ಬೆಂಗಳೂರು: ದಲಿತ ಪರ ಹೋರಾಟಗಾರ ಭಾಸ್ಕರ್ ಪ್ರಸಾದ್ ಸೇರಿ ಹಲವರು ಆಪ್ ಪಕ್ಷಕ್ಕೆ ಸೇರ್ಪಡೆ
ಬೆಂಗಳೂರು,ಎ.03: ದಲಿತ ಪರ ಹೋರಾಟಗಾರ ಬಿ.ಆರ್.ಭಾಸ್ಕರ್ ಪ್ರಸಾದ್, ಪರಿಸರ ಹೋರಾಟಗಾರ ಇಳಂಗೋವನ್, ಪತ್ರಕರ್ತ ನಿರಂಜನ, ದಲಿತ ಮುಖಂಡ ಅನಂತ ಕುಮಾರ್ ಅವರು ಆಪ್ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಬೆಂಗಳೂರಿನ ಜೈನ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಅಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದರು. ನಂತರ ಮಾತನಾಡಿದ ಬಿ.ಆರ್.ಭಾಸ್ಕರ್ ಪ್ರಸಾದ್, ಮಹದೇವ ಪುರ ಕ್ಷೇತ್ರದಲ್ಲಿ ನಾನು ಸ್ಪರ್ಧಿಸಿ ಅರವಿಂದ ಲಿಂಬಾವಲಿಯನ್ನು ಸೋಲಿಸುವ ಉದ್ದೇಶ ಮಾತ್ರವಲ್ಲ, ಆಪ್ ಪಕ್ಷದ ಶಾಸಕನಾಗಿ ಗೆದ್ದೇ ಗೆಲ್ಲುವೆ ಎಂಬ ಆತ್ಮ ವಿಶ್ವಾಸದಿಂದ ಪಕ್ಷಕ್ಕೆ ಸೇರಿದ್ದೇನೆ. ನಾನು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕೆ ಯಾವತ್ತೂ ಸೇರುವುದಿಲ್ಲ. ಬಿಎಸ್ಪಿ, ಎಸ್ ಡಿಪಿಐ, ಕಮ್ಯುನಿಸ್ಟ್ ಪಕ್ಷವನ್ನು ನಾನು ಗೌರವಿಸುತ್ತೇನೆ. ಉತ್ತಮ ಶಿಕ್ಷಣ, ಉದ್ಯೋಗ, ಮೂಲಭೂತ ಸೌಕರ್ಯಗಳನ್ನು ಆಪ್ ನೀಡಿದೆ. ಕಾಂಗ್ರೆಸ್, ಬಿಜೆಪಿಯಲ್ಲಿ ಇಂದು ಅಪ್ಪ ಮಕ್ಕಳ ರಾಜಕಾರಣವಿದೆ. ದನ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವ ಸರಕಾರ ಇಂದು ಆಡಳಿತ ನಡೆಸುತ್ತಿದೆ. ಇದರಿಂದ ಹೊರ ಬಂದು ಸ್ವಾಭಿಮಾನದ ರಾಜಕಾರಣ ಮಾಡಲು ಆಪ್ ಸೇರಿದ್ದೇನೆ ಎಂದರು.
ಆಪ್ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಮಾತನಾಡಿ, ಆಪ್ ಪಕ್ಷ ಜಾತಿ ರಾಜಕಾರಣ ಮಾಡುವುದಿಲ್ಲ. ದಿಲ್ಲಿಯ ಕಳೆದ ಮೂರು ವರ್ಷದ ಆಡಳಿತದ ಸಾಧನೆಗಳನ್ನು ಮುಂದಿಟ್ಟು ಕರ್ನಾಟಕದಲ್ಲಿ ಮತ ಕೇಳುತ್ತೇವೆ. ದೆಹಲಿಯಲ್ಲಿ ಆಪ್ ಸರಕಾರ ತಂದ ಶೈಕ್ಷಣಿಕ, ಆರೋಗ್ಯ ಯೋಜನೆ ಮುಂದಿಟ್ಟು ಕರ್ನಾಟಕದಲ್ಲಿ ಮತ ಯಾಚನೆ ನಡೆಸುತ್ತೇವೆ. ಹಣ ಬಲ, ಜಾತಿ ರಾಜಕಾರಣದ ಮೂಲಕ ನಾವು ರಾಜಕೀಯ ಮಾಡುವುದಿಲ್ಲ ಎಂದು ಹೇಳಿದರು.