ದುಬೈ ಪೊಲೀಸ್ ಮುಖ್ಯಸ್ಥರಿಂದ ಭಾರತೀಯರ ಶಿಸ್ತಿನ ಗುಣಗಾನ

Update: 2018-04-04 04:49 GMT

ದುಬೈ, ಎ.4: ಗಲ್ಫ್ ದೇಶಗಳಲ್ಲಿ ಮಾದಕ ವಸ್ತು ದಂಧೆಗೆ ಕಡಿವಾಣ ಹಾಕಲು ಪಾಕಿಸ್ತಾನಿ ಅಧಿಕಾರಿಗಳು ವಿಫಲವಾಗಿರುವುದನ್ನು ಕಟುವಾಗಿ ಟೀಕಿಸಿರುವ ಭಾರತೀಯರನ್ನು ದುಬೈನ ಹಿರಿಯ ಪೊಲೀಸ್ ಅಧಿಕಾರಿ ಶ್ಲಾಘಿಸಿದ್ದಾರೆ. ಭಾರತೀಯರು ಅಮೋಘ ಶಿಸ್ತು ಪ್ರದರ್ಶಿಸಿದ್ದಾರೆ ಎಂದು ಅವರು ಗುಣಗಾನ ಮಾಡಿದ್ದಾರೆ.

ದುಬೈ ಜನರಲ್ ಸೆಕ್ಯುರಿಟಿ ವಿಭಾಗದ ಮುಖ್ಯಸ್ಥ ಧಾಹಿ ಖಲ್ಫನ್, "ಭಾರತೀಯರು ಏಕೆ ಶಿಸ್ತು ರೂಢಿಸಿಕೊಂಡಿದ್ದಾರೆ? ಪಾಕಿಸ್ತಾನಿ ಸಮುದಾಯದಲ್ಲಿ ದೇಶದ್ರೋಹ, ಅಪರಾಧ ಪ್ರವೃತ್ತಿ ಹಾಗೂ ಕಳ್ಳಸಾಗಣೆ ಏಕೆ ಅಧಿಕ" ಎಂದು ಅವರು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

ಗಲ್ಫ್ ಸಮುದಾಯಗಳಿಗೆ ಪಾಕಿಸ್ತಾನ ಗಂಭೀರ ಅಪಾಯ. ಏಕೆಂದರೆ ಪಾಕಿಸ್ತಾನಿಗಳು ಈ ದೇಶಗಳಿಗೆ ಮಾದಕ ವಸ್ತುಗಳನ್ನು ತರುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಮಾದಕ ವಸ್ತು ಕಳ್ಳಸಾಗಣೆಯಲ್ಲಿ ದುಬೈ ಅಧಿಕಾರಿಗಳು ಪಾಕಿಸ್ತಾನಿ ಗ್ಯಾಂಗ್ ಒಂದನ್ನು ಬಂಧಿಸಿದ ಬಳಿಕ ಧಾಹಿ ಖಲ್ಫನ್ ಈ ಹೇಳಿಕೆ ನೀಡಿದ್ದಾರೆ.

ವಿವಾದಾತ್ಮಕ ಹೇಳಿಕೆಗಳಿಗೆ ಹೆಸರಾಗಿರುವ ಖಲ್ಫನ್, "ಈ ಪ್ರದೇಶದ ಜತೆ ಪಾಕಿಸ್ತಾನ ಐತಿಹಾಸಿಕವಾಗಿ ಗಾಢವಾದ ಸಂಬಂಧ ಹೊಂದಿದ್ದರೂ, ಯುಎಇ ಮೂಲದ ಕಂಪೆನಿಗಳು ಪಾಕಿಸ್ತಾನಿ ಪ್ರಜೆಗಳನ್ನು ಉದ್ಯೋಗಕ್ಕೆ ನಿಯೋಜಿಸಿಕೊಳ್ಳಬೇಡಿ" ಎಂದೂ ಸಲಹೆ ಮಾಡಿದ್ದಾರೆ. ಇವರು ಟ್ವಿಟ್ಟರ್‌ನಲ್ಲಿ 26.6 ಲಕ್ಷ ಟ್ವಿಟ್ಟರ್ ಅನುಯಾಯಿಗಳನ್ನು ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News