ಯಾವ ಪಕ್ಷದೊಂದಿಗೂ ಹೊಂದಾಣಿಕೆ ಇಲ್ಲ: ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್
ಬೆಂಗಳೂರು, ಎ.3: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಸ್ಪರ್ಧಿಸಲು ಸಜ್ಜಾಗಿದ್ದು, ಯಾವ ಪಕ್ಷದೊಂದಿಗೂ ಹೊಂದಾಣಿಕೆ ಇಲ್ಲವೆಂದು ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜೆಡಿಯು ರಾಷ್ಟ್ರೀಯ ಮಟ್ಟದಲ್ಲಿ ಎನ್‌ಡಿಎ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದರೂ ರಾಜ್ಯದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಇದರಲ್ಲಿ ಯಾವುದೆ ಗೊಂದಲವಿಲ್ಲವೆಂದು ತಿಳಿಸಿದರು.
ರಾಜ್ಯದ ಎಲ್ಲ ಜಿಲ್ಲೆಗಳಿಗೂ ಪ್ರವಾಸ ಮಾಡಿದ್ದು, ಪಕ್ಷದ ಸಂಘಟನೆ ಮಾಡಿ ಪದಾಧಿಕಾರಿಗಳನ್ನು ನೇಮಿಸಿ ಚುನಾವಣೆಗೆ ಸಂಪೂರ್ಣ ಸನ್ನದ್ಧರಾಗಿದ್ದೇವೆ. ಎ.11 ರಂದು ಜೆಡಿಯು ರಾಷ್ಟ್ರೀಯ ಅಧ್ಯಕ್ಷ ನಿತೀಶ್ ಕುಮಾರ್ ರಾಜ್ಯಕ್ಕೆ ಭೇಟಿ ನೀಡಿ, ಚುನಾವಣಾ ಪ್ರಚಾರ ನಡೆಸಲಿದ್ದಾರೆ ಎಂದು ಅವರು ತಿಳಿಸಿದರು.
ಕಳೆದ ವಾರ ನಿತೀಶ್ ಕುಮಾರ್‌ರನ್ನು ಭೇಟಿ ಮಾಡಿದಾಗ, ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ನಿಲ್ಲಿಸಬೇಡಿ. ಜೆಡಿಯು ಪ್ರಭಾವವಿರುವಂತಹ 25-30 ಕಡೆ ಮಾತ್ರ ಸ್ಪರ್ಧಿಸುವಂತೆ ಸೂಚಿಸಿದ್ದಾರೆ. ಅದರಂತೆ ನಾವು 30 ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ಎ.16ರಂದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.
ಬೇರೆ ಪಕ್ಷಗಳಲ್ಲಿ ಟಿಕೆಟ್ ನೀಡದವರು, ಜೆಡಿಯು ಕಡೆ ಬರುತ್ತಿದ್ದಾರೆ. ಅವರ ಹಿನ್ನೆಲೆಯನ್ನು ಗಮನಿಸಿ ಯೋಗ್ಯರಿಗೆ ಟಿಕೆಟ್ ನೀಡಲು ನಿರ್ಧರಿಸಿದ್ದೇವೆ. ದಾವಣಗೆರೆ 2, ಕಲಬುರ್ಗಿ 1, ಧಾರವಾಡ 2, ಕೋಲಾರ 1, ಬೆಂಗಳೂರು ನಗರ 2-3 ಅಭ್ಯರ್ಥಿ ಗುರುತಿಸಲಾಗಿದೆ. ನಾನು ಚನ್ನಗಿರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಮಾಹಿತಿ ನೀಡಿದರು.
ಜೆಡಿಯು ಈ ಬಾರಿ ಯುವ ಸಮೂಹದ ಕಡೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ಸದ್ಯ ರಾಜ್ಯದಲ್ಲಿ 2.56 ಕೋಟಿ ಯುವಕರಿದ್ದಾರೆ. 1 ಕೋಟಿ ಜನ ಕೆಲಸ ಬೇಕು ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಫಲವಾಗಿವೆ. ಆದರೆ, ನಾವು ಅಧಿಕಾರಕ್ಕೆ ಬಂದರೆ 50 ಲಕ್ಷ ಉದ್ಯೋಗವನ್ನು ಗ್ರಾಮೀಣ ಪ್ರದೇಶದಲ್ಲಿ ಸೃಷ್ಟಿಸುತ್ತೇವೆ. ಅದಕ್ಕೆ ಸಂಬಂಧಿಸಿದಂತಹ ನೀಲಿನಕ್ಷೆ ಸಿದ್ಧಪಡಿಸಿದ್ದೇವೆ ಎಂದು ಅವರು ತಿಳಿಸಿದರು.
ರಾಜ್ಯದ ಪ್ರಗತಿಗೆ ಪೂರಕವಾದ ಗುಂಪುಗಳು ನಮ್ಮನ್ನು ಬೆಂಬಲಿಸುತ್ತಿವೆ. ಕಡಿದಾಳ್ ಶಾಮಣ್ಣ ಮಾತುಕತೆಗೆ ಆಹ್ವಾನಿಸಿದ್ದಾರೆ. ಕರ್ನಾಟಕ ಸೇವಾದಳ ಸಂಘಟನೆ ಗುರುದೇವ್ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ನಟ ಉಪೇಂದ್ರ ನೇತೃತ್ವದ ತಂಡ ಸೇರಿದಂತೆ ಬೇರೆ ಬೇರೆ ಗುಂಪುಗಳು ನಮ್ಮ ಸಂಪರ್ಕದಲ್ಲಿ ಇವೆ. ಇವರೆಲ್ಲರನ್ನು ಸೇರಿಸಿಕೊಂಡು ಮುನ್ನಡೆಯುತ್ತೇವೆಂದು ಅವರು ಹೇಳಿದರು.
ಜೆಡಿಯು ಪಕ್ಷದ ಹೆಸರು, ಗುರುತಿನ ಬಳಕೆಗೆ ನಿತೀಶ್ ಕುಮಾರ್ ನೇತೃತ್ವದ ಬಣಕ್ಕೆ ಮಾತ್ರ ಬಳಸಲು ಹೈಕೋರ್ಟ್ ಹಾಗೂ ಚುನಾವಣಾ ಆಯೋಗ ಹೇಳಿದೆ. ಹಾಗಾಗಿ ಜೆಡಿಯು ನಮ್ಮದೇ ಆಗಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಈ ಸಂಬಂಧ ಶರದ್ ಯಾದವ್ ಬಣ ಸುಪ್ರೀಂ ಕೋರ್ಟ್‌ಗೆ ಹೋಗಿದ್ದರೂ ನಮಗೇನು ತೊಂದರೆ ಇಲ್ಲ.
-ಮಹಿಮಾ ಪಟೇಲ್ ರಾಜ್ಯಾಧ್ಯಕ್ಷ, ಜೆಡಿಯು