ದಲಿತರ ಮೇಲಿನ ದೌರ್ಜನ್ಯ: ನ್ಯಾಯಾಲಯದ ಬಾಯಿ ಬಂದ್!

Update: 2018-04-03 04:31 GMT

ಹೆಚ್ಚುತ್ತಿರುವ ದಲಿತ ದೌರ್ಜನ್ಯಗಳ ಹಿನ್ನೆಲೆಯಲ್ಲಿ, ದೇಶಾದ್ಯಂತ ದಲಿತರು ದಲಿತ ದೌರ್ಜನ್ಯ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತಿಲ್ಲ ಎಂದು ಬೀದಿಗಿಳಿಯಬೇಕಾಗಿತ್ತು. ದುರದೃಷ್ಟವಶಾತ್, ಇಂದು ಅವರು ದಲಿತ ದೌರ್ಜನ್ಯ ಕಾಯ್ದೆಯನ್ನು ದುರ್ಬಲಗೊಳಿಸದಂತೆ ನ್ಯಾಯಾಲಯವನ್ನು ಒತ್ತಾಯಿಸುವುದಕ್ಕಾಗಿ ಬೀದಿಗಿಳಿಯಬೇಕಾಗಿ ಬಂದಿದೆ. ಸರ್ವೋಚ್ಚ ನ್ಯಾಯಾಲಯವು ಮಾ. 20ರಂದು ನೀಡಿರುವ ಆದೇಶದಲ್ಲಿ ಈ ಕಾಯ್ದೆಯಲ್ಲಿ ಎರಡು ಮಹತ್ವದ ಬದಲಾವಣೆಗಳನ್ನು ಮಾಡಿತ್ತು. ಅಂದರೆ ದಲಿತ ದೌರ್ಜನ್ಯ ಕಾಯ್ದೆಯನ್ನು ದುರುಪಯೋಗಗೊಳಿಸಲಾಗುತ್ತಿದೆ ಎಂಬ ನೆಪವೊಡ್ಡಿ ಕಾಯ್ದೆಯನ್ನು ನ್ಯಾಯಾಲಯ ದುರ್ಬಲಗೊಳಿಸಿತ್ತು. ಅತ್ಯಂತ ವಿಷಾದನೀಯ ಸಂಗತಿಯೆಂದರೆ, ಈ ಕಾನೂನು ಜಾರಿಯಾದಂದಿನಿಂದ, ಎಷ್ಟರಮಟ್ಟಿಗೆ ಅದು ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯಲು ಯಶಸ್ವಿಯಾಗಿದೆ ಎನ್ನುವುದರ ಬಗ್ಗೆ ನ್ಯಾಯಾಲಯ ಯಾವುದೇ ಆಸಕ್ತಿಯನ್ನು ತೋರಿಸಿಲ್ಲ.

ಈ ದೌರ್ಜನ್ಯ ಕಾಯ್ದೆಯನ್ನು ದಲಿತರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎನ್ನುವುದರ ಬಗ್ಗೆ ನ್ಯಾಯಾಲಯ ಆತಂಕ ಹೊಂದಿರುವುದು ಸರಿಯೆಂದೇ ಇಟ್ಟುಕೊಳ್ಳೋಣ. ಆದರೆ ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸದ ವ್ಯವಸ್ಥೆಯ ವಿರುದ್ಧ ಯಾಕೆ ಅದು ಮೃದುವಾಗಿದೆ?. ಇತ್ತೀಚಿನ ದಿನಗಳಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ. ದೇವಸ್ಥಾನಕ್ಕೆ ಪ್ರವೇಶ ಮಾಡಿದ ಹೆಸರಿನಲ್ಲಿ, ಕುದುರೆಯೇರಿದ ಹೆಸರಿನಲ್ಲಿ, ಮೀಸೆಯಿಟ್ಟ ಕಾರಣಕ್ಕಾಗಿ ದಲಿತರನ್ನು ಕೊಂದು ಹಾಕಲಾಗುತ್ತಿದೆ. ದಲಿತ ದೌರ್ಜನ್ಯ ಕಾಯ್ದೆ ಬರೇ ಬೆರ್ಚಪ್ಪನ ಅಥವಾ ತಟ್ಟೀರಾಯನ ಕೆಲಸ ಮಾಡುತ್ತಿದೆ. ಪೊಲೀಸರು ಉದ್ದೇಶ ಪೂರ್ವಕವಾಗಿಯೇ ಈ ಕಾಯ್ದೆಯ ಅನ್ವಯ ಪ್ರಕರಣ ದಾಖಲಿಸದೇ ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ. ಜೊತೆಗೆ ಈ ಕಾಯ್ದೆಯಡಿಯಲ್ಲಿ ದಲಿತರಿಗೆ ನ್ಯಾಯ ದೊರಕಿದ್ದು ಅತ್ಯಲ್ಪ. ಪರಿಸ್ಥಿತಿ ಹೀಗಿರುವಾಗಲೂ, ದಲಿತರು ಈ ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎನ್ನುವುದೇ ನ್ಯಾಯಾಲಯದ ಪಾಲಿಗೆ ಜ್ವಲಂತ ಸಮಸ್ಯೆಯಾಗಿದೆ. ಅಂದರೆ ನ್ಯಾಯಾಲಯವೇ ಪರೋಕ್ಷವಾಗಿ ಮೇಲ್ಜಾತಿಯ ದೌರ್ಜನ್ಯಕ್ಕೆ ಬೆಂಗಾವಲಾಗಲು ಹೊರಟಿದೆ. ಪರಿಣಾಮವಾಗಿ ಅದು ಈ ಕಾನೂನನ್ನು ದುರ್ಬಲಗೊಳಿಸುವುದಕ್ಕೆ ಮುಂದಾಗಿದೆ.

ನ್ಯಾಯಾಲಯದ ಈ ತೀರ್ಪಿನ ವಿರುದ್ಧ ದಲಿತರಿಗೆ ಬೀದಿಗಿಳಿಯದೇ ಅನ್ಯ ದಾರಿಯೇ ಇದ್ದಿರಲಿಲ್ಲ. ಇದೇ ಸಂದರ್ಭದಲ್ಲಿ ಸರಕಾರ ಪೊಲೀಸರ ಕೋವಿ ಮತ್ತು ಲಾಠಿಗಳ ಮೂಲಕ ಈ ಹೋರಾಟವನ್ನು ಬಗ್ಗು ಬಡಿಯಲು ಮುಂದಾಗಿದೆ. ಕ್ರಿಮಿನಲ್‌ಗಳ ಜೊತೆಗೆ ವರ್ತಿಸುವಂತೆ ಪೊಲೀಸರು ದಲಿತ ಹೋರಾಟಗಾರರ ವಿರುದ್ಧ ವರ್ತಿಸಿದ್ದಾರೆ. ಪೊಲೀಸ್ ಗೋಲಿಬಾರಿಗೆ ಏಳು ಮಂದಿ ದಲಿತರು ಮೃತಪಟ್ಟಿದ್ದಾರೆ. ಒಂದೆಡೆ ನ್ಯಾಯಾಲಯದ ತೀರ್ಪಿನಿಂದ ದಲಿತರಿಗೆ ಅನ್ಯಾಯವಾಗಿದ್ದರೆ, ಮಗದೊಂದೆಡೆ ನ್ಯಾಯಕ್ಕಾಗಿ ಬೀದಿಗಿಳಿದ ದಲಿತರನ್ನು ಅತ್ಯಂತ ಭೀಕರವಾಗಿ ನಡೆಸಿಕೊಳ್ಳುವ ಮೂಲಕ ಗಾಯದ ಮೇಲೆ ಬರೆ ಎಳೆದಿದೆ.ಕಳೆದ ಕೆಲವು ವರ್ಷಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವಿರುದ್ಧದ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಆದರೆ ಅಪರಾಧಿಗಳಿಗೆ ಶಿಕ್ಷೆಯಾದ ಪ್ರಕರಣಗಳ ಸಂಖ್ಯೆಯಲ್ಲಿ ಸ್ಥಿರವಾದ ಇಳಿಕೆ ಕಂಡುಬಂದಿದೆಯೆನ್ನುವುದು ಅಂಕಿಅಂಶಗಳಿಂದ ಬಹಿರಂಗವಾಗಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ವಾರ್ಷಿಕ ಅಂಕಿಅಂಶಗಳ ಪ್ರಕಾರ, 2009ರಿಂದ 2014ರವರೆಗೆ ಪರಿಶಿಷ್ಟ ಜಾತಿಗಳ ವಿರುದ್ಧದ ಅಪರಾಧಗಳ ಸಂಖ್ಯೆಯಲ್ಲಿ ಶೇ.40ರಷ್ಟು ಏರಿಕೆಯಾಗಿದ್ದರೆ, ಪರಿಶಿಷ್ಟ ಬುಡಕಟ್ಟುಗಳ ವಿರುದ್ಧದ ಅಪರಾಧಗಳ ಸಂಖ್ಯೆಯಲ್ಲಿ ಶೇ.118ರಷ್ಟು ಹೆಚ್ಚಳವಾಗಿದೆ.ಪರಿಶಿಷ್ಟ ಜಾತಿ/ಪಂಗಡ (ದೌರ್ಜನ್ಯಗಳ ತಡೆ) ಕಾಯ್ದೆಯಡಿ ಅಪರಾಧಗಳ ದರಗಳಲ್ಲಿ ಗಣನೀಯ ಇಳಿಕೆಯಾಗಿದೆ. ಆದಾಗ್ಯೂ ಈ ಕಾಯ್ದೆಯಡಿ ಶಿಕ್ಷೆಯಾದ ಪ್ರಕರಣಗಳ ಸಂಖ್ಯೆಯು ಸಾಮಾನ್ಯವಾಗಿ ಇತರ ಎಲ್ಲಾ ಅಪರಾಧಗಳಲ್ಲಿ ಶಿಕ್ಷೆಯಾದ ಪ್ರಕರಣಗಳಿಗಿಂತ ಗಣನೀಯವಾಗಿ ಕಡಿಮೆಯಾಗಿದೆ. 2007ರಿಂದ 2016ರವರೆಗಿನ 10 ವರ್ಷಗಳ ಅವಧಿಯ ರಾಷ್ಟ್ರೀಯ ದತ್ತಾಂಶದ ಪ್ರಕಾರ ಪರಿಶಿಷ್ಟ ಜಾತಿಗಳ ವಿರುದ್ಧದ ಅಪರಾಧಗಳಲ್ಲಿ ಸರಾಸರಿ ಶಿಕ್ಷೆಯಾದ ದರವು 28.8 ಆಗಿದ್ದರೆ, ಪರಿಶಿಷ್ಟ ಪಂಗಡಗಳ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಸರಾಸರಿ ಶಿಕ್ಷೆಯ ದರವು 25.2 ಆಗಿರುತ್ತದೆ. ಭಾರತೀಯ ಅಪರಾಧ ದಂಡಸಂಹಿತೆಯಡಿ ಎಲ್ಲಾ ಅಪರಾಧಗಳಿಗಾಗಿನ ಸರಾಸರಿ ಶಿಕ್ಷೆಯ ದರವು 42.5 ಆಗಿರುತ್ತದೆ.

ದೌರ್ಜನ್ಯಗಳ ಕಾಯ್ದೆಯಡಿ ಸ್ವಯಂಚಾಲಿತವಾಗಿ ನಡೆಯುವ ಬಂಧನಗಳು ಅಮಾಯಕರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸುವುದಕ್ಕೆ ಕಾರಣವಾಗುತ್ತವೆಯೆಂದು ಸುಪ್ರೀಂಕೋರ್ಟ್ ಆತಂಕವನ್ನು ವ್ಯಕ್ತಪಡಿಸಿದೆ. ಆದರೆ ಶೇ.9 ರಿಂದ ಶೇ.10ರಷ್ಟು ಪ್ರಕರಣಗಳು ಮಾತ್ರವೇ ಸುಳ್ಳಾಗಿರುತ್ತವೆ ಎಂಬುದನ್ನು ಪೊಲೀಸ್ ತನಿಖೆಗಳು ಪತ್ತೆಹಚ್ಚಿವೆ. 2016ರಲ್ಲಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ, ಪರಿಶಿಷ್ಟ ಜಾತಿಗಳ ವಿರುದ್ಧದ 40,801 ಪ್ರಕರಣಗಳನ್ನು ಹಾಗೂ ಪರಿಶಿಷ್ಟ ಪಂಗಡಗಳ ವಿರುದ್ಧದ 6,568 ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಿವೆ. ಇದರ ಜೊತೆಗೆ ಹಿಂದಿನ ವರ್ಷಗಳಲ್ಲಿ ಪೊಲೀಸರು ತನಿಖೆ ನಡೆಸಿದ ಪ್ರಕರಣಗಳು ಬಾಕಿಯಿವೆೆ ಹಾಗೂ ಪರಿಶಿಷ್ಟ ಜಾತಿಗಳ ವಿರುದ್ಧದ ದೌರ್ಜನ್ಯಗಳ ಶೇ.78 ಪ್ರಕರಣಗಳಲ್ಲಿ ಹಾಗೂ ಪರಿಶಿಷ್ಟ ಪಂಗಡಗಳ ವಿರುದ್ಧದ ಶೇ. 81 ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ.

ಆ ವರ್ಷವೇ ನ್ಯಾಯಾಲಯಗಳು ಪರಿಶಿಷ್ಟ ಜಾತಿಗಳ ವಿರುದ್ಧದ 1,44,979 ಪ್ರಕರಣಗಳಲ್ಲಿ ವಿಚಾರಣೆಗಳನ್ನು ನಡೆಸಿವೆ. ಅವುಗಳಲ್ಲಿ ಬಹುತೇಕ ಪ್ರಕರಣಗಳು ಹಿಂದಿನ ವರ್ಷಗಳಲ್ಲಿ ವಿಚಾರಣೆಗೆ ಬಾಕಿಯುಳಿದಿರುವುದಾಗಿವೆ. ಆದರೆ ಕೇವಲ 14,615 ಪ್ರಕರಣಗಳಲ್ಲಿ ಮಾತ್ರ ಅವು ವಿಚಾರಣೆಯನ್ನು ಪೂರ್ಣಗೊಳಿಸಿವೆ. 3,753 ಪ್ರಕರಣಗಳಲ್ಲಿ ನ್ಯಾಯಾಲಯಗಳು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿದ್ದು, ಇದರ ಪರಿಣಾಮವಾಗಿ 2016ರಲ್ಲಿ ಶಿಕ್ಷೆ ವಿಧಿಸಲ್ಪಟ್ಟ ದರವು 25.7 ಆಗಿತ್ತು. ಅದೇ ರೀತಿ, ಕಳೆದ ವರ್ಷ 23,408 ಪ್ರಕರಣಗಳು ನ್ಯಾಯಾ ಲಯದಲ್ಲಿ ಆಲಿಕೆಯಾಗಿದ್ದರೆ, 2,895 ಪ್ರಕರಣಗಳ ವಿಚಾರಣೆ ಪೂರ್ಣ ಗೊಂಡಿದ್ದು, ಅಪರಾಧಿಗಳಿಗೆ ಶಿಕ್ಷೆಯ ದರವು 20.8 ಆಗಿತ್ತು.

 ಹಲವಾರು ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಗಳು ಹಾಗೂ ಪಂಗಡಗಳ ವಿರುದ್ಧದ ಶಿಕ್ಷೆಯ ದರವು ರಾಷ್ಟ್ರೀಯ ಸರಾಸರಿಗಿಂತ ದಯನೀಯವಾಗಿ ಕಡಿಮೆಯಾಗಿದೆ. ಉದಾಹರಣೆಗೆ 2016ರಲ್ಲಿ ಪರಿಶಿಷ್ಟ ದೌರ್ಜನ್ಯ (ತಡೆ) ಕಾಯ್ದೆಯಡಿ ಅಪರಾಧಿಗಳಿಗೆ ಶಿಕ್ಷೆಯ ದರವು ಶೂನ್ಯ ಆಗಿದ್ದರೆ, ಕರ್ನಾಟಕದಲ್ಲಿ ಶಿಕ್ಷೆಯ ದರ ಕೇವಲ 2.8 ಆಗಿದೆ. ಹೀಗಿರುವಾಗ, ನ್ಯಾಯಾಲಯವೇ ದೊಡ್ಡ ದನಿಯಲ್ಲಿ, ದೌರ್ಜನ್ಯ ತಡೆ ಕಾಯ್ದೆ ದುರುಪಯೋಗವಾಗುತ್ತಿದೆ ಎಂದು ಹೇಳುವುದು ಪರೋಕ್ಷವಾಗಿ ದಲಿತರ ಮೇಲೆ ದೌರ್ಜನ್ಯ ನಡೆಸಲು ಸಿಗುವ ಕುಮ್ಮಕ್ಕೇ ಆಗಿರುತ್ತದೆ. ಜೊತೆಗೆ ದೌರ್ಜನ್ಯ ತಡೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲೂ ಹಿನ್ನಡೆಯಾಗಬಹುದು. ಈ ನಿಟ್ಟಿನಲ್ಲಿ ನಮ್ಮ ಕಾನೂನು ವ್ಯವಸ್ಥೆ ಮೊದಲು ದೌರ್ಜನ್ಯ ತಡೆ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಕಡೆಗೆ ಗಮನ ಹರಿಸಬೇಕಾಗಿದೆ. ಇದಾದ ಬಳಿಕವಷ್ಟೇ ಅದರ ದುರುಪಯೋಗದ ಕುರಿತಂತೆ ಯೋಚಿಸಬೇಕಾಗಿದೆ.

ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಮರು ಪರಿಶೀಲಿಸುವಂತೆ ಕೋರಿ ಕೇಂದ್ರವು ಅರ್ಜಿಯನ್ನೇನೋ ಸಲ್ಲಿಸಿದೆ. ಆದರೆ ಈ ತೀರ್ಪಿನ ಹಿಂದೆ ಆರೆಸ್ಸೆಸ್ ಮತ್ತು ಬಿಜೆಪಿಯ ತತ್ವ ಸಿದ್ಧಾಂತಗಳು ಕೆಲಸ ಮಾಡಿರುವುದನ್ನು ಅಲ್ಲಗಳೆಯುವಂತಿಲ್ಲ. ದಲಿತರ ವಿರುದ್ಧ ಇಂತಹದೊಂದು ತೀರ್ಪಿನ ಅಗತ್ಯವಿರುವುದು ಯಾರಿಗೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ದಲಿತರ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವುದನ್ನು ಅವಲಂಬಿಸಿ ಮುಂದುವರಿಯುವ ಕುರಿತಂತೆ ಸರಕಾರ ಯೋಜನೆ ಹಾಕಿಕೊಂಡಿತ್ತು. ಇದೀಗ ಉತ್ತರ ಭಾರತ ಹೊತ್ತಿ ಉರಿಯುತ್ತಿದೆ. ವಿವಿಧ ದಲಿತ ಸಂಘಟನೆಗಳು ಒಂದಾಗಿ ಬೀದಿಗಿಳಿದಿವೆ. ಪೊಲೀಸರು ಅತ್ಯಾಸಕ್ತಿಯಿಂದ ಈ ಪ್ರತಿಭಟನೆಯನ್ನು ದಮನಿಸಲು ಯತ್ನಿಸಿದ್ದಾರೆ.

ಈ ಹಿಂದೆ ಗುರ್ಮೀತ್ ಸಿಂಗ್ ಎಂಬ ನಕಲಿ ಬಾಬಾನ ಶಿಷ್ಯರು ಬೀದಿಗಳಲ್ಲಿ ದೊಂಬಿ ಎಬ್ಬಿಸಿದಾಗ ಮೌನವಾಗಿದ್ದ ಕೋವಿ, ಇದೀಗ ದಲಿತರು ಪ್ರತಿಭಟನೆಗಿಳಿದಾಗ ಮಾತನಾಡಿದೆ. ಮುಂದೊಂದು ದಿನ ಹಕ್ಕುಗಳಿಗಾಗಿ ಬೀದಿಗಿಳಿಯುವ ದಲಿತರನ್ನು ದೇಶದ್ರೋಹಿಗಳು, ಉಗ್ರರು ಎಂದು ಬಿಂಬಿಸಿ ಕೊಂದು ಹಾಕ ತೊಡಗಿದರೆ ಅಚ್ಚರಿಯೇನೂ ಇಲ್ಲ. ಸರಕಾರ ತಕ್ಷಣ ದಲಿತರ ಬೇಡಿಕೆಗಳಿಗೆ ಸ್ಪಂದಿಸಬೇಕಾಗಿದೆ. ಬೇಕೋ ಬೇಡವೋ ಎಂಬಂತೆ ನ್ಯಾಯಾಲಯದಲ್ಲಿ ದುರ್ಬಲವಾದ ಅರ್ಜಿ ಸಲ್ಲಿಸಿ ಪ್ರಕರಣವನ್ನು ನ್ಯಾಯಾಲಯದ ತಲೆಗೆ ಕಟ್ಟಿ ಜಾರಿಕೊಳ್ಳುವಂತಿಲ್ಲ. ನ್ಯಾಯಾಲಯದೊಳಗಿನ ಇತ್ತೀಚಿನ ಬೆಳವಣಿಗೆಗಳು, ಸರಕಾರದ ಹಸ್ತಕ್ಷೇಪಗಳ ಬಗ್ಗೆ ಅರಿವಿರುವ ಯಾರೂ ಕೇಂದ್ರದ ನಾಟಕವನ್ನು ಅರ್ಥ ಮಾಡಿಕೊಳ್ಳಬಲ್ಲರು. ಮೊದಲು ದೌರ್ಜನ್ಯಕ್ಕೊಳಗಾಗಿರುವ ದಲಿತರಿಗೆ ನ್ಯಾಯ ಕೊಡಲು ನ್ಯಾಯಾಲಯ ಆಸಕ್ತಿ ತೋರಿಸಬೇಕು. ಬಳಿಕ, ದೌರ್ಜನ್ಯ ಕಾಯ್ದೆಯ ದುರುಪಯೋಗದ ಬಗ್ಗೆ ಚಿಂತಿಸಲಿ. ಈ ನಿಟ್ಟಿನಲ್ಲಿ ದಲಿತ ದೌರ್ಜನ್ಯ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರಲು ದೇಶದ ಎಲ್ಲ ಶೋಷಿತ ಸಮುದಾಯ ಒಂದಾಗಿ ಬೀದಿಗಿಳಿಯಬೇಕಾದ ಅನಿವಾರ್ಯವಿದೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News