×
Ad

ಯಡಿಯೂರಪ್ಪ ಟೀಕೆಗೆ ಪೌರ ಕಾರ್ಮಿಕರ ಸಂಘ ತೀವ್ರ ಖಂಡನೆ

Update: 2018-04-02 21:45 IST

ಬೆಂಗಳೂರು, ಎ.2: ಇತ್ತೀಚೆಗೆ ಬೆಂಗಳೂರಿನಲ್ಲಿ ಪೌರ ಕಾರ್ಮಿಕರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಪೌರಕಾರ್ಮಿಕರಿಗಾಗಿ ಏನೂ ಮಾಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಟೀಕೆ ಮಾಡಿರುವುದನ್ನು ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರ ಕಾರ್ಮಿಕರ ಮಹಾಸಂಘ ತೀವ್ರವಾಗಿ ಖಂಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಂಘದ ಅಧ್ಯಕ್ಷ ನಾರಾಯಣ, ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಚುನಾವಣೆಯಲ್ಲಿ ಮತಗಳನ್ನು ಪಡೆಯುವ ಸಲುವಾಗಿ ಸುಳ್ಳು ಹೇಳಲು ಮುಂದಾಗಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪೌರ ಕಾರ್ಮಿಕರಿಗಾಗಿ ಯಾವುದೇ ಯೋಜನೆ ಜಾರಿ ಮಾಡಿಲ್ಲ. ಇದೀಗ ಸಿದ್ದರಾಮಯ್ಯ ಸರಕಾರವನ್ನು ಟೀಕೆ ಮಾಡಲು ಮುಂದಾಗಿರುವುದು ಹಾಸ್ಯಾಸ್ಪದ ಎಂದು ಹೇಳಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದಾಗಿನಿಂದ ಇದುವರೆಗೂ ಪೌರ ಕಾರ್ಮಿಕರು ಸಮಾಜದ ಮುಖ್ಯವಾಹಿನಿಗೆ ಬರಲು ಹಾಗೂ ಪ್ರಗತಿ ಹೊಂದಲು ಹಲವು ಮಹತ್ವವಾದ ಯೋಜನೆಗಳನ್ನು ರೂಪಿಸಲಾಗಿದೆ. ಅಲ್ಲದೆ, ಅದನ್ನು ಪ್ರಾಮಾಣಿಕವಾಗಿ ಜಾರಿ ಮಾಡಲಾಗಿದೆ. ರಾಜ್ಯದಲ್ಲಿನ ಪೌರ ಕಾರ್ಮಿಕರಿಗೆ ಸಿಗುವಷ್ಟು ವೇತನ ಹಾಗೂ ಮತ್ತಿತರೆ ಸೌಲಭ್ಯಗಳು ಬೇರೆ ಎಲ್ಲಿಯೂ ಇಲ್ಲ. ರಾಜ್ಯ ಗುತ್ತಿಗೆ ಪೌರ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಉದ್ಯೋಗ ಭದ್ರತೆ, ಆರೋಗ್ಯ ಭದ್ರತೆ ಸೇರಿದಂತೆ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಅಧಿಕಾರ ಅವಧಿಯಲ್ಲಿ ದೇಶದಲ್ಲಿ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಪದ್ಧತಿ ರದ್ದು ಮಾಡಿದರು. ವೇತನವನ್ನು 17,850ಕ್ಕೆ ಏರಿಕೆ ಮಾಡಲಾಯಿತು. ಖಾಲಿಯಿದ್ದ 11 ಸಾವಿರಕ್ಕೂ ಅಧಿಕ ಕಾರ್ಮಿಕರ ಹುದ್ದೆಗಳಿಗೆ ಗುತ್ತಿಗೆ ಪೌರ ಕಾರ್ಮಿಕರನ್ನು ನೇಮಕ ಮಾಡಲಾಯಿತು. ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯ ಹಣದಲ್ಲಿ ಪೌರ ಕಾರ್ಮಿಕ ಸಮುದಾಯದ ಕಲ್ಯಾಣಕ್ಕಾಗಿ ಶೇ.20 ರಷ್ಟು ಹಣ. ಮೀಸಲಿಡಲಾಯಿತು ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News