ದ.ಆಫ್ರಿಕಕ್ಕೆ ದಾಖಲೆ ಗೆಲುವು, ಸರಣಿ ಕೈವಶ

Update: 2018-04-03 18:32 GMT

ಜೋಹಾನ್ಸ್‌ಬರ್ಗ್, ಎ.3: ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ವೆರ್ನಾನ್ ಫಿಲ್ಯಾಂಡರ್ ಪ್ರಚಂಡ ಬೌಲಿಂಗ್ ದಾಳಿಗೆ ದಿಕ್ಕಾಪಾಲಾದ ಆಸ್ಟ್ರೇಲಿಯ ತಂಡ ದಕ್ಷಿಣ ಆಫ್ರಿಕ ವಿರುದ್ಧ 492 ರನ್‌ಗಳ ಅಂತರದಿಂದ ಸೋತಿದೆ. ಕೊನೆಯ ದಿನದಾಟವಾದ ಮಂಗಳವಾರ ಭರ್ಜರಿ ಜಯ ಸಾಧಿಸಿರುವ ಆತಿಥೇಯ ದಕ್ಷಿಣ ಆಫ್ರಿಕ ತಂಡ 4 ಪಂದ್ಯಗಳ ಟೆಸ್ಟ್ ಸರಣಿಯನ್ನು 3-1 ಅಂತರದಿಂದ ಗೆದ್ದುಕೊಂಡಿದೆ. ಆಸ್ಟ್ರೇಲಿಯ ವಿರುದ್ಧ ಭಾರೀ ಅಂತರದ ರನ್‌ಗಳಿಂದ ಜಯ ಸಾಧಿಸಿರುವ ಹರಿಣ ಪಡೆ 1970ರ ಬಳಿಕ ತನ್ನ ತವರು ನೆಲದಲ್ಲಿ ಆಸೀಸ್ ವಿರುದ್ಧ ಟೆಸ್ಟ್ ಸರಣಿ ಜಯಿಸಿ ಐತಿಹಾಸಿಕ ಸಾಧನೆ ಮಾಡಿತು.

ಮೂರನೇ ಟೆಸ್ಟ್‌ನಲ್ಲಿ ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿ ಭಾರೀ ಟೀಕೆಗೆ ಗುರಿಯಾಗಿದ್ದ ಆಸ್ಟ್ರೇಲಿಯ ಇನ್ನೂ ಆಘಾತದಿಂದ ಹೊರಬಂದಿಲ್ಲ. ಅಂತಿಮ ದಿನವಾದ ಮಂಗಳವಾರ ಕಠಿಣ ಹೋರಾಟ ನೀಡಿ ಪಂದ್ಯ ಡ್ರಾಗೊಳಿಸಬಹುದೆಂಬ ನಿರೀಕ್ಷೆ ಹುಸಿಯಾಯಿತು. ಗೆಲ್ಲಲು 612 ರನ್ ಗುರಿ ಪಡೆದಿದ್ದ ಆಸ್ಟ್ರೇಲಿಯ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 119 ರನ್‌ಗೆ ಆಲೌಟಾಗಿ ಸುಲಭವಾಗಿ ಸೋಲೊಪ್ಪಿಕೊಂಡಿತು.

3 ವಿಕೆಟ್ ನಷ್ಟಕ್ಕೆ 88 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಆಸ್ಟ್ರೇಲಿಯ ದಿನದ ಮೊದಲ ಓವರ್‌ನಲ್ಲಿ ಮಾರ್ಷ್ ಸಹೋದರಾದ ಶಾನ್(7) ಹಾಗೂ ಮಿಚೆಲ್(0) ವಿಕೆಟ್ ಕಳೆದುಕೊಂಡಿತು. ಪೀಟರ್ ಹ್ಯಾಂಡ್ಸ್‌ಕಾಂಬ್(24) ನಿನ್ನೆಯ ಸ್ಕೋರ್‌ಗೆ ಕೇವಲ ಒಂದು ರನ್ ಸೇರಿಸಿ ಫಿಲ್ಯಾಂಡರ್‌ಗೆ ಕ್ಲೀನ್‌ಬೌಲ್ಡಾದರು. ನಾಯಕ ಟಿಮ್ ಪೈನ್(7) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಕಮ್ಮಿನ್ಸ್(1), ಸಯೆರ್ಸ್‌(0) ಬಂದಷ್ಟೇ ವೇಗವಾಗಿ ಪೆವಿಲಿಯನ್‌ಗೆ ಸೇರಿದರು. ನಥಾನ್ ಲಿಯೊನ್(9) ವಿಕೆಟ್ ಪಡೆದ ಫಿಲ್ಯಾಂಡರ್ ಆಸ್ಟ್ರೇಲಿಯದ ಇನಿಂಗ್ಸ್‌ಗೆ ತೆರೆ ಎಳೆದರು.

ಕೊನೆಯ ದಿನದಾಟದಲ್ಲಿ 13 ಓವರ್‌ಗಳ ಬೌಲಿಂಗ್ ನಡೆಸಿದ ಫಿಲ್ಯಾಂಡರ್ ಕೇವಲ 21 ರನ್ ನೀಡಿ ಆರು ವಿಕೆಟ್‌ಗಳನ್ನು ಉಡಾಯಿಸಿ ಜೀವನಶ್ರೇಷ್ಠ ಪ್ರದರ್ಶನ ನೀಡಿದರು. ಪಂದ್ಯದಲ್ಲಿ 51 ರನ್‌ಗೆ ಒಟ್ಟು 9 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.

ವಿದಾಯದ ಪಂದ್ಯ ಆಡಿದ ಮೊರ್ಕೆಲ್ ಕೊನೆಯ ದಿನದಾಟದಲ್ಲಿ ವಿಕೆಟ್ ಪಡೆದಿಲ್ಲ. ಆದರೆ, ಪಂದ್ಯದಲ್ಲಿ ಒಟ್ಟು 3 ವಿಕೆಟ್ ಪಡೆದಿದ್ದಾರೆ. ಸರಣಿ ಗೆಲುವಿನೊಂದಿಗೆ ಟೆಸ್ಟ್ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಾರೆ.

ಸಂಕ್ಷಿಪ್ತ ಸ್ಕೋರ್

►ದಕ್ಷಿಣ ಆಫ್ರಿಕ ಮೊದಲ ಇನಿಂಗ್ಸ್: 488

►ಆಸ್ಟ್ರೇಲಿಯ ಮೊದಲ ಇನಿಂಗ್ಸ್: 221

►ದಕ್ಷಿಣ ಆಫ್ರಿಕ ಎರಡನೇ ಇನಿಂಗ್ಸ್:344/6 ಡಿಕ್ಲೇರ್

►ಆಸ್ಟ್ರೇಲಿಯ ಎರಡನೇ ಇನಿಂಗ್ಸ್: 119 ರನ್‌ಗೆ ಆಲೌಟ್

(ಬರ್ನ್ಸ್ 42,ಹ್ಯಾಂಡ್ಸ್‌ಕಾಂಬ್ 24, ಫಿಲ್ಯಾಂಡರ್ 6-21, ಮೊರ್ಕೆಲ್ 2-28)

►ಪಂದ್ಯಶ್ರೇಷ್ಠ: ಫಿಲ್ಯಾಂಡರ್

►ಸರಣಿಶ್ರೇಷ್ಠ: ಕಾಗಿಸೊ ರಬಾಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News