ಮಧ್ಯ ಪ್ರದೇಶ: ನರ್ಮದಾ ಹಗರಣದ ವಿರುದ್ಧ ಅಭಿಯಾನ ಕೈಬಿಟ್ಟ ಇಬ್ಬರು ಸಂತರು

Update: 2018-04-04 13:02 GMT

ಇಂದೋರ್, ಎ.4: ಮಧ್ಯ ಪ್ರದೇಶ ಸರಕಾರವು ರಾಜ್ಯ ಸಚಿವ ಸ್ಥಾನಮಾನ ನೀಡಿದ ಐದು ಮಂದಿ ಧಾರ್ಮಿಕ ನಾಯಕರ ಪೈಕಿ ಇಬ್ಬರು ಸರಕಾರದ ನರ್ಮದಾ ಸಂರಕ್ಷಣಾ ಕಾರ್ಯಕ್ರಮದಲ್ಲಿ ನಡೆದಿದೆಯೆನ್ನಲಾದ ಹಗರಣದ ವಿರುದ್ಧ ನಡೆಸಲುದ್ದೇಶಿಸಿದ್ದ ಅಭಿಯಾನವನ್ನು ರದ್ದುಗೊಳಿಸಿದ್ದಾರೆ.

ರಾಜ್ಯಮಂತ್ರಿ ಸ್ಥಾನ ಪಡೆದ ಸಂತರಲ್ಲೊಬ್ಬರಾದ ಕಂಪ್ಯೂಟರ್ ಬಾಬಾ ಈ ಹಿಂದೆ ನರ್ಮದಾ ಘೊಟಾಲ ರಥಯಾತ್ರೆಯನ್ನು ಯೋಗೇಂದ್ರ ಮಹಂತ್ ಜತೆ ಸೇರಿ ಎಪ್ರಿಲ್ 1ರಿಂದ ಮೇ 15ರ ತನಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದರಲ್ಲದೆ ನರ್ಮದಾ ನದಿ ತೀರದಲ್ಲಿ ಗಿಡಗಳನ್ನು ನೆಡುವ ಯೋಜನೆಯಲ್ಲಿನ ಹಗರಣವನ್ನು ಬಯಲುಗೊಳಿಸುವುದಾಗಿ ಬೆದರಿಸಿದ್ದರು. ಅಕ್ರಮ ಮರಳುಗಾರಿಕೆಗೆ ಅಂತ್ಯ ಹಾಡಬೇಕೆಂದೂ ಆಗ್ರಹಿಸಿದ್ದರು.

ಈ ಅಭಿಯಾನದ ಪ್ರಚಾರ ಕರಪತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಹರಿದಾಡಿದ್ದವು. ಆದರೆ ತಾವು ತಮ್ಮ ಅಭಿಯಾನವನ್ನು ರದ್ದುಗೊಳಿಸಿರುವುದಾಗಿ ಬುಧವಾರ ಕಂಪ್ಯೂಟರ್ ಬಾಬಾ ಹೇಳಿದ್ದಾರೆ. ಸರಕಾರ ನರ್ಮದಾ ನದಿ ಸಂರಕ್ಷಣೆಗಾಗಿ ಸಮಿತಿ ರಚಿಸಿ ತಮ್ಮ ಬೇಡಿಕೆ ಪೂರೈಸಿದೆ ಎಂದೂ ಅವರು ಹೇಳಿದ್ದಾರೆ. ನಮಗೆ ರಾಜ್ಯಮಂತ್ರಿ ಸ್ಥಾನಮಾನ ದೊರೆಯದೇ ಇದ್ದರೆ ನಾವು ಅಧಿಕಾರಿಗಳನ್ನು ಹೇಗೆ ಭೇಟಿಯಾಗಲು ಸಾಧ್ಯ ಹಾಗೂ ನದಿ ಸಂರಕ್ಷಣೆಯನ್ನು ಹೇಗೆ ಕೈಗೊಳ್ಳಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಸ್ತಾವಿತ ಅಭಿಯಾನ ಹಮ್ಮಿಕೊಂಡಿದ್ದ ಇನ್ನೊಬ್ಬ ಸಂತ ಯೋಗೇಂದ್ರ ಮಹಂತ್ ಕೂಡ ತಾವು ತಮ್ಮ ಅಭಿಯಾನವನ್ನು ರದ್ದುಗೊಳಿಸಿದ್ದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News