ಅಂತರ್‌ರಾಷ್ಟ್ರೀಯ ಚಾಲನಾ ಪರವಾನಿಗೆ ಇನ್ನು ‘ಸ್ಮಾರ್ಟ್‌ಕಾರ್ಡ್’

Update: 2018-04-05 08:39 GMT
ಸಾಂದರ್ಭಿಕ ಚಿತ್ರ

► ಅಕ್ರಮ ಐಡಿಎಲ್ ತಡೆಗಟ್ಟಲು ಸಹಕಾರಿ

ಮಂಗಳೂರು, ಎ.4: ಅಂತರ್ ರಾಷ್ಟ್ರೀಯ ಚಾಲನಾ ಪರವಾನಿಗೆ (ಐಡಿಎಲ್)ಯನ್ನು ಖಚಿತಪಡಿಸಲು ಈವರೆಗೆ ಪಾಸ್‌ಪೋರ್ಟ್ ಮಾದರಿಯ ಕಿರುಹೊತ್ತಿಗೆಯನ್ನು ನೀಡಲಾಗುತ್ತಿತ್ತು. ಇದೀಗ ಅದಕ್ಕೆ ವಿದಾಯ ಹೇಳಲಿರುವ ಸಾರಿಗೆ ಇಲಾ ಖೆಯು ನೂತನ ತಂತ್ರಾಂಶ ಬಳಕೆ ಮಾಡಿಕೊಂಡು ಸ್ಮಾರ್ಟ್ ಕಾರ್ಡ್ ನೀಡಲು ಮುಂದಾಗಿದೆ.

ಪುಸ್ತಕ ರೂಪದ ಐಡಿಎಲ್‌ಅನ್ನು ವಿದೇಶ ಗಳಲ್ಲಿ ಸಮರ್ಪಕವಾಗಿ ಪರಿಶೀಲಿಸಲು ಸಾಧ್ಯವಾಗುತ್ತಿರಲಿಲ್ಲ. ಇತ್ತೀಚೆಗೆ ವಿದೇಶಗಳಲ್ಲಿ ಇಂತಹ ಪುಸ್ತಕ ರೂಪದ ಐಡಿಎಲ್ ಅನ್ನು ಎಲ್ಲೂ ಸ್ವೀಕರಿಸುತ್ತಿಲ್ಲ. ಈಗಾಗಲೇ ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲ ಭಾರತೀಯರು ಕಾನೂನು ಬಾಹಿರವಾಗಿ ನಕಲು ಐಡಿಎಲ್‌ಗಳನ್ನು ಪಡೆದಿದ್ದಾರೆ. ಈ ಮೊದಲಿನ ಕಿರುಪುಸ್ತಕ ಮಾದರಿಯ ಪರವಾನಿಗೆಯನ್ನು ಬಾಹ್ಯವಾಗಿ ಪರೀಕ್ಷಿಸಿ ಚಲಾವಣೆಗೊಳಿಸುತ್ತಿದ್ದರು. ಸ್ಮಾರ್ಟ್ ಕಾರ್ಡ್ ಆದಲ್ಲಿ ಎಲ್ಲ ರೀತಿಯ ನಕಲು ಮಾಡುವ ಸಾಧ್ಯತೆಗಳನ್ನು ತಡೆಗಟ್ಟಬಹುದಾಗಿದೆ ಎಂಬ ಸಾರ್ವತ್ರಿಕ ಅಭಿಪ್ರಾಯ ಮತ್ತು ಆಧುನೀಕರಣಕ್ಕೆ ಒಗ್ಗಿಕೊಳ್ಳುವ ಸಲುವಾಗಿ ಈ ವ್ಯವಸ್ಥೆಗೆ ಇಲಾಖೆ ಸನ್ನದ್ಧವಾಗಿದೆ.

ಐಡಿಎಲ್ ಪಡೆಯಲು ಲಘುವಾಹನ ಚಾಲನಾ ಪರವಾನಿಗೆ ಪಡೆದು ಒಂದು ವರ್ಷ ಆಗಿರಬೇಕು. ಪಾಸ್‌ಪೋರ್ಟ್, ವೀಸಾ, ಏರ್‌ಟಿಕೆಟ್‌ಗಳು ಈ ಪ್ರಕ್ರಿಯೆಗೆ ಅಗತ್ಯವಿದೆ. ಒಂದು ವೇಳೆ ವರ್ಷದ ಒಳಗೇ ಐಡಿಎಲ್ ಬೇಕಾದರೆ ಅಂತಹವರಿಗೆ ಮತ್ತೆ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. ಬಳಿಕ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಸಾರಿಗೆ ಇಲಾಖೆಯ ಅಧಿಕಾರಿಗಳು ಐಡಿಎಲ್‌ನ್ನು ವಿತರಿಸುತ್ತಾರೆ ಎಂದು ಮಂಗಳೂರು ಪ್ರಾದೇಶಿಕ ಸಾರಿಗೆ ಇಲಾಖೆಯ ಪ್ರಭಾರ ಉಪಾಯುಕ್ತ ಮತ್ತು ಹಿರಿಯ ಪ್ರಾದೇಶಿಕ ಅಧಿಕಾರಿ ಜಿ.ಎಸ್. ಹೆಗಡೆ ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದ್ದಾರೆ.

ಬೋಗಸ್ ತಡೆಗಟ್ಟಲು ಅನುಕೂಲ: ಇಲ್ಲಿಯವರೆಗೆ ಕಿರುಪುಸ್ತಕ ಮಾದರಿಯಲ್ಲಿ ವಿತರಿ ಸಲಾಗುತ್ತಿದ್ದ ಐಡಿಎಲ್‌ನ್ನು ಯಾರು ಬೇಕಾದರೂ ನಕಲು ಮಾಡಬಹುದಾಗಿತ್ತು. ಮುಂದಿನ ದಿನಗಳಲ್ಲಿ ಕೊಡುವ ಐಡಿಎಲ್ ಸ್ಮಾರ್ಟ್ ಕಾರ್ಡ್ ನ್ಯಾಶನಲ್ ಇನ್ಫಾರ್ಮೆಟಿಕ್ ಸೆಂಟರ್‌ನ ಸರ್ವರ್‌ಗೆ ಲಿಂಕ್ ಆಗುತ್ತದೆ. ಶೇ.100ರಷ್ಟು ಸ್ಮಾರ್ಟ್‌ಕಾರ್ಡ್ ಸುರಕ್ಷಿತವಾಗಿರುತ್ತದೆ. ಪರವಾನಿಗೆಯನ್ನು ಟ್ರಾಕ್ ಮಾಡಬಹುದಾಗಿದೆ.ಈಗಾಗಲೇ ಸಾಕಷ್ಟು ಪರವಾನಿಗೆಗಳು ನಕಲು ಆಗಿರುವುದು ಬೆಳಕಿಗೆ ಬಂದಿವೆ.

ಒಂದೇ ಹೆಸರಿನಲ್ಲಿ ಎರಡು-ಮೂರು ಸ್ಥಳಗಳಲ್ಲಿ ಲೈಸೆನ್ಸ್‌ಗಳನ್ನು ಪಡೆದಿದ್ದಾರೆ. ಒಂದು ಅಮಾನತುಗೊಂಡರೆ ಇನ್ನೊಂದೆಡೆ ಮತ್ತೊಂದು ಲೈಸೆನ್ಸ್‌ನ್ನು ಬಳಸುವ ಪ್ರಕರಣಗಳು ಹೆಚ್ಚುತ್ತಿವೆ. ಹೀಗೆ ಮೋಸ ಮಾಡುವ ಅವಕಾಶಗಳು ಹೆಚ್ಚಿದ್ದವು.ಇದೀಗ ಐಡಿಎಲ್ ‘ಸ್ಮಾರ್ಟ್‌ಕಾರ್ಡ್’ ಆದಲ್ಲಿ ಎಲ್ಲ ರೀತಿಯ ನಕಲುಗಳ ತಡೆಗೆ ಅನುಕೂಲವಾಗಲಿದೆ.

ಇಲ್ಲಿಯವರೆಗೆ ಐಡಿಎಲ್‌ನ್ನು ಪಡೆಯಲು 1 ಸಾವಿರ ರೂ. ಖರ್ಚಾಗುತ್ತಿತ್ತು. ಸ್ಮಾರ್ಟ್ ಕಾರ್ಡ್ ವಿತರಿಸುವ ತಂತ್ರಜ್ಞಾನವನ್ನು ಅಳವಡಿಸಿಕೊಂಡಲ್ಲಿ 1,200 ರೂ.ಗೆ ಹೆಚ್ಚಿಸುವ ಸಾಧ್ಯತೆ ಇದೆ. ಸ್ಮಾರ್ಟ್‌ಕಾರ್ಡ್ ಆದಲ್ಲಿ ಕೆಲವೇ ನಿಮಿಷಗಳಲ್ಲಿ ಪರಿಶೀಲನೆ ಮಾಡಬಹುದಾಗಿದೆ. ಇದರಿಂದ ಸಮಯ ಉಳಿತಾಯವಾಗಲಿದ್ದು, ಸುರಕ್ಷಿತ ತಂತ್ರಜ್ಞಾನದಿಂದ ಈ ಸ್ಮಾರ್ಟ್‌ಕಾರ್ಡ್ ನ್ನು ತಯಾರಿಸಲಾಗುತ್ತದೆ. ಇದನ್ನು ನಕಲು ಮಾಡುವುದು ಸಾಧ್ಯವಿಲ್ಲ.

ಸಿಬ್ಬಂದಿ ಕೊರತೆ: ಐಡಿಎಲ್ ಸ್ಮಾರ್ಟ್‌ಕಾರ್ಡ್ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಸಿಬ್ಬಂದಿಯ ಕೊರತೆ ಇದೆ. ಈಗಾಗಲೇ ಸಾರಿಗೆ ಇಲಾಖೆಯಲ್ಲಿ ಕಾಗದ ರಹಿತ ಆಡಳಿತ ನೀಡಲು ತಿಂಗಳ ಹಿಂದೆಯೇ ‘ವಾಹನ-4’ ತಂತ್ರಾಂಶ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. ಆದರೆ ಈ ತಂತ್ರಾಂಶ ಇನ್ನೂ ಕಾರ್ಯನಿರ್ವಹಿಸುತ್ತಿಲ್ಲ. ಇಲ್ಲಿ ಡಾಟಾ ಎಂಟ್ರಿ, ಹೊಸ ನೋಂದಣಿಗೆ ಸಿಬ್ಬಂದಿಯ ಕೊರತೆ ಇದೆ. ಇದು ಸಮಸ್ಯೆಯಾಗಿ ಪರಿಣಮಿಸಿದೆ. ಸಾರಿಗೆ ಇಲಾಖೆಯ ಮಂಗಳೂರು ಕಚೇರಿಯ ಬಹುತೇಕ ಸಿಬ್ಬಂದಿಯನ್ನು ನೂತನವಾಗಿ ಬಂಟ್ವಾಳದಲ್ಲಿ ತೆರೆಯಲ್ಪಟ್ಟ ಕಚೇರಿಗೆ ನಿಯೋಜಿಸಿರುವುದು ಕೂಡ ಸಿಬ್ಬಂದಿಯ ಕೊರತೆ ಹೆಚ್ಚಾಗಲು ಕಾರಣವಾಗಿದೆ.

ದ.ಕ.ಜಿಲ್ಲೆಯಲ್ಲಿ ಶೀಘ್ರದಲ್ಲೇ ಐಡಿಎಲ್ ಪರವಾನಿಗೆಯನ್ನು ಸುಲಭವಾಗಿ ಪಡೆದು ಕೊಳ್ಳಬಹುದು. ಅದಕ್ಕೆ ಸಂಬಂಧಿಸಿದಂತೆ ಬಯೋಮೆಟ್ರಿಕ್ ಹಾಗೂ ಭಾವಚಿತ್ರಗಳನ್ನು ಇಲ್ಲಿಯೇ ತೆಗೆಯುವ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಪಾಸ್‌ಪೋರ್ಟ್ ಕೂಡ ಸ್ಮಾರ್ಟ್ ಕಾರ್ಡ್ ಆಗಿ ಪರಿವರ್ತನೆಯಾಗಲಿದೆ.

- ಜಿ.ಎಸ್. ಹೆಗಡೆ, ಪ್ರಾದೇಶಿಕ ಸಾರಿಗೆ ಇಲಾಖೆಯ ಪ್ರಭಾರ ಉಪಾಯುಕ್ತ, ಮಂಗಳೂರು

Writer - -ಬಂದೇನವಾಝ್ ಮ್ಯಾಗೇರಿ

contributor

Editor - -ಬಂದೇನವಾಝ್ ಮ್ಯಾಗೇರಿ

contributor

Similar News