ಜನಪರ ಹೋರಾಟಕ್ಕೆ ನಕ್ಸಲ್ ಎಂದರೆ ಒಪ್ಪಿಕೊಳ್ಳಲು ಸಿದ್ಧ: ಎ.ಕೆ.ಸುಬ್ಬಯ್ಯ
Update: 2018-04-03 19:17 IST
ಬೆಂಗಳೂರು, ಎ.3: ಕಾನೂನಾತ್ಮಕ ಹೋರಾಟದ ಮೂಲಕ ದಿಡ್ಡಳ್ಳಿ ಮೂಲ ನಿವಾಸಿಗರಿಗೆ ನೆಲೆ ಕಲ್ಪಿಸಿದ್ದಕ್ಕೆ ನನ್ನನ್ನು ನಕ್ಸಲ್ ಎಂದು ಹಣೆಪಟ್ಟಿ ಕಟ್ಟಿದ್ದರೆ, ಅದನ್ನು ಒಪ್ಪಿಕೊಳ್ಳಲು ಸಿದ್ಧನಿದ್ದೇನೆ ಎಂದು ಸಾಮಾಜಿಕ ಹೋರಾಟಗಾರ ಎ.ಕೆ.ಸುಬ್ಬಯ್ಯ ತಿಳಿಸಿದರು.
ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜನಪರ ಹೋರಾಟಗಳಿಗೆ ನಕ್ಸಲ್ ಎಂಬ ಹಣೆಪಟ್ಟಿ ಕಟ್ಟಿದರೆ ನಕ್ಸಲರನ್ನು ಗೌರವಿಸಿದಂತಾಗುತ್ತದೆ. ಇಂತಹ ಹೋರಾಟದಲ್ಲಿ ಭಾಗವಹಿಸಿದ್ದ ನನ್ನನ್ನು ನಕ್ಸಲ್ ಪ್ರೇರಿತ ಎಂದರೆ ಅದನ್ನು ಒಪ್ಪಿಕೊಳ್ಳುತ್ತೇನೆಂದು ತಿಳಿಸಿದರು.
ದಿಡ್ಡಳ್ಳಿ ಮೂಲ ನಿವಾಸಿಗಳು ತಲತಲಾಂತರಗಳಿಂದ ತುಂಡು ಭೂಮಿಯಿಲ್ಲದೆ, ಜೀತದಾಳುಗಳಾಗಿಯೆ ಬದುಕನ್ನು ಸವೆಸಿದ್ದಾರೆ. ಇಂತಹ ಜನರಿಗೆ ನೆಲೆ ಕಲ್ಪಿಸುವುದಕ್ಕಾಗಿ ಹೋರಾಟ ಮಾಡಿದರೆ ಅಂತವರನ್ನು ದೇಶದ್ರೋಹಿ, ನಕ್ಸಲ್ ಎನ್ನುವ ಮೂಲಕ ಬಿಜೆಪಿ ಜನತೆಗೆ ದ್ರೋಹ ಬಗೆಯುತ್ತಿದೆ ಎಂದು ಅವರು ಹೇಳಿದರು.