ವೈದ್ಯ ಪತಿಯಿಂದ ಪತ್ನಿಗೆ ಕಿರುಕುಳ ಆರೋಪ: ದೂರು ದಾಖಲು
ಬೆಂಗಳೂರು, ಎ.3: ಮದುವೆಯಾಗಿ ಮೂರು ತಿಂಗಳಾದರೂ ಗರ್ಭಿಣಿಯಾಗಿಲ್ಲ ಎನ್ನುವ ಕಾರಣಕ್ಕೆ ವೈದ್ಯ ಪತಿಯೊಬ್ಬ ಪತ್ನಿಗೆ ಅಶ್ಲೀಲ ಚಿತ್ರಗಳನ್ನು ತೋರಿಸಿ ಕಿರುಕುಳ ನೀಡಿರುವ ಘಟನೆ ವಿದ್ಯಾರಣ್ಯಪುರದಲ್ಲಿ ನಡೆದಿದೆ ಎನ್ನಲಾಗಿದೆ.
ಕಿರುಕುಳ ನೀಡಿದ ವೈದ್ಯ ಪತಿ ಮಂಜುನಾಥ್ ಮೂರು ತಿಂಗಳ ಹಿಂದೆ ಶ್ವೇತಾ(ಹೆಸರು ಬದಲಾಯಿಸಲಾಗಿದೆ) ಎಂಬುವರನ್ನು ಮದುವೆ ಆಗಿದ್ದು, ಮೂರು ತಿಂಗಳು ಕಳೆದರೂ ಪತ್ನಿ ಗುಡ್‌ನ್ಯೂಸ್ ನೀಡಿಲ್ಲ ಎಂದು ಅಶ್ಲೀಲ ಚಿತ್ರಗಳನ್ನು ತೋರಿಸಿ ಅಸಹಜ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಕಿರುಕುಳ ನೀಡಿದ್ದಾನೆ ಎಂದು ಶ್ವೇತಾ ಆರೋಪಿಸಿದ್ದಾರೆ.
ಅಶ್ಲೀಲ ಚಿತ್ರಗಳಂತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಮಕ್ಕಳಾಗಲಿವೆ ಎಂದು ಹಿಂಸೆ ನೀಡಿ ಅಸಹಜ ಲೈಂಗಿಕ ಕ್ರಿಯೆಗೆ ಸಹಕರಿಸದೆ ಹೋದರೆ ನಿನ್ನ ಜೊತೆಗಿನ ಲೈಂಗಿಕ ಕ್ರಿಯೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದನು. ಇಷ್ಟು ದಿನಗಳಾದರೂ ಮಕ್ಕಳಾಗದ್ದಕ್ಕೆ ಮಾವನ ಜೊತೆ ಮಲಗಬೇಕೆಂದು ಸಹ ಪತಿ ಮಂಜುನಾಥ್ ಬಲವಂತ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ಇಷ್ಟು ಮಾತ್ರವಲ್ಲದೆ ಮಂಜುನಾಥ್ ಸೋದರ ಫಾರೆಸ್ಟರ್ ರಂಗನಾಥ್ ಮತ್ತು ಅತ್ತೆ-ಮಾವ ಸಹ ವರದಕ್ಷಿಣೆಗಾಗಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂದು ಶ್ವೇತಾ ದೂರಿನಲ್ಲಿ ದಾಖಲಿಸಿದ್ದಾರೆ.
ಮೆಜೆಸ್ಟಿಕ್‌ನಲ್ಲಿರುವ ನನ್ನ ತಂದೆಯ ಮನೆಯನ್ನು ಮಾರಾಟ ಮಾಡಿ ಹಣ ತಂದುಕೊಡಬೇಕೆಂದು ಪತಿಯ ಮನೆಯವರು ಕಿರುಕುಳ ನೀಡುತ್ತಿದ್ದರು. ಪತಿ ವಿರುದ್ಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದರೂ ಪೊಲೀಸರು ಮಾತ್ರ ಮೂರು ತಿಂಗಳವರೆಗೂ ಎಫ್‌ಐಆರ್ ದಾಖಲಿಸಿಕೊಂಡಿಲ್ಲ. ಎಫ್‌ಐಆರ್ ದಾಖಲಿಸದಿರುವುದನ್ನು ಪ್ರಶ್ನೆ ಮಾಡಿದ ನನ್ನ ತಂದೆಯ ಮೇಲೆಯೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಶ್ವೇತಾ ಆರೋಪ ಮಾಡಿದ್ದಾರೆ. ಈ ಮೊಕದ್ದಮೆ ದಾಖಲಿಸಿಕೊಂಡಿರುವ ವಿದ್ಯಾರಣ್ಯಪುರ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.