ದತ್ತಾಂಶ ಮಾಹಿತಿ ದೇಶದಲ್ಲೇ ಸಂಗ್ರಹಿಸಿಡಲು ಆರ್‌ಬಿಐ ಸೂಚನೆ

Update: 2018-04-05 15:48 GMT

ಮುಂಬೈ, ಎ.5: ಬಳಕೆದಾರರ ಮಾಹಿತಿಯ ಸುರಕ್ಷತೆಯ ದೃಷ್ಟಿಯಿಂದ ಇನ್ನುಮುಂದೆ ದೇಶದ ಎಲ್ಲಾ ಪಾವತಿ ವ್ಯವಸ್ಥೆ ಆಯೋಜಕರು ದತ್ತಾಂಶಗಳ ಮಾಹಿತಿಯನ್ನು ಭಾರತದಲ್ಲೇ ಶೇಖರಿಸಿಡಬೇಕು ಎಂದು ಆರ್‌ಬಿಐ ತಿಳಿಸಿದೆ.

ಈಗ ಕೆಲವು ಪಾವತಿ ವ್ಯವಸ್ಥೆ ಆಯೋಜಕರು ಹಾಗೂ ಅವರ ಹೊರಗುತ್ತಿಗೆ ಪಾಲುದಾರರು ಮಾತ್ರ ಪಾವತಿ ವ್ಯವಸ್ಥೆ ದತ್ತಾಂಶವನ್ನು ದೇಶದೊಳಗೆ ಶೇಖರಿಸಿಡುತ್ತಿದ್ದಾರೆ. ಈ ಸೂಚನೆಯನ್ನು ಅನುಸರಿಸಲು ಆಯೋಜಕರಿಗೆ ಆರು ತಿಂಗಳ ಕಾಲಾವಕಾಶ ನೀಡಲಾಗಿದೆ . ಒಂದು ವಾರದೊಳಗೆ ಈ ಕುರಿತು ವಿವರವಾದ ಮಾಹಿತಿ ನೀಡಲಾಗುವುದು ಎಂದು ಆರ್‌ಬಿಐ ತಿಳಿಸಿದೆ.

ಅತ್ಯುತ್ತಮ ಜಾಗತಿಕ ಗುಣಮಟ್ಟದ ಪಾವತಿ ವ್ಯವಸ್ಥೆ ದತ್ತಾಂಶವನ್ನು ಪಡೆಯಲಾಗಿದ್ದು, ದತ್ತಾಂಶ ಸೋರಿಕೆಯಾಗುವ ಅಪಾಯವನ್ನು ಕಡಿಮೆಗೊಳಿಸಲು ಹಾಗೂ ಅದರ ಸುರಕ್ಷತೆ ಮತ್ತು ಭದ್ರತೆಯ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪಾವತಿ ದತ್ತಾಂಶಗಳ ಮೇಲ್ವಿಚಾರಣೆ ನಡೆಸಲು ಮುಕ್ತ ಅವಕಾಶ ಕಲ್ಪಿಸುವ ಉದ್ದೇಶದಿಂದ ಮುಂದಿನ ಆರು ತಿಂಗಳೊಳಗೆ ಎಲ್ಲಾ ಪಾವತಿ ವ್ಯವಸ್ಥೆ ದತ್ತಾಂಶವನ್ನು ದೇಶದೊಳಗೆ ಶೇಖರಿಸಿಡಲು ಸೂಚಿಸಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.

ಬಳಕೆದಾರರ ಕುರಿತ ಮಾಹಿತಿಯನ್ನು ಫೇಸ್‌ಬುಕ್ ಬಹಿರಂಗಗೊಳಿಸಿದೆ ಎಂಬ ವರದಿ ಜಾಗತಿಕ ಮಟ್ಟದಲ್ಲಿ ತಲ್ಲಣ ಎಬ್ಬಿಸಿರುವ ಹಿನ್ನೆಲೆಯಲ್ಲಿ ದತ್ತಾಂಶ ಸುರಕ್ಷೆಯ ಕುರಿತು ಆರ್‌ಬಿಐ ಕ್ರಮಗಳನ್ನು ಕೈಗೊಂಡಿದೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News