ಕ್ರೈಸ್ ಕಾಮಗಾರಿಗಳಿಗೆ ಟೆಂಡರ್ ಪ್ರಕರಣ: ಎ.9ರವರೆಗೆ ಯಥಾಸ್ಥಿತಿ ಕಾಪಾಡಲು ಹೈಕೋರ್ಟ್ ನಿರ್ದೇಶನ
ಬೆಂಗಳೂರು, ಎ.3: ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿ ಬರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವು(ಕ್ರೈಸ್) ವಿವಿಧ ಕಾಮಗಾರಿಗಳಿಗೆ ಕರೆದಿರುವ ಟೆಂಡರ್ ಸಂಬಂಧ ಎ.9ರವರೆಗೆ ಯಥಾಸ್ಥಿತಿ ಕಾಪಾಡುವಂತೆ ಹೈಕೋರ್ಟ್ ನಿರ್ದೇಶಿಸಿದೆ.
ರಾಜ್ಯಾದ್ಯಂತ ವಸತಿ ಶಾಲೆ ಕಟ್ಟಡಗಳ ವಿವಿಧ ಕಾಮಗಾರಿ ಗುತ್ತಿಗೆ ಟೆಂಡರ್‌ನಲ್ಲಿ ಅಕ್ರಮ ನಡೆದಿದ್ದು, ಟೆಂಡರ್ ಅಧಿಸೂಚನೆ ರದ್ದುಪಡಿಸಬೇಕೆಂದು ಕೋರಿ ಮೈಕಾನ್ ಕನ್‌ಸ್ಟ್ರಕ್ಷನ್ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಘವೇಂದ್ರ ಚೌಹಾಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿಯಲ್ಲಿನ ಕೆಲ ಪ್ರತಿವಾದಿಗಳಿಗೆ ನೋಟಿಸ್ ಕೈಸೇರದ ಕಾರಣ, ವಿಚಾರಣೆಯನ್ನು ಎ. 9ಕ್ಕೆ ಮುಂದೂಡಿತು.
ಇದೇ ವೇಳೆ, ಟೆಂಡರ್ ಅಧಿಸೂಚನೆ ಹೊರಡಿಸಿದ ನಂತರದ ಯಾವುದೇ ಕ್ರಮಗಳಿಗೆ ಮುಂದಾಗದಂತೆ ಕ್ರೈಸ್‌ಗೆ ನಿರ್ದೇಶಿಸಿ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ಎ.9ರ ವರೆಗೂ ವಿಸ್ತರಿಸಿತು.
ಪ್ರಕರಣವೇನು: ಮೊರಾರ್ಜಿ ದೇಸಾಯಿ, ಇಂದಿರಾಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳು ಸೇರಿದಂತೆ ರಾಜ್ಯದ ವಸತಿ ಶಾಲೆಗಳಲ್ಲಿ ವಿವಿಧ ಕಾಮಗಾರಿಗಳಿಗೆ 2017ರ ಡಿಸೆಂಬರ್ ಹಾಗೂ 2018ರ ಜನವರಿ ಅವಧಿಯಲ್ಲಿ ಬೇರೆ ಬೇರೆ ಅಧಿಸೂಚನೆಯಡಿ ಕ್ರೈಸ್ ಟೆಂಡರ್ ಕರೆದಿತ್ತು. ಈ ವೇಳೆ ತಮಗೆ ಬೇಕಾದ ಗುತ್ತಿಗೆದಾರರಿಗೆ ಗುತ್ತಿಗೆ ನೀಡುವ ಸಲುವಾಗಿ ಅರ್ಹ ಗುತ್ತಿಗೆದಾರರನ್ನು ಉದ್ದೇಶಪೂರ್ವಕವಾಗಿ ಅನರ್ಹಗೊಳಿಸಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. 800 ಕೋಟಿಗೂ ಅಧಿಕ ಮೊತ್ತದ ಟೆಂಡರ್ ಇದಾಗಿದೆ.
ಮಾ.13ರಂದು ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕ ನೀತಿ ಅಸುಸರಿಸದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಟೆಂಡರ್ ಸಂಬಂಧ ಯಥಾಸ್ಥಿತಿ ಕಾಪಾಡುವಂತೆ ಕ್ರೈಸ್‌ಗೆ ನಿರ್ದೇಶಿಸಿತು.