ಇಂದು ಭಾರತ ಅಭಿಯಾನ ಆರಂಭ: ಚಾನು ಮೇಲೆ ಭರವಸೆ

Update: 2018-04-04 18:39 GMT

ಗೋಲ್ಡ್‌ಕೋಸ್ಟ್, ಎ.5: ವಿಶ್ವ ಚಾಂಪಿಯನ್ ವೇಟ್‌ಲಿಫ್ಟರ್ ಮೀರಾಬಾಯಿ ಚಾನು 21ನೇ ಆವೃತ್ತಿಯ ಕಾಮನ್‌ವೆಲ್ತ್ ಗೇಮ್ಸ್ ನ ಮೊದಲ ದಿನವಾದ ಗುರುವಾರ ಪದಕ ಗೆಲ್ಲುವ ಆಶಯದೊಂದಿಗೆ ಕಣಕ್ಕಿಳಿಯಲಿದ್ದಾರೆ. ಬ್ಯಾಡ್ಮಿಂಟನ್ ಆಟಗಾರರು, ಬಾಕ್ಸರ್‌ಗಳು, ಮಹಿಳಾ ಹಾಕಿ ತಂಡ ಹಾಗೂ ಟೇಬಲ್ ಟೆನಿಸ್ ಆಟಗಾರರು ಸಹಿತ ಇತರರು ತಮ್ಮ ಅಭಿಯಾನ ಆರಂಭಿಸಲು ಸಜ್ಜಾಗಿದ್ದಾರೆ.

48 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಲಿರುವ ಚಾನು 2014ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದರು. ಅಮೆರಿಕದಲ್ಲಿ 2017ರ ನವೆಂಬರ್‌ನಲ್ಲಿ ನಡೆದ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 194 ಕೆ.ಜಿ.(85+109) ತೂಕ ಎತ್ತಿಹಿಡಿಯುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದ ಚಾನು ಅವರು ಕರ್ಣಂ ಮಲ್ಲೇಶ್ವರಿ ಬಳಿಕ ವಿಶ್ವ ಚಾಂಪಿಯನ್‌ಪಟ್ಟಕ್ಕೇರಿದ ಭಾರತದ ಎರಡನೇ ವೇಟ್‌ಲಿಫ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

 ಗೇಮ್ಸ್‌ನಲ್ಲಿ ಸ್ಪರ್ಧಾಕಣದಲ್ಲಿರುವ ಚಾನು ಅವರ ಪ್ರತಿಸ್ಪರ್ಧಿಗಳು ಈ ತನಕ ಒಟ್ಟು 180 ಕೆಜಿ ತೂಕ ಎತ್ತಿಲ್ಲ. ಕೆನಡಾದ ಅಮಾಂಡ ಬ್ರಾಡಕ್ ಜೀವನಶ್ರೇಷ್ಠ 173 ಕೆಜಿ ತೂಕ ಎತ್ತಿದ್ದಾರೆ. ಕಳೆದ ಬಾರಿಯ ಗೇಮ್ಸ್‌ನಲ್ಲಿ 5ನೇ ಸ್ಥಾನ ಪಡೆದಿರುವ ಭಾರತದ ಮಹಿಳಾ ಹಾಕಿ ತಂಡ ನಾಳೆ ಬೆಳಗ್ಗೆ ವೇಲ್ಸ್ ತಂಡವನ್ನು ಎದುರಿಸುವ ಮೂಲಕ ತನ್ನ ಹೋರಾಟ ಆರಂಭಿಸಲಿದೆ. ಗೇಮ್ಸ್‌ಗೆ ಮೊದಲು ದಕ್ಷಿಣ ಕೊರಿಯಾದಲ್ಲಿ ಭಾರತದ ಆಟಗಾರ್ತಿಯರು ಉತ್ತಮ ಪ್ರದರ್ಶನ ನೀಡಿದ್ದಾರೆ. ಅಲ್ಲಿ ಸರಣಿ ಜಯಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ.

   ಸ್ಟಾರ್ ಆಟಗಾರರನ್ನು ಹೊಂದಿರುವ ಭಾರತದ ಬ್ಯಾಡ್ಮಿಂಟನ್ ತಂಡ ಮೊದಲ ದಿನ ಮಿಕ್ಸೆಡ್ ಟೀಮ್ ಚಾಂಪಿಯನ್‌ಶಿಪ್‌ನಲ್ಲಿ ಶ್ರೀಲಂಕಾ ಹಾಗೂ ಪಾಕಿಸ್ತಾನ ವಿರುದ್ಧ ಆಡುವ ಮೂಲಕ ಪದಕದ ಬೇಟೆ ಆರಂಭಿಸಲಿದೆ.

 ‘ಎ’ ಗುಂಪಿನಲ್ಲಿ ಅಗ್ರ ಶ್ರೇಯಾಂಕ ಪಡೆದಿರುವ ಭಾರತ ತಂಡ ಶ್ರೀಲಂಕಾ, ಪಾಕಿಸ್ತಾನ ಹಾಗೂ ಸ್ಕಾಟ್ಲೆಂಡ್ ತಂಡಗಳೊಂದಿಗೆ ಸ್ಥಾನ ಪಡೆದಿದೆ.

2010ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಮನೋಜ್‌ಕುಮಾರ್(69ಕೆಜಿ)ಮಾತ್ರ ನಾಳೆ ಬಾಕ್ಸಿಂಗ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ಸ್ಕ್ವಾಷ್‌ನಲ್ಲಿ ದೀಪಿಕಾ ಪಲ್ಲಿಕಲ್, ಜೋಶ್ನಾ ಚಿನ್ನಪ್ಪ, ಸೌರವ್ ಘೋಷಾಲ್ ಹಾಗೂ ಹರಿಂದರ್ ಪಾಲ್ ಸಂಧು ಸಿಂಗಲ್ಸ್ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ. 2014ರ ಗೇಮ್ಸ್‌ನಲ್ಲಿ ಮಹಿಳೆಯರ ಡಬಲ್ಸ್‌ನಲ್ಲಿ ಚಿನ್ನ ಜಯಿಸಿರುವ ಪಲ್ಲಿಕಲ್ ಹಾಗೂ ಚಿನ್ನಪ್ಪ ಈ ಬಾರಿ ಸಿಂಗಲ್ಸ್ ವಿಭಾಗದಲ್ಲಿ ಪದಕ ಗೆಲ್ಲುತ್ತಾರೋ ಎಂದು ನೋಡಬೇಕಾಗಿದೆ.

 ಟೇಬಲ್ ಟೆನಿಸ್ ತಂಡದ ಹಿರಿಯ ಆಟಗಾರ ಸೌಮ್ಯಜಿತ್ ಘೋಷಾಲ್ ಅತ್ಯಾಚಾರ ಆರೋಪಕ್ಕೀಡಾದ ಕಾರಣ ತಂಡದಿಂದ ಕೈಬಿಡಲ್ಪಟ್ಟಿದ್ದು, ಟಿಟಿ ಆಟಗಾರರು ಎಲ್ಲ ವಿವಾದವನ್ನು ಬದಿಗಿಟ್ಟು ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಸ್ಮರಣೀಯ ಪ್ರದರ್ಶನ ನೀಡಲು ಬಯಸಿದ್ದಾರೆ.

 ಮೊದಲ ದಿನದ ಸ್ಪರ್ಧೆಯಲ್ಲಿ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್‌ನಲ್ಲಿ ಭಾರತದ ಪುರುಷರ ತಂಡ ಕಣಕ್ಕಿಳಿಯಲಿದೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚು ಹಾಗೂ ಬೆಳ್ಳಿ ಪದಕ ಜಯಿಸಿ ಐತಿಹಾಸಿಕ ಸಾಧನೆ ಮಾಡಿರುವ ಆಶೀಷ್ ಕುಮಾರ್ ತಂಡಕ್ಕೆ ವಾಪಸಾಗಿದ್ದಾರೆ.

ಪುರುಷರ ಹಾಗೂ ಮಹಿಳಾ ಬಾಸ್ಕೆಟ್ ಬಾಲ್ ತಂಡಗಳು ನಾಳೆ ಮೊದಲ ಪಂದ್ಯಗಳನ್ನು ಕ್ರಮವಾಗಿ ಕ್ಯಾಮರೂನ್ ಹಾಗೂ ಜಮೈಕಾ ವಿರುದ್ಧ ಆಡಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News