ಜಗತ್ತು ಬೆಚ್ಚಿಬಿದ್ದ 5 ವಿಮಾನ ನಾಪತ್ತೆ ಪ್ರಕರಣಗಳು

Update: 2018-04-03 11:45 GMT

ದುರ್ಗಮ ಪೆಸಿಫಿಕ್ ದ್ವೀಪವೊಂದರಲ್ಲಿ ಪತ್ತೆಯಾದ ಮಾನವ ಮೂಳೆಗಳು 1937ರಲ್ಲಿ ವಿಮಾನದಲ್ಲಿ ವಿಶ್ವ ಪರ್ಯಟನಕ್ಕೆ ಪ್ರಯತ್ನಿಸಿ ನಾಪತ್ತೆಯಾಗಿದ್ದ ಅಮೆಲಿಯಾ ಇಯರ್‌ಹಾರ್ಟ್ ಎಂಬ ಮಹಿಳೆಯ ದ್ದಾಗಿರಬಹುದು ಎಂದು ಸಂಶೋಧಕರು ಇತ್ತೀಚಿಗೆ ಹೇಳಿದ್ದಾರೆ. ವರ್ಷಗಳಿಂದಲೂ ಜನರಲ್ಲಿ ಇನ್ನೂ ಕುತೂಹಲವನ್ನು ಉಳಿಸಿರುವ ವೈಮಾನಿಕ ಜಗತ್ತಿನ ಐದು ನಿಗೂಢತೆಗಳು ಇಲ್ಲಿವೆ...

ಎಂಚ್ 370

ಮಲೇಷಿಯಾ ಏರ್‌ಲೈನ್ಸ್‌ನ ಎಂಎಚ್ 370 ವಿಮಾನವು 2014 ಮಾರ್ಚ್‌ನಲ್ಲಿ ಮಲೇಷಿಯಾದಿಂದ ಚೀನಾದ ಬೀಜಿಂಗ್‌ಗೆ ಹಾರಾಟ ನಡೆಸುತ್ತಿದ್ದಾಗ ಯಾವುದೇ ಸುಳಿವು ನೀಡದೆ ದಿಢೀರ್‌ನೆ ನಾಪತ್ತೆಯಾಗುವುದರೊಂದಿಗೆ ವೈಮಾನಿಕ ಜಗತ್ತಿನ ಅತ್ಯಂತ ನಿಗೂಢ ಪ್ರಕರಣವಾಗಿ ಇತಿಹಾಸದಲ್ಲಿ ದಾಖಲಾಗಿದೆ. ವಿಮಾನದಲ್ಲಿ 239 ಜನರಿದ್ದರು. ವಿಮಾನದ್ದೆನ್ನಲಾದ ಕೆಲವು ಅವಶೇಷಗಳು ಪತ್ತೆಯಾಗಿದ್ದವಾದರೂ ವಿಮಾನಕ್ಕೆ ಏನು ಆಗಿತ್ತು ಎನ್ನುವುದನ್ನು ಖಚಿತವಾಗಿ ನಿರ್ಧರಿಸಲು ಯಾವುದೇ ಸಾಕ್ಷಗಳು ಈವರೆಗೂ ಲಭಿಸಿಲ್ಲ. ಸುಮಾರು 150 ಮಿಲಿಯನ್ ಡಾಲರ್‌ಗಳ ವೆಚ್ಚದಲ್ಲಿ ಮೂರು ವರ್ಷಗಳ ಕಾಲ ನಡೆದ ಶೋಧ ಕಾರ್ಯಾಚರಣೆಯನ್ನು 2017ರಲ್ಲಿ ಕೈಬಿಡಲಾಗಿತ್ತು.

ಹೈಜಾಕರ್

1971, ನವಂಬರ್‌ನಲ್ಲಿ ಡಾನ್ ಕೂಪರ್ ಅಥವಾ ಡಿ.ಬಿ.ಕೂಪರ್ ಎಂದು ಹೇಳಿಕೊಂಡಿದ್ದ ವ್ಯಕ್ತಿಯೋರ್ವ ಸೀಯಾಟ್ಲ್‌ಗೆ ಪ್ರಯಾಣಿಸುತ್ತಿದ್ದ ನಾರ್ಥ್‌ವೆಸ್ಟ್ ಓರಿಯಂಟ್ ಏರ್‌ಲೈನ್ಸ್‌ನ ವಿಮಾನವನ್ನು ಅಪಹರಿಸಿದ್ದ. ಬಲವಂತದಿಂದ ವಿಮಾನವನ್ನು ನೆಲಕ್ಕಿಳಿಸಿದ್ದ ಆತ ಪ್ಯಾರಾಚೂಟ್ ಮತ್ತು ಎರಡು ಲಕ್ಷ ಡಾಲರ್‌ಗೆ ಬೇಡಿಕೆಯನ್ನಿರಿಸಿದ್ದ. ಅವುಗಳನ್ನು ಪಡೆದುಕೊಂಡ ಬಳಿಕ ಆತ ಮೆಕ್ಸಿಕೋದತ್ತ ವಿಮಾನವನ್ನು ಹಾರಿಸುವಂತೆ ಪೈಲಟ್‌ಗೆ ಆದೇಶಿಸಿದ್ದ. ಸೀಯಾಟ್ಲ್ ಮತ್ತು ನೆವಾಡಾದ ರೆನೊ ನಡುವೆ ಆತ ಪ್ಯಾರಾಚೂಟ್ ಬಳಸಿ ವಿಮಾನದಿಂದ ಕೆಳಕ್ಕೆ ಹಾರಿದ್ದ. ಆದರೆ ಈತನನ್ನು ಪತ್ತೆ ಹಚ್ಚುವ ಎಲ್ಲ ಪ್ರಯತ್ನಗಳು ವಿಫಲಗೊಂಡ ಬಳಿಕ ಎಫ್‌ಬಿಐ 2016, ಜುಲೈನಲ್ಲಿ ಪ್ರಕರಣಕ್ಕೆ ಅಂತ್ಯ ಹಾಡಿತು.

ಜೀವವುಳಿಸಿದ ನರಮಾಂಸ ಭಕ್ಷಣೆ

 ಉರುಗ್ವೆಯ ರಗ್ಬಿ ತಂಡದ ಸದಸ್ಯರು ಸೇರಿದಂತೆ 45 ಪ್ರಯಾಣಿಕರನ್ನು ಹೊತ್ತಿದ್ದ ಉರುಗ್ವೆ ವಾಯುಪಡೆಯ ವಿಮಾನವು 1972,ಅ.13ರಂದು ದಕ್ಷಿಣ ಅಮೆರಿಕದ ದುರ್ಗಮ ಆ್ಯಂಡೀಸ್ ಪರ್ವತದಲ್ಲಿ ಪತನಗೊಂಡಿತ್ತು. ಅತ್ಯಂತ ಪ್ರತಿಕೂಲ ಹವಾಮಾನದಿಂದಾಗಿ ಶೋಧ ಕಾರ್ಯವನ್ನು ಎಂಟು ದಿನಗಳ ಬಳಿಕ ಕೈಬಿಡಲಾಗಿತ್ತು. ವಿಮಾನದಲ್ಲಿದ್ದ ಕೆಲವರು ತಕ್ಷಣವೇ ಮೃತರಾಗಿದ್ದರೆ, ಕೆಲವರು ಗಾಯಗೊಂಡಿದ್ದರು. ಇನ್ನು ಕೆಲವರು ಹಿಮಪಾತಕ್ಕೆ ಬಲಿಯಾಗಿದ್ದರು. ಬದುಕುಳಿದವರು ತಮ್ಮ ಬಳಿಯಿದ್ದ ಆಹಾರ ಖಾಲಿಯಾದ ನಂತರ ಸತ್ತವರ ಶವಗಳ ಮಾಂಸವನ್ನು ತಿನ್ನುವ ಅನಿವಾರ್ಯ ನಿರ್ಧಾರಕ್ಕೆ ಬಂದಿದ್ದರು. ಅಂತಿಮವಾಗಿ ನ್ಯಾಂಡೊ ಪರಾಡೊ ಮತ್ತು ರಾಬರ್ಟ್ ಕನೆಸ್ಸಾ ಎನ್ನುವವರು 12 ದಿನಗಳ ಕಠಿಣ ಚಾರಣದ ಬಳಿಕ ಅವರ ರಕ್ಷಣೆಗೆ ತಲುಪಿದ್ದರು. ವಿಮಾನ ಪತನಗೊಂಡ ಬರೋಬ್ಬರಿ 72 ದಿನಗಳ ಬಳಿಕ ಆ 14 ಜನರ ರಕ್ಷಣೆಯಾಗಿತ್ತು. ಈ ಘಟನೆಯನ್ನು ಆಧರಿಸಿ 1993ರಲ್ಲಿ ಅಲೈವ್ ಎಂಬ ಹಾಲಿವುಡ್ ಚಿತ್ರ ಬಿಡುಗಡೆಯಾಗಿತ್ತು.

ತ್ರಿಕೋನದಲ್ಲಿ ಮಂಗಮಾಯ

ಮಿಯಾಮಿ, ಬರ್ಮುಡಾ ಮತ್ತು ಪೋರ್ಟೊ ರಿಕೊಗಳಿಂದ ಸುತ್ತುವರಿದಿರುವ ತ್ರಿಕೋನ ಸ್ವರೂಪದ ಬರ್ಮುಡಾ ಟ್ರಯಾಂಗಲ್‌ನಲ್ಲಿ ಹಲವಾರು ವಿಮಾನಗಳು ಮತ್ತು ಹಡಗುಗಳು ನಾಪತ್ತೆಯಾಗಿವೆ. ಇಂತಹ ಗಮನಾರ್ಹ ಘಟನೆಗಳಲ್ಲಿ 1945,ಡಿ.5ರಂದು ಅಮೆರಿಕ ನೌಕಾಪಡೆಯ ಬಾಂಬರ್ ವಿಮಾನದ ನಾಪತ್ತೆಯು ಒಂದಾಗಿದೆ. ಅದನ್ನು ಹುಡುಕಲು ತೆರಳಿದ್ದ ವಿಮಾನವೂ ನಾಪತ್ತೆಯಾಗಿತ್ತು.

ಅಣ್ವಸ್ತ್ರಗಳಿಂದ ತುಂಬಿದ್ದ ವಿಮಾನ

1956ರಲ್ಲಿ ಅಣ್ವಸ್ತ್ರಗಳನ್ನು ಹೊತ್ತೊಯ್ಯುತ್ತಿದ್ದ ಬೋಯಿಂಗ್ ಬಿ-47 ವಿಮಾನವು ಮೆಡಿಟರೇನಿಯನ್ ಸಮುದ್ರದ ಮೇಲೆ ಹಾರಾಡುತ್ತಿದ್ದಾಗ ನಿಯಂತ್ರಣ ಕೇಂದ್ರದೊಡನೆ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿತ್ತು. ಈ ವಿಮಾನವು ಫ್ಲೋರಿಡಾದ ಮ್ಯಾಕ್‌ಡಿಲ್ ವಾಯುದಳದ ನೆಲೆಯಿಂದ ಮೊರೊಕ್ಕೋದ ಬೆನ್ ಗುರಿರ್ ವಾಯುನೆಲೆಗೆ ನಿಲುಗಡೆರಹಿತ ಹಾರಾಟ ನಡೆಸುತ್ತಿದ್ದು, ಆಗಸದಲ್ಲಿಯೇ ಇಂಧನ ಮರುಪೂರಣ ಮಾಡಲಾಗಿತ್ತು. ಎರಡನೇ ಬಾರಿ ಇಂಧನ ಮರುಪೂರಣಕ್ಕಾಗಿ ತನ್ನ ಹಾರಾಟದ ಎತ್ತರವನ್ನು ತಗ್ಗಿಸಿದ್ದ ವಿಮಾನವು ಇಂಧನ ಟ್ಯಾಂಕರ್ ವಿಮಾನದೊಂದಿಗೆ ಸಂಪರ್ಕವನ್ನು ಕಳೆದುಕೊಂಡಿತ್ತು. ವ್ಯಾಪಕ ಶೋಧ ಕಾರ್ಯಾಚರಣೆಯ ಬಳಿಕವೂ ವಿಮಾನದ ಅವಶೇಷಗಳಾಗಲೀ, ಅದರಲ್ಲಿದ್ದ ಮೂವರ ಕುರುಹು ಗಳಾಗಲೀ ಎಂದಿಗೂ ಪತ್ತೆಯಾಗಲೇ ಇಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News