×
Ad

ಆಯ್ಕೆ ಆಧಾರಿತ ಕ್ರೆಡಿಟ್ ಸಿಸ್ಟಂ ಪದ್ಧತಿ ಗೊಂದಲ: ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯನ್ನು ತರಾಟೆಗೆ ತೆಗೆದ ಹೈಕೋರ್ಟ್

Update: 2018-04-03 23:04 IST

ಬೆಂಗಳೂರು, ಎ.3: ಆಯ್ಕೆ ಆಧಾರಿತ ಕ್ರೆಡಿಟ್ ಸಿಸ್ಟಂ(ಸಿಬಿಸಿಎಸ್) ಪದ್ದತಿಯನ್ನು ಗೊಂದಲ ಕುರಿತಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯನ್ನು ಮಂಗಳವಾರ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ಬುಧವಾರದೊಳಗೆ ಆ ಸಮಸ್ಯೆಗೆ ಪರಿಹಾರವನ್ನು ಕಂಡು ಹಿಡಿದು ನ್ಯಾಯಾಲಯಕ್ಕೆ ಸಲ್ಲಿಸುವಂತೆ ನಿರ್ದೇಶನ ನೀಡಿದೆ. 

 ತುಮಕೂರು ಜಿಲ್ಲೆ ತಿಪಟೂರು ತಾಲೂಕು ಹೊನ್ನವಳ್ಳಿಯ ವಿ.ಅಮಿತ್ ಮತ್ತಿತರ ವಿದ್ಯಾರ್ಥಿಗಳು ಸಲ್ಲಿಸಿರುವ ಹಲವು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಘವೇಂದ್ರ ಚೌವ್ಹಾಣ್ ಅವರಿದ್ದ ಪೀಠ ಮಂಗಳವಾರ ವಿಟಿಯು ವಕೀಲರಿಗೆ ಈ ಮೌಖಿಕ ನಿರ್ದೇಶನ ನೀಡಿ ವಿಚಾರಣೆಯನ್ನು ಮುಂದೂಡಿತು. ಹಿಂದಿನ ಸೆಮಿಸ್ಟರ್‌ಗಳಲ್ಲಿ ವಿಷಯಗಳನ್ನು ಬಾಕಿ ಉಳಿಸಿಕೊಂಡಿರುವ ವಿದ್ಯಾರ್ಥಿಗಳನ್ನು ಕತ್ತಲಿನಲ್ಲಿಡುವುದು ಸರಿಯಲ್ಲ. ಅವರ ಭವಿಷ್ಯದ ದೃಷ್ಟಿಯಿಂದ ಸೂಕ್ತ ಪರಿಹಾರ ಅಥವಾ ಸೂತ್ರವನ್ನು ರೂಪಿಸಬೇಕಾಗಿದ್ದು ವಿವಿಯ ಕರ್ತವ್ಯ. ಅದು ಬುಧವಾರದೊಳಗೆ ಸಿಬಿಸಿಎಸ್ ಕಂಗಟ್ಟನ್ನು ಪರಿಹರಿಸುವ ಸೂತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಇಲ್ಲವಾದರೆ ಉಪಕುಲಪತಿಗಳನ್ನೇ ಕೋರ್ಟ್‌ಗೆ ಕರೆಸಬೇಕಾಗುತ್ತದೆ ಎಂದು ನ್ಯಾಯಪೀಠ ಎಚ್ಚರಿಕೆ ನೀಡಿತು.

ವಿದ್ಯಾರ್ಥಿಗಳ ಭವಿಷ್ಯವನ್ನು ತೂಗುಯ್ಯಾಲೆಯಲ್ಲಿಡುವುದು ಸರಿಯಲ್ಲ. ವಿವಿ ಗಾಢ ನಿದ್ರೆಯಲ್ಲಿರಬಹುದು, ಅದನ್ನು ಹಾಗೆಯೇ ಬಿಡಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಶೈಕ್ಷಣಿಕ ವಿಷಯಗಳಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ, ಈ ವಿಷಯದಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದ್ದರೂ ಸುಮ್ಮನಿರಲಾಗದು ಎಂದು ನ್ಯಾಯಪೀಠ ಹೇಳಿತು.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ವೈ.ಟಿ.ಅಭಿನಯ್ ಅವರು, 2010ರಿಂದ 2014ವರೆಗೆ ಮಾಮೂಲಿ ಎಂಜಿನಿಯರಿಂಗ್ ಪದ್ಧತಿ ಜಾರಿಯಲ್ಲಿತ್ತು. 2014ನೆ ವರ್ಷ ಕೋರ್ಸ್‌ಗೆ ಸೇರಿದವರು, ಯಾರು ಮೊದಲು ಎರಡು ಸೆಮಿಸ್ಟರ್‌ಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ವಿಷಯಗಳನ್ನು ಬಾಕಿ ಉಳಿಸಿಕೊಂಡಿದ್ದರೂ ಅಂತಹವರು ಮೂರನೆ ಸೆಮಿಸ್ಟರ್‌ಗೆ ಹೋಗಲು ಅವಕಾಶವಿರಲಿಲ್ಲ. ಕೆಲವರು ಬಾಕಿ ಇದ್ದ ವಿಷಯಗಳನ್ನು ಪಾಸ್ ಮಾಡಿಕೊಂಡು ಮೂರನೆ ಸೆಮಿಸ್ಟರ್‌ಗೆ ಹೋದರು. ಆದರೆ, ಕೆಲವರು ಹೋಗಲು ಆಗಲಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಈ ಮಧ್ಯೆ 2015-16ನೆ ಸಾಲಿನಲ್ಲಿ ವಿಟಿಯು ಯಾರು ಮೊದಲ ಎರಡು ಸೆಮಿಸ್ಟರ್‌ಗಳನ್ನು ಪಾಸ್ ಮಾಡಿಕೊಂಡು 3ನೆ ಸೆಮಿಸ್ಟರ್‌ನಲ್ಲಿದ್ದರೂ ಅಂತಹ ವಿದ್ಯಾರ್ಥಿಗಳಿಗೆ ಒನ್ ಟೈಂ ಎಕ್ಸಿಟ್ ಯೋಜನೆಯಡಿ ಸಿಬಿಸಿಎಸ್‌ಗೆ ಅವಕಾಶ ನೀಡಿತ್ತು. ಆದರೆ, ಅದೇ ರೀತಿಯ ಆಯ್ಕೆಯ ಅವಕಾಶವನ್ನು ವಿಷಯ ಬಾಕಿ ಉಳಿಸಿಕೊಂಡಿದ್ದ ವಿದ್ಯಾರ್ಥಿಗಳಿಗೆ ನೀಡಿರಲಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ, ಅದರ ನಿರ್ಧಾರ ಏಕಪಕ್ಷೀಯವಾಗಿದೆ ಎಂದು ಅವರು ಹೇಳಿದರು.

ಎಂತಹ ಎಂಜಿನಿಯರ್‌ಗಳನ್ನು ಹುಟ್ಟು ಹಾಕುತ್ತಿದ್ದೀರಿ: ಎಂಜಿನಿಯರಿಂಗ್ ಪಾಸು ಮಾಡಲು 8 ವರ್ಷ ನೀಡುವುದು ಎಷ್ಟರ ಮಟ್ಟಿಗೆ ಸರಿ? ನೀವು ಎಂಜಿನಿಯರ್‌ಗಳನ್ನು ಸೃಷ್ಟಿಸುತ್ತೀರೋ ಅಥವಾ ವೈಫಲ್ಯಗಳನ್ನು ಸೃಷ್ಟಿಸುತ್ತೀರೋ? ಹಲವು ಸೆಮಿಸ್ಟರ್‌ಗಳಲ್ಲಿ ಹಲವು ವಿಷಯಗಳಲ್ಲಿ ಫೇಲಾಗಿ, ಫೇಲಾಗಿ ಎಂಜಿನಿಯರ್ ಪದವಿ ಪೂರೈಸುತ್ತಾರೆ. ಅಂತಹ ಎಂಜಿನಿಯರ್‌ಗಳು ಗುತ್ತಿಗೆದಾರರ ಜೊತೆ ಶಾಮೀಲಾಗಿ ನಿರ್ಮಿಸುವ ಸೇತುವೆಗಳು, ಕಟ್ಟಡಗಳು ಬೀಳುತ್ತಲೇ ಇರುತ್ತವೆ ಎಂದು ನ್ಯಾಯಪೀಠ ಮೌಖಿಕವಾಗಿ ಕೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News