಾನಸಭಾಧ್ಯಕ್ಷರ ಪರ ಹಾಜರಿದ್ದ ಹಿರಿಯ ವಕೀಲ ಜಯಕುಮಾರ್ ಎಸ್.ಪಾಟೀಲ, ವಿಧಾನಸಭಾಧ್ಯಕ್ಷರು ಇನ್ನೂ ಯಾವುದೇ ಆದೇಶ ಮಾಡಿಲ್ಲ. ಹೀಗಾಗಿ ಅರ್ಜಿದಾರರು ಪ್ರಾಥಮಿಕ ಹಂತದಲ್ಲಿ ಕೋರ್ಟ್‌ಗೆ ಬಂದಿರುವುದನ್ನು ಮಾನ್ಯ ಮಾಡಬಾರದು. ಇದು ಸಂವಿಧಾನದ 10ನೇ ಶೆಡ್ಯೂಲ್‌ಗೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ವಿಚ್ಛೇದನದ ಪ್ರಕರಣ ಕೋರ್ಟ್‌ನಲ್ಲಿ ನಡೆಯುತ್ತಿರುವಾಗ ಹೆಂಡತಿ ಸತ್ತು ಹೋದರೆ ವಿಚ್ಛೇದನ ಯಾರಿಗೆ ಕೊಡಬೇಕು ಎಂಬಂತಿದೆಯೆಲ್ಲಾ ಈ ಪ್ರಕರಣ ಎಂದು ಚಟಾಕಿ ಹಾರಿಸಿದರು.
ಪ್ರಾಥಮಿಕ ಆಕ್ಷೇಪಣೆ ಸಲ್ಲಿಸಲು ಪಾಟೀಲ ಕಾಲಾವಕಾಶ ಕೋರಿದ್ದರಿಂದ ವಿಚಾರಣೆಯನ್ನು ಇದೇ 11ಕ್ಕೆ ಮುಂದೂಡಲಾಗಿದೆ.