ಪತ್ರಕರ್ತರ ಸಂಕಷ್ಟಕ್ಕೆ ತುರ್ತು ನಿಧಿ ಸ್ಥಾಪನೆ: ಸದಾಶಿವ ಶೆಣೈ

Update: 2018-04-03 17:12 GMT

ಬೆಂಗಳೂರು, ಎ.3: ಪತ್ರಕರ್ತರು ಸಂಕಷ್ಟಕ್ಕೆ ಸಿಲುಕಿದಾಗ ತಕ್ಷಣವೇ ಸೂಕ್ತ ರೀತಿಯಲ್ಲಿ ಸ್ಪಂದಿಸುವ ತುರ್ತು ನಿಧಿ ಸ್ಥಾಪನೆ ಮಾಡಲು ಬೆಂಗಳೂರು ಪ್ರೆಸ್ ಕ್ಲಬ್ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನಿರ್ಧರಿಸಿದೆ ಎಂದು ಪ್ರೆಸ್‌ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ ತಿಳಿಸಿದ್ದಾರೆ.

ಇತ್ತಿಚಿಗೆ ನಿಧನರಾದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಂಗಳೂರು ಘಟಕದ ಅಧ್ಯಕ್ಷ ಭೈರಸಂದ್ರ ಗಂಗರಾಜುಗೆ ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರೆಸ್‌ಕ್ಲಬ್‌ನಲ್ಲಿ ಈಗಾಗಲೇ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಲಾಗಿದ್ದು, ಇದರಿಂದ ಸಾಕಷ್ಟು ಪತ್ರಕರ್ತರಿಗೆ ನೆರವು ನೀಡಲಾಗುತ್ತಿದೆ. ಇದೇ ರೀತಿ ಬೇರೆ ಬೇರೆ ಸಂಘಟನೆಗಳು ಸೇರಿ ಮಾಧ್ಯಮ ಪ್ರತಿನಿಧಿಗಳ ನೆರವಿಗೆ ಧಾವಿಸುವ ಅಗತ್ಯವಿದೆ. ಪತ್ರಕರ್ತರಿಗೆ ನೆರವು ನೀಡುವ ಯಾವುದೆ ಯೋಜನೆಗೆ ಪ್ರೆಸ್‌ಕ್ಲಬ್ ಜೊತೆಯಾಗಲಿದೆ ಎಂದು ಅವರು ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್.ರಾಜು ಮಾತನಾಡಿ, ಪತ್ರಕರ್ತರ ಕ್ಷೇಮಾಭಿವೃದ್ಧಿಗಾಗಿ ಎಲ್ಲ ಮಾಧ್ಯಮ ಸಂಘಟನೆಗಳು ಒಗ್ಗೂಡಿ ಕಾರ್ಯನಿರ್ವಹಿಸಬೇಕು. ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ ಬಲಪಡಿಸಿದರೆ, ಅದರಿಂದ ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಅನುಕೂಲವಾಗಲಿದೆ. ಈ ಬಗ್ಗೆ ಸರಕಾರದ ಮೇಲೆ ಒತ್ತಡ ಹೇರಲು ಎಲ್ಲರೂ ಮುಂದಾಗಬೇಕು ಎಂದು ತಿಳಿಸಿದರು.

ಹಿರಿಯ ಪರ್ತಕರ್ತರ ಸಂಘದ ಅಧ್ಯಕ್ಷ ಪಾವಗಡ ಕೃಷ್ಣಪ್ಪಮಾತನಾಡಿ, ರಾಜ್ಯ ಸರಕಾರ 25 ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಹಾಗೂ 60 ವರ್ಷ ತುಂಬಿದ ಪತ್ರಕರ್ತರಿಗೆ 10 ಸಾವಿರ ರೂ ಮಾಸಾಶನ ನೀಡುತ್ತಿದ್ದು, ಬಜೆಟ್‌ನಲ್ಲಿ ಘೋಷಿಸಿರುವ ಈ ಕಾರ್ಯಕ್ರಮ ಈ ತಿಂಗಳಿನಿಂದ ಜಾರಿಗೆ ಬಂದಿದೆ. ಈ ಸೌಲಭ್ಯವನ್ನು ಅರ್ಹ ಪತ್ರಕರ್ತರಿಗೆ ತಲುಪುವಂತಾಗಬೇಕು ಎಂದು ತಿಳಿಸಿದರು.

ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷ ಗುರುದೇವ್ ನಾರಾಯಣ ಕುಮಾರ್ ಮಾತನಾಡಿ, ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ನೆರವು ನೀಡುವ ನಿಧಿ ಸ್ಥಾಪನೆಗೆ ತಮ್ಮ ಸಂಘಟನೆಯಿಂದ ಆರಂಭಿಕವಾಗಿ ಹತ್ತು ಸಾವಿರ ರೂ. ದೇಣಿಗೆ ನೀಡುವುದಾಗಿ ಪ್ರಕಟಿಸಿದರು. ಸಮಾರಂಭದಲ್ಲಿ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಎ. ಪೊನ್ನಪ್ಪ, ಹಿರಿಯ ಪತ್ರಕರ್ತರಾದ ಎನ್.ಎಸ್.ಶಂಕರ್, ಆರ್.ಜಿ. ಹಳ್ಳಿ ನಾಗರಾಜ್, ಮಣಿ ಮತ್ತಿತರರು ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News