ಶಿಫಾರಸಿನ ಬಗ್ಗೆ ನಿಲುವು ತಿಳಿಸಲು ಕೇಂದ್ರ ಸರಕಾರಕ್ಕೆ ಹೈಕೋರ್ಟ್ ತಾಕೀತು

Update: 2018-04-03 17:09 GMT

ಬೆಂಗಳೂರು, ಎ.3: ಲಿಂಗಾಯತ, ವೀರಶೈವ ಲಿಂಗಾಯತರಿಗೆ (ಬಸವತತ್ವ ಒಪ್ಪುವವರು) ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡುವಂತೆ ರಾಜ್ಯ ಸರಕಾರ ಕಳುಹಿಸಿರುವ ಶಿಫಾರಸಿನ ಬಗ್ಗೆ ನಿಮ್ಮ ನಿಲುವು ಏನೆಂಬುದನ್ನು ಸ್ಪಷ್ಟಪಡಿಸಿ ಎಂದು ಕೇಂದ್ರ ಸರಕಾರಕ್ಕೆ ಹೈಕೋರ್ಟ್ ತಾಕೀತು ಮಾಡಿದೆ.

ಲಿಂಗಾಯತರಿಗೆ ಸ್ವತಂತ್ರ ಧರ್ಮದ ಮಾನ್ಯತೆ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಅಲ್ಪಸಂಖ್ಯಾತ ಆಯೋಗವು ತಜ್ಞರ ಸಮಿತಿ ರಚನೆಗೆ ಆದೇಶ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ನಾಲ್ಕು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್) ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಕೇಂದ್ರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ಕೆ.ನಾವದಗಿ, ರಾಜ್ಯ ಸರಕಾರ ಕಳುಹಿಸಿರುವ ಶಿಫಾರಸಿನ ಬಗ್ಗೆ ನಮಗೆ ಈತನಕ ಯಾವುದೇ ಮಾಹಿತಿ ಬಂದಿಲ್ಲ. ಈ ಕುರಿತಂತೆ ಗೃಹ ಇಲಾಖೆಯಿಂದ ವಿವರಣೆ ಪಡೆಯಲು ಸಮಯಾವಕಾಶ ಬೇಕು ಎಂದು ಕೋರಿದರು.
ಆದರೆ, ಇದನ್ನು ಒಪ್ಪದ ನ್ಯಾಯಪೀಠವು, ಶಿಫಾರಸು ಕುರಿತಂತೆ ಮುಂದುವರಿಯುತ್ತೀರೊ ಇಲ್ಲವೊ ಎಂಬುದನ್ನು ತಡಮಾಡದೆ ಕೋರ್ಟ್‌ಗೆ ನಿಖರವಾಗಿ ತಿಳಿಸಿ ಎಂಬ ಖಡಕ್ ನಿರ್ದೇಶನ ನೀಡಿದರು.

ರಾಜ್ಯ ಸರಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಎಂ.ಆರ್.ನಾಯ್ಕ, ಕಳೆದ ತಿಂಗಳ 22ರಂದು ರಾಜ್ಯ ಸರಕಾರ ಲಿಂಗಾಯತ, ವೀರಶೈವ ಲಿಂಗಾಯತರಿಗೆ (ಬಸವತತ್ವ ಒಪ್ಪುವವರು) ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡಿ ಅಧಿಸೂಚನೆ ಹೊರಡಿಸಿದೆ ಮತ್ತು ಈ ಕುರಿತಂತೆ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು. ಇದಕ್ಕೆ ನ್ಯಾಯಪೀಠ, ಈ ಸಂಗತಿಯನ್ನು ನೀವು ಪ್ರಮಾಣ ಪತ್ರದ ಮೂಲಕ ಅಧಿಕೃತವಾಗಿ ಸಲ್ಲಿಸಿ ಎಂದು ಸೂಚಿಸಿತು.

ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುತ್ತದೆ ಎಂಬ ವಿಷಯ ಗೊತ್ತಿದ್ದರಿಂದಲೇ ಸರಕಾರ ತರಾತುರಿಯಲ್ಲಿ ತಜ್ಞರ ಸಮಿತಿಯ ವರದಿಯನ್ನು ಅಂಗೀಕರಿಸಿ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದೆ ಎಂದು ಅರ್ಜಿದಾರರ ಪರ ವಕೀಲ ಜಿ.ಆರ್.ಗುರುಮಠ ಆಕ್ಷೇಪಿಸಿದರು.


ಮತ್ತೊಬ್ಬ ಅರ್ಜಿದಾರರ ಪರ ಹಾಜರಿದ್ದ ಲಕ್ಷ್ಮೀ ಅಯ್ಯಂಗಾರ್, ’ರಾಜ್ಯ ಸರಕಾರ ತನ್ನ ಅಧಿಕಾರ ವ್ಯಾಪ್ತಿ ಮೀರಿ ಲಿಂಗಾಯತರಿಗೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡಿದೆ ಎಂದು ಆಕ್ಷೇಪಿಸಿದರು. ವಿಚಾರಣೆಯನ್ನು ಎ. 13ಕ್ಕೆ ಮುಂದೂಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News