ಮತದಾರರಿಗೆ ರಾಜಕೀಯ ಪಕ್ಷಗಳಿಂದ ಆಮಿಷ: ಆಪ್ ಆರೋಪ
ಬೆಂಗಳೂರು, ಎ.2: ರಾಜ್ಯದಲ್ಲಿ ಚುನಾವಣಾ ಕಾವು ಹೆಚ್ಚುತ್ತಿದ್ದಂತೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರು ರಾಜಕೀಯ ಪಕ್ಷಗಳು ಮತದಾರರನನ್ನು ಒಲಿಸಿಕೊಳ್ಳಲು ವಾಮಮಾರ್ಗದಿಂದ ನಾನಾ ಕುತಂತ್ರಗಳ ಮೊರೆ ಹೋಗಿವೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ವಕ್ತಾರ ಶಿವಕುಮಾರ ಚೆಂಗಲರಾಯ ಆರೋಪಿಸಿದ್ದಾರೆ.
ನೈತಿಕವಾಗಿ ಮತದಾರರನ್ನು ಗೆಲ್ಲಲಾಗದ ಪಕ್ಷಗಳು ಮತದಾರನಿಗೇ ಲಂಚ ಕೊಟ್ಟು ಖರೀದಿಸಲು ಯತ್ನಿಸುತ್ತಿವೆ. ಜನರ ಜ್ವಲಂತ ಸಮಸ್ಯೆಗಳನ್ನು ದಿಕ್ಕು ತಪ್ಪಿಸುವ ಏಕೈಕ ಉದ್ದೇಶದಿಂದ ಜನರನ್ನು ಜಾತಿ-ಧರ್ಮಗಳ ಹೆಸರಿನಲ್ಲಿ ಭಾವನಾತ್ಮಕವಾಗಿ ಕೆರಳಿಸಿ ಸಮಾಜವನ್ನು ಒಡೆದು, ಹಣ ಹಾಗೂ ವಸ್ತುಗಳ ಆಮಿಷವೊಡ್ಡಿ ಮತದಾರರನ್ನು ಸೆಳೆಯುವ ಕೆಲಸ ಮಾಡುತ್ತಿವೆ ಎಂದು ಅವರು ದೂರಿದ್ದಾರೆ.
ಐದು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಸುಮಾರು 1.50 ಕೋಟಿ ರೂ. ಮೌಲ್ಯದ ಕುಕ್ಕರ್ ವಿತರಿಸಲು ಹೊಗಿ ಸಿಕ್ಕಿಬಿದ್ದಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ರಾಜರಾಜೇಶ್ವರಿನಗರದ ಶಾಸಕ ಮುನಿರತ್ನಂ ಅವರಿಗೆ ಸೇರಿದ ಗೋಡೌನ್‌ಗೆ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ದಾಳಿ ನಡೆಸಿದಾಗ ಮತದಾರರಿಗೆ ಆಮಿಷವೊಡ್ಡಲು ಕೂಡಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಕುಕ್ಕರ್, ಸೀರೆ ಇನ್ನಿತರ ವಸ್ತುಗಳು ಸಿಕ್ಕಿವೆ ಎಂದು ಅವರು ಹೇಳಿದ್ದಾರೆ.
ಬಿಜೆಪಿಯ ಪ್ರಮುಖ ನಾಯಕ, ಮಾಜಿ ಸಚಿವ ಅರವಿಂದ ಲಿಂಬಾವಳಿ ಮಹದೇವಪುರ ಕ್ಷೇತ್ರದಲ್ಲಿ ತನ್ನ ಚಿತ್ರವಿರುವ ಹೆಲ್ಮೆಟ್ ವಿತರಿಸಿ ಮತದಾರರನ್ನು ಖರೀದಿಸಲು ಯತ್ನಿಸಿರುವುದು ಮಾಧ್ಯಮಗಳು ಬೆಳಕಿಗೆ ತಂದಿವೆ. ಕಾಂಗ್ರೆಸ್-ಬಿಜೆಪಿಗೆ ತಾನೇನೂ ಕಡಿಮೆ ಇಲ್ಲ ಎಂಬಂತೆ ಜೆಡಿಎಸ್ ಪಕ್ಷವು ಸೀರೆ ಹಂಚಲು ಹೊರಟಿದೆ ಎಂದು ಶಿವಕುಮಾರ ಆರೋಪಿಸಿದ್ದಾರೆ.
ಹುಲಕುಂದ ಗ್ರಾಮದಲ್ಲಿ ಜೆಡಿಎಸ್ ಮುಖಂಡರ ಮನೆಯಿಂದ ಮತದಾರರಿಗೆ ಹಂಚಲು ತಂದಿದ್ದ 2 ಸಾವಿರ ಸೀರೆಗಳನ್ನು ಚುನಾವಣಾ ಆಯೋಗ ವಶಪಡಿಸಿಕೊಂಡಿದೆ. ಈ ರೀತಿ ಆಮಿಷವೊಡ್ಡಿ ವಾಮಮಾರ್ಗಗಳ ಮೂಲಕ ಚುನಾವಣೆ ಗೆಲ್ಲಲು ಯತ್ನಿಸುತ್ತಿರುವವರ ಮೇಲೆ ಚುನಾವಣಾ ಆಯೋಗವು ರಾಜ್ಯಾದ್ಯಂತ ಸೂಕ್ತ ಪರಿಶೀಲನೆ ನಡೆಸಿ, ಚುನಾವಣಾ ಅಕ್ರಮಗಳನ್ನು ಪತ್ತೆ ಹಚ್ಚಿ ಭ್ರಷ್ಟರನ್ನು ಹೆಡೆಮುರಿ ಕಟ್ಟುವ ಕೆಲಸ ಆಗಬೇಕಿದೆ ಎಂದು ಅವರು ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.