ಬೆಂಗಳೂರು: ಕಳ್ಳತನಕ್ಕೆ ಬಂದು ತಪ್ಪಿಸಿಕೊಳ್ಳುವ ವೇಳೆ ಆಯತಪ್ಪಿ ಬಿದ್ದು ಮೃತ್ಯು
ಬೆಂಗಳೂರು, ಎ. 2: ಪಿಜಿ ವಸತಿಗೃಹದಲ್ಲಿನ ಯುವತಿಯರು ಕೂಗಿಕೊಂಡಿದ್ದರಿಂದ ಹೆದರಿದ ಕಳ್ಳನೊಬ್ಬ ನಾಲ್ಕನೆ ಮಹಡಿಯಿಂದ ಬೇರೊಂದು ಕಟ್ಟಡಕ್ಕೆ ಜಿಗಿಯುವ ವೇಳೆ ಹೋಗಿ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿರುವ ದುರ್ಘಟನೆ ಬೆಳ್ಳಂದೂರಿನ ಸರ್ಜಾಪುರ ರಸ್ತೆಯಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿ ಸುಮಾರು ಮೂವತ್ತು ವರ್ಷ ವಯೋಮಾನದವನಾಗಿದ್ದು, ಮೃತನ ಹೆಸರು, ವಿಳಾಸ ಸದ್ಯಕ್ಕೆ ಪತ್ತೆಯಾಗಿಲ್ಲ. ಸರ್ಜಾಪುರ ರಸ್ತೆ, ಕೈಗೊಂಡನಹಳ್ಳಿಯ ಲಕ್ಷ್ಮೀನಾರಾಯಣ ಯುವತಿಯರ ವಸತಿಗೃಹಕ್ಕೆ ಮುಂಜಾನೆ 3ಗಂಟೆ ವೇಳೆಯಲ್ಲಿ ವ್ಯಕ್ತಿಯೊಬ್ಬ ಬಂದಿದ್ದು, ಒಳ ನುಗ್ಗಿ ಮೊಬೈಲ್, ಲ್ಯಾಪ್‌ಟಾಪ್ ದೋಚಲು ಯತ್ನಿಸಿದ್ದಾನೆ ಎಂದು ಹೇಳಲಾಗಿದೆ.
ಈ ಸಂದರ್ಭದಲ್ಲಿ ಉಂಟಾದ ಶಬ್ದದಿಂದ ಯುವತಿಯರು ರಕ್ಷಣೆಗಾಗಿ ಜೋರಾಗಿ ಕೂಗಿಕೊಂಡಿದ್ದಾರೆ. ಹೀಗಾಗಿ ಪರಾರಿಯಾಗಲು ಯತ್ನಿಸಿದ ವ್ಯಕ್ತಿ ನಾಲ್ಕನೆ ಮಹಡಿಯ ಮೇಲ್ಚಾವಣೆಯಿಂದ ಮತ್ತೊಂದು ಕಟ್ಟಡಕ್ಕೆ ಜಿಗಿಯುವ ವೇಳೆ ಆಯತಪ್ಪಿಕೆಳಗೆ ಬಿದ್ದು, ಸ್ಥಳದಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಸರ್ಜಾಪುರ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.