ಬೆಂಗಳೂರು: ಪರಿಶಿಷ್ಟರ ‘ಭಡ್ತಿ ಮೀಸಲಾತಿ ಸಂರಕ್ಷಣೆ’ಗೆ ಎಸ್ಸಿ-ಎಸ್ಟಿ ನೌಕರರ ಮನವಿ

Update: 2018-04-02 15:06 GMT

ಬೆಂಗಳೂರು, ಎ. 2: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರಿಗೆ ಸಂವಿಧಾನ ದತ್ತವಾಗಿ ಸಿಕ್ಕಿರುವ ಮೀಸಲಾತಿ ಮತ್ತು ಭಡ್ತಿ ಮೀಸಲಾತಿ ಸೌಲಭ್ಯ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ, ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಮನವಿ ಸಲ್ಲಿಸಿದೆ.

ಸೋಮವಾರ ವಿಧಾನಸೌಧದಲ್ಲಿ ಸಮಿತಿ ಅಧ್ಯಕ್ಷ ಡಿ.ಶಿವಶಂಕರ್ ಮತ್ತು ಪ್ರಧಾನ ಕಾರ್ಯದರ್ಶಿ ಡಾ.ಎಸ್.ವಿಜಯಕುಮಾರ್ ನೇತೃತ್ವದಲ್ಲಿ 150ಕ್ಕೂ ಹೆಚ್ಚು ಪರಿಶಿಷ್ಟ ಅಧಿಕಾರಿಗಳು ಮತ್ತು ನೌಕರರು ಮನವಿ ಸಲ್ಲಿಸಿದ್ದಾರೆ. 2017ರ ಮೇ 6ರಂದು ಆಡಳಿತ ಸುಧಾರಣಾ ಇಲಾಖೆ ಹೊರಡಿಸಿರುವ ಆದೇಶದ ಕ್ರಮ ಸಂಖ್ಯೆ 4 ಮತ್ತು 6ರ ಅಂಶಗಳನ್ನು ಪಾಲಿಸಿ ಜೇಷ್ಠತಾ ಪಟ್ಟಿಯನ್ನು ಮತ್ತೊಮ್ಮೆ ಪರಿಷ್ಕರಿಸಲು ಸೂಚನೆ ನೀಡಬೇಕು ಎಂದು ಕೋರಲಾಗಿದೆ.

ಎಸ್ಸಿ-ಎಸ್ಟಿ ನೌಕರರು ಮತ್ತು ಅಧಿಕಾರಿಗಳು ಸಲ್ಲಿಸಿರುವ ವಿವಿಧ ಆಕ್ಷೇಪಣೆಗಳನ್ನು ಇಲಾಖಾ ಮಟ್ಟದಲ್ಲಿ ಡಿಪಿಸಿ ಸಮಿತಿ ಮಾದರಿಯಲ್ಲಿ ಸಮಿತಿ ರಚನೆ ಮಾಡಿ, ಪ್ರತಿಯೊಂದು ಆಕ್ಷೇಪಣೆಗಳ ಬಗ್ಗೆ ವಿಚಾರಣೆ ನಡೆಸಿ ಜೇಷ್ಠತಾ ಪಟ್ಟಿಯನ್ನು ಪರಿಸ್ಕರಿಸಬೇಕು.

ಮೀಸಲಾತಿ ಎಂದರೆ ಏನು? ಭಡ್ತಿ ಮೀಸಲಾತಿ ಎಂದರೆ ಏನು? ಎಂಬ ಬಗ್ಗೆ ಜೇಷ್ಠತಾ ಪಟ್ಟಿಯನ್ನು ಪರಿಷ್ಕರಿಸುವ ಸಂದರ್ಭದಲ್ಲಿ ಉದ್ಭವಿಸುವ ಎಲ್ಲ ಪ್ರಶ್ನೆಗಳಿಗೂ ಸ್ಪಷ್ಟಣೆ ನೀಡಬೇಕು. ಸಂವಿಧಾನದ ಪರಿಚ್ಚೇದ 16(4 ಎ)ರ ಪ್ರಕಾರ ಭಡ್ತಿಯಲ್ಲೂ ಎಸ್ಸಿಗೆ ಶೇ.15 ಮತ್ತು ಎಸ್ಟಿಗೆ ಶೇ.3ರಷ್ಟು ಪ್ರಾತಿನಿಧ್ಯ ನೀಡಬೇಕು. ಎಸ್ಸಿ-ಎಸ್ಟಿ ವರ್ಗದವರಿಗೆ ನಿಗದಿತ ಪ್ರಾತಿನಿಧ್ಯ ಪ್ರತಿಯೊಂದು ಹುದ್ದೆಯ ವರ್ಗದಲ್ಲಿ ದೊರಕಿರುವಂತೆ ಹಾಗೂ ಸಾಮಾನ್ಯ ಕೋಟಾದಲ್ಲಿ ಆಯ್ಕೆಯಾಗಿರುವವರನ್ನು ಹೊರತುಪಡಿಸಿ ಜೇಷ್ಠತಾ ಪಟ್ಟಿ ಪರಿಷ್ಕರಿಸಲು ಸೂಚಿಸಬೇಕು. ಆಡಳಿತ ಸುಧಾರಣಾ ಇಲಾಖೆ ಎಸ್ಸಿ-ಎಸ್ಟಿ ವರ್ಗಕ್ಕೆ ಅನ್ಯಾಯ ಮಾಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ ಶಿಸ್ತು ಕ್ರಮ ಕೈಗೊಳ್ಳಬೇಕು.

ಇಲಾಖೆ 2018ರ ಫೆ.28ರ ಆದೇಶದಂತೆ ವಿವಿಧ ಇಲಾಖೆಯಲ್ಲಿ ನಿಯಮ 32ರಡಿ ಎಸ್ಸಿ-ಎಸ್ಟಿ ವರ್ಗದವರನ್ನು ಹೊರತುಪಡಿಸಿ ನೀಡಿರುವ ಭಡ್ತಿ ಆದೇಶವನ್ನು ಕೂಡಲೇ ರದ್ದುಪಡಿಸಬೇಕು. ಇಲಾಖೆಗೆ ಸಾಮಾಜಿಕ ನ್ಯಾಯ ಮತ್ತು ಕಾನೂನಿನ ಪರಿಪೂರ್ಣ ಜ್ಞಾನವಿರುವ ಮತ್ತು ಪರಿಶಿಷ್ಟ ವಿರೋಧಿ ಧೋರಣೆ ಇಲ್ಲದ ದಕ್ಷ ಹಾಗೂ ಪ್ರಮಾಣಿಕ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News