ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿರೋಧಿಸಿ ಎ.5ರಂದು ಗಡಿ ಬಂದ್: ವಾಟಾಳ್ ನಾಗರಾಜ್
ಬೆಂಗಳೂರು, ಎ.2: ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡಬೇಕು ಎಂದು ಆಗ್ರಹಿಸಿ ತಮಿಳುನಾಡಿನಲ್ಲಿ ಎ.5 ರಂದು ಬಂದ್‌ಗೆ ಕರೆ ಕೊಟ್ಟಿರುವುದನ್ನು ವಿರೋಧಿಸಿ ಅತ್ತಿಬೆಲೆ ಗಡಿ ಬಂದ್ ಮಾಡಲಾಗುತ್ತದೆ ಎಂದು ಕನ್ನಡ ಚಳವಳಿ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಎಚ್ಚರಿಕೆ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ತಮಿಳುನಾಡು ರಾಜಕೀಯ ಮಾಡುತ್ತಿದೆ. ಕರ್ನಾಟಕದ ನೀರಿನ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ನೀರು ಬಿಡುತ್ತೇವೆ. ಅದರ ಮೇಲೆ ಒಂದು ಹನಿ ನೀರು ಕೊಡಲ್ಲ ಎಂದು ತಿಳಿಸಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕನ್ನಡ ಪರ ಸಂಘಟನೆಗಳ ಅಭ್ಯರ್ಥಿಗಳಿಗೆ ರಾಜಕೀಯ ಪಕ್ಷಗಳು ಬೆಂಬಲ ನೀಡಬೇಕು ಎಂದ ಅವರು, ಮಹಾರಾಷ್ಟ್ರ ಏಕೀಕರಣ ಸಮಿತಿ ಕರ್ನಾಟಕದಲ್ಲಿ ಚುನಾವಣೆಗೆ ನಿಂತು ಗೆಲ್ಲುತ್ತಾರೆ. ಆದರೆ, ಕನ್ನಡಪರ ಹೋರಾಟಗಾರರು ನಿಂತು ಗೆಲ್ಲಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಈ ಬಾರಿ ಎಂಇಎಸ್ ವಿರುದ್ಧ ಕನ್ನಡಪರ ಕಾರ್ಯಕರ್ತರು ಚುನಾವಣೆಗೆ ನಿಲ್ಲಬೇಕು. ಅವರನ್ನು ಎಲ್ಲರೂ ಬೆಂಬಲಿಸಬೇಕು ಎಂದರು.
ಮುಂದಿನ ಶಾಸನಸಭೆಯಲ್ಲಿ ಕನಿಷ್ಟ 15 ಕ್ಕೂ ಅಧಿಕ ಜನರು ಕನ್ನಡಪರ ಸಂಘಟನೆ ಕಾರ್ಯಕರ್ತರಿರಬೇಕು. ಅವರು ನಿರಂತರ ಕನ್ನಡದ ಪರ ಧ್ವನಿ ಎತ್ತಬೇಕು ಎಂದ ವಾಟಾಳ್ ನಾಗರಾಜ್, ರಾಷ್ಟ್ರೀಯ ಪಕ್ಷಗಳು ಚೌಕಟ್ಟಿನ ಅಡಿಯಲ್ಲಿ ಕೆಲಸ ಮಾಡುತ್ತವೆ. ಹೀಗಾಗಿ, ಪ್ರಾದೇಶಿಕ ಪಕ್ಷಗಳನ್ನು ಕಡೆಗಣಿಸಲಾಗುತ್ತದೆ. ಆದುದರಿಂದ ಮುಂದಿನ ದಿನಗಳಲ್ಲಿ ಪ್ರಾದೇಶಿಕ ಪಕ್ಷಗಳ ಅಗತ್ಯವಿದ್ದು, ಅದನ್ನು ಬೆಂಬಲಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ಕನ್ನಡ ಚಳವಳಿ ವಾಟಾಳ್ ಪಕ್ಷದ ನೇತೃತ್ವದಲ್ಲಿ ಕರ್ನಾಟಕ ಪ್ರಜಾ ಸಂಯುಕ್ತ ರಂಗ ರಚನೆ ಮಾಡಲಾಗಿದೆ. ಇದರ ಅಡಿಯಲ್ಲಿ ಎಲ್ಲ ಕನ್ನಡಪರ ಸಂಘಟನೆಗಳು ಪ್ರತ್ಯೇಕವಾಗಿ ಚುನಾವಣೆಗೆ ಸ್ಪರ್ಧಿಸಿದರೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ. ಈ ಮೂಲಕ ನಾಡು-ನುಡಿ ಉಳಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ತಿಳಿಸಿದರು.