ಸುಳ್ಳು ಸುದ್ದಿ ಪ್ರಕಟಿಸಿದರೆ ಮಾನ್ಯತೆ ರದ್ದು: ಹೊಸ ನಿಯಮ ಹಿಂಪಡೆಯಲು ಪ್ರಧಾನಮಂತ್ರಿ ಕಾರ್ಯಾಲಯ ಸೂಚನೆ

Update: 2018-04-03 09:12 GMT

 ಹೊಸದಿಲ್ಲಿ, ಎ.3: ಸುಳ್ಳು ಸುದ್ದಿ ಪರಿಶೀಲಿಸಲು ಸರಕಾರ ತಂದಿರುವ ಹೊಸ ನಿಯಮ ಹಾಗೂ ಸುಳ್ಳು ಸುದ್ದಿ ಬರೆದಿದ್ದು ಅಥವಾ ಪ್ರಕಟಿಸಿದ್ದು ಸಾಬೀತಾದರೆ ಸೀಮಿತ ಅವಧಿಗೆ ಅಥವಾ ಖಾಯಂ ಆಗಿ ಪತ್ರಕರ್ತರ ಮಾನ್ಯತೆ ರದ್ದುಪಡಿಸುವುದಾಗಿ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ಸೋಮವಾರ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿರುವುದಕ್ಕೆ ಎಲ್ಲ್ಲೆಡೆಯಿಂದ ತೀವ್ರ ಟೀಕೆಗೆ ವ್ಯಕ್ತವಾದ ಬೆನ್ನಿಗೇ ಎಚ್ಚೆತ್ತುಕೊಂಡಿರುವ ಪ್ರಧಾನಮಂತ್ರಿ ಕಾರ್ಯಾಲಯ(ಪಿಎಂಒ)ಹೊಸ ನಿಯಮವನ್ನು ಹಿಂದಕ್ಕೆ ಪಡೆಯುವಂತೆ ನಿರ್ದೇಶನ ನೀಡಿದೆ.ಮಾಹಿತಿ ಹಾಗೂ ಪ್ರಸಾರ ಸಚಿವಾಲಯ  ತಕ್ಷಣವೇ ಹೊಸ ನಿಯಮವನ್ನು ಹಿಂದಕ್ಕೆ ಪಡೆದಿದೆ.

ನಕಲಿ ಸುದ್ದಿಗಳಿಗೆ ಸಂಬಂಧಿಸಿದ ವಿಷಯವನ್ನು ಭಾರತೀಯ ಪತ್ರಿಕಾ ಮಂಡಳಿ(ಪಿಸಿಐ)ಮಾತ್ರ ನಿಭಾಯಿಸಬೇಕು ಎಂದು ಪಿಎಂಒ ಸ್ಪಷ್ಟಪಡಿಸಿದೆ.

ನಕಲಿ ಸುದ್ದಿಗಳನ್ನು ಪರಿಶೀಲಿಸಲು ಬಯಸುವ ಪತ್ರಕರ್ತರ ಸಂಘ ಅಥವಾ ಸಂಘಟನೆಯೊಂದಿಗೆ ತೊಡಗಿಸಿಕೊಳ್ಳಲು ನಮ್ಮ ಸಚಿವಾಲಯ ಸಂತೋಷ ಪಡುತ್ತದೆ. ಅವರು ಸಲಹೆ ನೀಡಲು ಬಯಸಿದರೆ ಒಟ್ಟಿಗೆ ಸೇರಿ ನಕಲಿ ಸುದ್ದಿಯನ್ನು ಅಳಿಸಿಹಾಕಬಹುದು. ಆಸಕ್ತ ಪತ್ರಕರ್ತರು ಅಥವಾ ಪತ್ರಿಕಾ ಮಂಡಳಿಯು ನನ್ನನ್ನು ಭೇಟಿಯಾಗಬಹುದು ಎಂದು ಮಾಹಿತಿ ಹಾಗೂ ಪ್ರಸಾರ ಸಚಿವೆ ಸ್ಮತಿ ಇರಾನಿ ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಪಿಎಂಒ ನಿರ್ದೇಶನ ಹೊರಡಿಸಿದೆ.

 ನಕಲಿ ಸುದ್ದಿಗಳನ್ನು ಪರಿಶೀಲಿಸಲು ಕೇಂದ್ರ ಸರಕಾರ ಹೊಸ ನಿಯಮ ಜಾರಿಗೆ ತರುವುದನ್ನು ಕಾಂಗ್ರೆಸ್ ಹಾಗೂ ಸಿಪಿಎಂ ಪಕ್ಷಗಳು ಹಾಗೂ ಪತ್ರಕರ್ತರು ಪ್ರಶ್ನಿಸಿದ್ದರು. ಈ ಹೆಜ್ಜೆಯ ಮೂಲಕ ಕೇಂದ್ರ ಸರಕಾರ ಪತ್ರಿಕಾ ಸ್ವಾತಂತ್ರವನ್ನು ಹಾಗೂ ಸರಕಾರದ ಬಗ್ಗೆ ಅಹಿತಕರ ಸುದ್ದಿಗಳನ್ನು ನಿಗ್ರಹಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದವು.

ಯಾವ ಸುದ್ದಿ ನಕಲಿ ಎಂದು ನಿರ್ಧರಿಸುವುದು ಕೂಡ ವಿವಾದವಾಗುತ್ತದೆ. ಹೊಸ ನಿಯಮಗಳು ದುರುಪಯೋಗಕ್ಕೆ ಸಾಕಷ್ಟು ಅವಕಾಶ ನೀಡುತ್ತವೆ. ಹೊಸ ನಿಯಮದಿಂದ ಪ್ರಾಮಾಣಿಕ ಪತ್ರಕರ್ತ ಕಿರುಕುಳಕ್ಕೆ ಒಳಗಾಗುವುದಿಲ್ಲ ಎನ್ನುವುದಕ್ಕೆ ಯಾವ ಖಾತ್ರಿಯಿದೆ ಎಂದು ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News