ರವಿಕೃಷ್ಣಾರೆಡ್ಡಿ ಬೆಂಬಲಿಸಿ ಯೋಗೇಂದ್ರ ಯಾದವ್ ಪ್ರಚಾರ: ಎ.4ರಂದು ಒಂದು ವೋಟು ಒಂದು ನೋಟು ಅಭಿಯಾನಕ್ಕೆ ಚಾಲನೆ
ಬೆಂಗಳೂರು, ಎ.2: ಜಯನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ರವಿ ಕೃಷ್ಣಾರೆಡ್ಡಿಯ ಪರವಾಗಿ ಸ್ವರಾಜ್ ಇಂಡಿಯಾದ ಅಧ್ಯಕ್ಷ ಯೋಗೇಂದ್ರ ಯಾದವ್ ಎ.4ರಂದು ಪ್ರಚಾರ ಮತ್ತು ಒಂದು ವೋಟು, ಒಂದು ನೋಟು ದೇಣಿಗೆ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ಜಯನಗರದ 4ನೆ ಬ್ಲಾಕ್‌ನಲ್ಲಿರುವ ಮೈಯ್ಯಾಸ್ ಹೊಟೇಲ್ ವೃತ್ತದಲ್ಲಿ ಎ.4ರಂದು ಬೆಳಗ್ಗೆ 8.30ಕ್ಕೆ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಶಾಂತವೇರಿ ಗೋಪಾಲಗೌಡರಂತಹ ಆದರ್ಶವಾದಿ ಮತ್ತು ಜನಪರ ರಾಜಕಾರಣಿಗಳು ನಾಲ್ಕೈದು ದಶಕಗಳ ಹಿಂದೆಯೇ ಒಂದು ವೋಟು, ಒಂದು ನೋಟು ಕಲ್ಪನೆಯನ್ನು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜಾರಿಗೆ ತಂದು, ಜನರ ದೇಣಿಗೆ ಹಣದಿಂದಲೇ ನ್ಯಾಯಯುತವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿದ್ದಾರೆ.
ಈ ಕಲ್ಪನೆಯನ್ನೆ ಆಧರಿಸಿ ಜಯನಗರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ರವಿಕೃಷ್ಣಾರೆಡ್ಡಿ ಪರವಾಗಿ ಒಂದು ವೋಟು ಒಂದು ನೋಟು ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ವೇಳೆ ಸ್ವರಾಜ್ ಇಂಡಿಯಾದ ಮುಖಂಡ ಹಿರಿಯ ಸಾಹಿತಿ ದೇವನೂರ ಮಹಾದೇವ, ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಎಸ್.ಆರ್. ಹಿರೇಮಠ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ದೂ.7975625575ಕ್ಕೆ ಸಂಪರ್ಕಿಸಲು ಪ್ರಕಟನೆಯಲ್ಲಿ ತಿಳಿಸಲಾಗಿದೆ.