ಶಿಥಿಲಾವಸ್ಥೆಯಲ್ಲಿ ಫಲ್ಗುಣಿ ನದಿಯ 'ಗುರುಪುರ ಸೇತುವೆ!'

Update: 2018-04-03 05:26 GMT

► ಹೋರಾಟಕ್ಕೆ ಸಿಕ್ಕಿಲ್ಲ ನ್ಯಾಯ

► ಚುನಾವಣಾ ಅಸ್ತ್ರವಾಗಿ ಬಳಸಲು ನಿರ್ಧಾರ

ಮಂಗಳೂರು, ಎ.2: ಸುಮಾರು 95 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ರಾಷ್ಟ್ರೀಯ ಹೆದ್ದಾರಿ 169ರ ನಂತೂರು-ಮೂಡುಬಿದಿರೆ ನಡುವಿನ ಫಲ್ಗುಣಿ ನದಿಗಿರುವ 'ಗುರುಪುರ ಸೇತುವೆ'ಯು ಶಿಥಿಲಾವಸ್ಥೆಗೆ ತಲುಪಿದೆ. ಬ್ರಿಟಿಷರ ಕಾಲದ ಈ ಸೇತುವೆಯನ್ನು ನವೀಕರಣಗೊಳಿಸುವುದಲ್ಲದೆ ಹೊಸ ಸೇತುವೆಯನ್ನು ನಿರ್ಮಿಸಬೇಕೆಂಬ ಆಗ್ರಹ ಬಹಳ ಹಿಂದಿನಿಂದಲೂ ಕೇಳಿಬರುತ್ತಿದೆ. ಇದಕ್ಕಾಗಿ ಪಕ್ಷಾತೀತವಾಗಿ ಹೋರಾಟ ಸಮಿತಿ ರಚಿಸಿಕೊಂಡು ಹೋರಾಟವು ನಡೆಯುತ್ತಿದೆ. ಆದರೆ ಈ ಆಗ್ರಹ, ಹೋರಾಟದ ಬಗ್ಗೆ ಕೇಳಿಯೂ ಕೇಳಿಸದಂತೆ ಪ್ರಮುಖ ಜನಪ್ರತಿನಿಧಿಗಳು, ಹೆದ್ದಾರಿ ಇಲಾಖೆಯ ಹಿರಿಯ ಅಧಿಕಾರಿ ವರ್ಗವು ವರ್ತಿಸುತ್ತಿದ್ದು, ಇದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಸೇತುವೆಯ ಅಡಿಭಾಗವನ್ನೊಮ್ಮೆ ಇಣುಕಿ ನೋಡಿದರೆ ಈ ಸೇತುವೆಯಲ್ಲಿ ವಾಹನ ಚಲಾಯಿಸುವುದು ಬಿಡಿ, ನಡೆದಾಡುವುದು ಕೂಡ ಅಪಾಯಕಾರಿ ಎಂಬುದು ವೇದ್ಯವಾಗುತ್ತದೆ. ಆದರೆ ರಾ.ಹೆ. ಇಲಾಖೆಯ ಅಧಿಕಾರಿಗಳು ಮಾತ್ರ ಈ ಸೇತುವೆ ಶಿಥಿಲಾವಸ್ಥೆಯಲ್ಲಿಲ್ಲ, ಸಂಚಾರಕ್ಕೆ ತೊಂದರೆ ಇಲ್ಲ. ಅಗಲ ಕಿರಿದಾದ ಕಾರಣ ಸಂಚಾರ ದಟ್ಟಣೆ ಇರುತ್ತದೆ. ಹಾಗಾಗಿ ಹೊಸ ಸೇತುವೆಯನ್ನು ನಿರ್ಮಿಸಬಹುದಾಗಿದೆ ಎಂದು ಅಭಿಪ್ರಾಯಪಡುತ್ತಾರೆ.

ಐಆರ್‌ಸಿ ನಿಯಮದ ಪ್ರಕಾರ ಈ ಸೇತುವೆ 16 ಮೀ. ಅಗಲವಿರಬೇಕು. ಆದರೆ ಅಷ್ಟು ಅಗಲವಿಲ್ಲದ ಕಾರಣ ಸೇತುವೆಯನ್ನು ಅಗಲೀಕರಣ ಮಾಡಬೇಕಾಗುತ್ತದೆ. ಸಂಚಾರ ದಟ್ಟಣೆ ತಪ್ಪಿಸಲು ಮತ್ತು ಸುಗಮ ಸಂಚಾರಕ್ಕೆ ಸೇತುವೆಯ ಅಗಲೀಕರಣದ ಬದಲು ಪಕ್ಕದಲ್ಲೇ ಇನ್ನೊಂದು ಸೇತುವೆಯನ್ನು ನಿರ್ಮಿಸಿ 'ಹೋಗಲೊಂದು-ಬರಲೊಂದು' ಎಂಬ ವ್ಯವಸ್ಥೆ ಮಾಡಬಹುದು ಎಂದು ಸ್ಥಳೀಯರ ಅನಿಸಿಕೆಯಾಗಿದೆ.

ಸ್ಥಳೀಯರೇ ಹೇಳುವ ಪ್ರಕಾರ 1923ರಲ್ಲಿ ನಿರ್ಮಾಣ ಗೊಂಡ ಸೇತುವೆ ಇದಾಗಿದೆ. ಬ್ರಿಟಿಷರು ಅಂದು ಕಪ್ಪ-ಕಾಣಿಕೆಗಳನ್ನು ಸಂಗ್ರಹಿಸಲು ಇಲ್ಲಿ ಸೇತುವೆ ನಿರ್ಮಿಸಿ ದರು. ಅಂದು ಇದರಲ್ಲಿ ಹೆಚ್ಚಾಗಿ ಕುದುರೆಗಾಡಿಗಳು ತೆರಳುತ್ತಿದ್ದವು. ಕಾಲಕ್ರಮೇಣ ಇದನ್ನು ವಾಹನ ಸಂಚಾರಕ್ಕೆ ಬಳಸಲಾಯಿತು. ಮಂಗಳೂರು-ಕಾರ್ಕಳ ನಡುವಿನ ರಾಜ್ಯ ಹೆದ್ದಾರಿಯಲ್ಲಿ ಸಿಗುವ ಈ ಸೇತುವೆಯು 1999ರಲ್ಲಿ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿತು. ಅಷ್ಟೇ ಅಲ್ಲ, ಇದನ್ನು ಚತುಷ್ಪಥ ರಸ್ತೆಯನ್ನಾಗಿಸುವ ಪ್ರಸ್ತಾಪ ಮುಂದಿಡಲಾಯಿತು. ಆದರೆ, ಆಗಲೇ ಇಲ್ಲ. ಕಳೆದ 18 ವರ್ಷಗಳಲ್ಲಿ ಈ ರಸ್ತೆಗೆ ಕೇವಲ 2 ಬಾರಿ ಮಾತ್ರ ಡಾಮ ರೀಕರಣ ಮಾಡಲಾಯಿತು. ಇತ್ತೀಚೆಗೆ ತೇಪೆ ಹಾಕಲೆಂದೇ 19 ಕೋ.ರೂ. ವ್ಯಯಿಸಲಾಯಿತು. ಇದಕ್ಕೆ ಒಂದಷ್ಟು ಹೆಚ್ಚುವರಿ ಹಣ ವಿನಿಯೋಗಿಸಿ ಕಾಂಕ್ರಿಟೀಕರಣ ಮತ್ತು ಸೇತುವೆಯ ನವೀಕರಣ ಕಾರ್ಯ ಮಾಡಬಹುದಾಗಿತ್ತು. ಆದರೆ, ಜನಪ್ರತಿನಿಧಿಗಳ ನಿರ್ಲಕ್ಷದಿಂದ ಎಲ್ಲವೂ ನನೆಗುದಿಗೆ ಬಿದ್ದಿವೆ.

ರಾಷ್ಟ್ರೀಯ ಹೆದ್ದಾರಿಯಾಗಿ ಮಾರ್ಪಾಟು ಹೊಂದಿರುವ ಈ ರಸ್ತೆಯ ಮಧ್ಯೆ ಸಿಗುವ ಸೇತುವೆಯು ಏಕಕಾಲಕ್ಕೆ ಅಂದಾಜು 40 ಟನ್ ಭಾರವನ್ನು ಹೊರುತ್ತದೆ. ಮಂಗಳೂರು, ಕೈಕಂಬ

, ಮೂಡುಬಿದಿರೆ, ಕಾರ್ಕಳ ಮತ್ತಿತರ ಪ್ರದೇಶ ವನ್ನು ಸಂಪರ್ಕಿ ಸುವ ಈ ಸೇತುವೆಯಲ್ಲಿ ಸದ್ಯ ದಿನಕ್ಕೆ ಕನಿಷ್ಠ 600ರಷ್ಟು ಬಸ್‌ಗಳಲ್ಲದೆ ಇತರ ಸಾವಿರಾರು ವಾಹನಗಳು ಚಲಿಸುತ್ತಿವೆ. 170 ಮೀ. ಉದ್ದದ ಈ ಸೇತುವೆ 5 ಮೀ. ಅಗಲವಿದೆ. ರಾಷ್ಟ್ರೀಯ ರಸ್ತೆ ನಿಯಮದ ಪ್ರಕಾರ ಇದು ಕನಿಷ್ಠ 16 ಮೀ. ಅಗಲವಿರಬೇಕು. ಆದರೆ ಇಲ್ಲಿ ಅಷ್ಟು ಅಗಲವಿಲ್ಲದ ಕಾರಣ ಮತ್ತು ಇದೇ ಪ್ರಮುಖ ಕೊಂಡಿ ಸೇತುವೆ-ರಸ್ತೆಯಾದ ಕಾರಣ ದಿನನಿತ್ಯ ಇಲ್ಲಿ ಟ್ರಾಫಿಕ್ ಜಾಮ್ ಆಗುತ್ತಲೇ ಇದೆ. ಪೀಕ್ ಹವರ್‌ಗಳಲ್ಲಿ ಇದರ ಬಳಿ ಹೋದರೆ ಅತ್ತಿಂದಿತ್ತ ದಾಟು ವುದು ದುಸ್ತರ ಎಂಬಂತಾಗಿದೆ. ಇನ್ನು ಸೇತುವೆಗೆ ಆಧಾರ ಸ್ಥಂಭ ದಂತಿರುವ ಪಿಲ್ಲರ್ ಕೂಡ ತುಕ್ಕು ಹಿಡಿದಿವೆ. ಉಪ್ಪು ನೀರಿಗೆ ಈ ಪಿಲ್ಲರ್ ಕರಗಿ ತನ್ನ ಮೂಲ ಅಸ್ತಿತ್ವವನ್ನು ಮರೆ ಮಾಚಿಸುತ್ತಿವೆ.

ಮೇಲ್ನೋಟಕ್ಕೆ ಈ ಸೇತುವೆಯು ಶಿಥಿಲಾವಸ್ಥೆಗೆ ತಲುಪಿ ದ್ದರೂ ಕೂಡ ಅಧಿಕಾರಿಗಳು ಮಾತ್ರ ಇದು ಸಂಚಾರಕ್ಕೆ ಯೋಗ್ಯ ಎಂದು ಅಭಿಪ್ರಾಯಪಡುತ್ತಾರೆ. ಈ ಬಗ್ಗೆ ಸ್ಥಳೀಯರು ಮಾತ್ರ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾರೆ. ದಿನನಿತ್ಯ ಇವರು ಈ ಸೇತುವೆಯಲ್ಲಿ ಓಡಾಡಲಿ, ಆವಾಗ ಇದರ ಸ್ಥಿತಿಗತಿಯನ್ನು ಈ ಅಧಿಕಾರಿಗಳಿಗೆ ತಿಳಿಯಲು ಸಾಧ್ಯ ಎಂದು ಸಾರ್ವಜನಿಕರು ಹೇಳುತ್ತಾರೆ.

ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೊಂಡು 19 ವರ್ಷವಾದರೂ ಕೂಡ ಅದಿನ್ನೂ ಹೆದ್ದಾರಿಯ ಸ್ವರೂಪ ಪಡೆದಿಲ್ಲ. 170 ಮೀ. ಉದ್ದದ ಈ ಸೇತುವೆಯಲ್ಲಿ ದೀಪವೇ ಇಲ್ಲ. ಹಾಗಾಗಿ ರಾತ್ರಿ ಸಂಚಾರವಂತೂ ಈ ಸೇತುವೆಯಲ್ಲಿ ದುಸ್ತರವಾಗಿದೆ. ಹೊರ ರಾಜ್ಯದ ವಾಹನಿಗರು ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲದೆ ವಾಹನ ಚಲಾಯಿಸಿಕೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ, ಸ್ಥಳೀಯರು.

ಸುಳ್ಳೇ ಹೇಳುತ್ತಾರೆ...

ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸುಳ್ಳನ್ನೇ ಹೇಳುತ್ತಾರೆ. 2012ರಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಆಗಮಿಸಿ ಸೇತುವೆ ನಿರ್ಮಾಣದ ಬಗ್ಗೆ ಆಶ್ವಾಸನೆ ನೀಡಿದರು. ಆದರೆ, ಅದು ಈಡೇರಲಿಲ್ಲ. ಸಂಸದ ನಳಿನ್ ಕುಮಾರ್ ಕಟೀಲು ಅಂತೂ ಕನಿಷ್ಠ 10 ಬಾರಿ ಈ ಬಗ್ಗೆ ಸುಳ್ಳು ಹೇಳಿರಬಹುದು. ಇದೀಗ 2019ರ ಫೆಬ್ರವರಿಯಲ್ಲಿ ಕಾಮಗಾರಿ ಆರಂಭಿಸಲಾಗುವುದು ಎನ್ನುತ್ತಾರೆ. 2019 ಅಲ್ಲ, 2020 ಆದರೂ ಇದರ ಕಾಮಗಾರಿ ಆರಂಭವಾಗುವುದಿಲ್ಲ. ಈ ಸೇತುವೆಯನ್ನು ಅಭಿವೃದ್ಧಿ ಮಾಡದೆ ನಿರ್ಲಕ್ಷಿಸುವುದರ ಹಿಂದೆ ಭಾರೀ ದೊಡ್ಡ ಲಾಬಿ ಇದೆ. ಕೃಷ್ಣ ಜೆ.ಪಾಲೆಮಾರ್ ಸಚಿವರಾಗಿದ್ದಾಗ ಅದಿರು ಸಾಗಾಟದ ಸಾವಿರಾರು ಲಾರಿಗಳು ಈ ಸೇತುವೆಯಲ್ಲಿ ಸಂಚರಿಸಲು ಸಿದ್ಧತೆ ನಡೆಸಿತ್ತು. ನಾವದನ್ನು ಪ್ರತಿಭಟಿಸಿ ಸಂಚರಿಸದಂತೆ ಮಾಡಿದೆವು. ಒಂದು ವೇಳೆ ನಾವದನ್ನು ನಿಂತು ಸುಮ್ಮನೆ ನೋಡಿದ್ದರೆ ಇಂದು ಈ ಸೇತುವೆಯೇ ಇರುತ್ತಿರಲಿಲ್ಲ. ಇನ್ನು ಈ ಸೇತುವೆಯ ಬಗ್ಗೆ ನಾವು ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಿದ್ದೇವೆ. ಮಾಹಿತಿ ಹಕ್ಕಿನಲ್ಲೂ ಕೆಲವು ಮಾಹಿತಿ ಪಡೆದುಕೊಂಡಿದ್ದೇವೆ. ನಮಗೆ ಗುರುಪುರ ಸೇತುವೆ ಸುಗಮ ಸಂಚಾರಕ್ಕೆ ಯೋಗ್ಯವಾದರೆ ಸಾಕು. ಆವರೆಗೆ ಹೋರಾಟ ಮಾಡುವೆವು.

  -ಸುದರ್ಶನ ಶೆಟ್ಟಿ

 ಉಪಾಧ್ಯಕ್ಷರು, ರಾ.ಹೆ. 169 ಹೋರಾಟ ಸಮಿತಿ

ಗುರುಪುರ ಸೇತುವೆಯ ನವೀಕರಣ ಮಾತ್ರವಲ್ಲ, ಹೊಸ ಸೇತುವೆಯ ನಿರ್ಮಾಣ ಆಗಬೇಕಿದೆ. ಇದರಿಂದ ಈ ಭಾಗದ ಸಾವಿರಾರು ಮಂದಿಗೆ ಅನುಕೂಲವಾಗಲಿದೆ. ಸೇತುವೆಯು ಸಂಚಾರಕ್ಕೆ ಅಯೋಗ್ಯವಾಗಿದೆ. ಆದರೆ, ಅಧಿಕಾರಿಗಳು ತಮ್ಮದೇ ವಾದ ಮಂಡಿಸುತ್ತಿದ್ದಾರೆ. ಇದು ಸರಿಯಲ್ಲ. ಶೀಘ್ರ ಹೊಸ ಸೇತುವೆ ನಿರ್ಮಾಣಕ್ಕೆ ಹಸಿರು ನಿಶಾನೆ ಸಿಗಲಿ.

 -ಯು.ಪಿ. ಇಬ್ರಾಹೀಂ, ಸದಸ್ಯರು, ದ.ಕ. ಜಿಪಂ

ಮರಳುಗಾರಿಕೆ: ಇನ್ನು ಸೇತುವೆಯ ಆಸುಪಾಸು ಎಗ್ಗಿಲ್ಲದೆ ಮರಳುಗಾರಿಕೆ ನಡೆಯುತ್ತಿದೆ. ಇದರಿಂದ ಸೇತುವೆಯ ಬಳಿ ಮಣ್ಣಿನ ಸವಕಳಿ ಉಂಟಾಗಿದ್ದು, ನೀರಿನ ರಭಸದ ಹೊಡೆತವು ಸೇತುವೆಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ.

ಹೋರಾಟವೇ ಅಸ್ತ್ರ: ಮನವಿ, ಅಹವಾಲು ಸಲ್ಲಿಸಿದರೂ ಕೂಡ ಸಂಸದ ಸಹಿತ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ ಸ್ಥಳೀಯ ಮುಖಂಡರು ರಾ.ಹೆ.169 ಹೋರಾಟ ಸಮಿತಿಯೊಂದನ್ನು ರಚಿಸಿ ಹೋರಾಟ ನಡೆಸುತ್ತಿದ್ದಾರೆ. ಈ ಮಧ್ಯೆ ವಿಧಾನ ಪರಿಷತ್ ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜ ಕೂಡ ಹೋರಾಟಕ್ಕೆ ಧುಮುಕಿ ಗಮನ ಸೆಳೆದಿದ್ದಾರೆ. ಆದರೆ ಸಕಾಲಕ್ಕೆ ನಿರೀಕ್ಷಿತ ಫಲ ಸಿಗದ ಕಾರಣ ಚುನಾವಣಾ ಅಸ್ತ್ರವಾಗಿ ಪರಿಣಮಿಸುವ ಸಾಧ್ಯತೆ ಇದೆ.

ಸೇತುವೆಯು ಸಂಚಾರಕ್ಕೆ ಯೋಗ್ಯವಾಗಿಲ್ಲ. ಇಲ್ಲಿ ವಾಹನ ಚಲಾಯಿಸುವುದು ಕೂಡ ಅಪಾಯಕಾರಿಯಾಗಿದೆ.ಆದರೆ ಜೀವಭಯದಿಂದ ವಾಹನ ಚಲಾಯಿಸದೆ ವಿಧಿಯಿಲ್ಲ. ಭಾರೀ ಜಾಗರೂಕತೆ ಮತ್ತು ಎಚ್ಚರಿಕೆಯಿಂದ ಇಲ್ಲಿ ವಾಹನ ಚಲಾಯಿಸಬೇಕಿದೆ. ತಾಳ್ಮೆಗೆಟ್ಟು ಏಕಾಏಕಿ ವಾಹನ ಚಲಾಯಿಸಿದರೆ ಮಧ್ಯೆ ಸಿಲುಕಿ ಟ್ರಾಫಿಕ್ ಜಾಮ್ ಆದರೂ ಅಚ್ಚರಿಯಿಲ್ಲ. ಹಾಗಾಗಿ ಸೇತುವೆ ಪ್ರವೇಶಿಸುವ ಮುನ್ನ 17 ಮೀ. ದೂರದ ಇನ್ನೊಂದು ತುದಿಯಲ್ಲಿರುವ ವಾಹನಿಗರಿಗೆ ಸಂಜ್ಞೆ ಮಾಡುವುದು ಅನಿವಾರ್ಯವಾಗಿದೆ. ಇಲ್ಲಿ ಏನಾದರು ಅಪಘಾತ ಮತ್ತಿತ್ಯಾದಿ ಅವಘಡ ಸಂಭವಿಸಿದರೆ ಪೊಲೀಸರು ಕೂಡ ಸಕಾಲಕ್ಕೆ ಲಭ್ಯವಿರುವುದಿಲ್ಲ.

-ರಿಯಾಝ್, ಪಿಕ್‌ಅಪ್ ಚಾಲಕ

ಸೇತುವೆಯ ಡಾಂಬರು ಕಿತ್ತುಹೋಗಿ ಅಲ್ಲಲ್ಲಿ ಹೊಂಡ ಕಾಣಿಸಿತ್ತು. ಅದಕ್ಕೀಗ ತೇಪೆ ಹಾಕಲಾಗಿದೆ. ಇನ್ನು ಎರಡೂ ಬದಿಯ ತಡೆಗೋಡೆ ಕೂಡ ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಭಾರೀ ಗಾತ್ರದ ವಾಹನಗಳು ಸಂಚರಿಸುವಾಗ ಸೇತುವೆಯು ಅಲುಗಾಡಿದಂತಹ ಅನುಭವವಾಗುತ್ತದೆ.

-ಪರಮೇಶ್,  ಟಿಪ್ಪರ್ ಚಾಲಕ

                

Writer - -ಹಂಝ ಮಲಾರ್

contributor

Editor - -ಹಂಝ ಮಲಾರ್

contributor

Similar News