ಕಬ್ಬಿಣದ ಕಡಲೆಯಾದ ಎಸೆಸೆಲ್ಸಿ ವಿಜ್ಞಾನ ಪರೀಕ್ಷೆ

Update: 2018-04-05 18:26 GMT

ಮಾನ್ಯರೇ,

ರಾಜ್ಯ ಸರಕಾರದ ನಿರ್ಧಾರದಂತೆ ಕಳೆದ ಕೆಲವು ವರ್ಷಗಳಿಂದ 1ರಿಂದ 8ನೇ ತರಗತಿಯವರೆಗೆ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸುವಂತಿಲ್ಲ. 8 ವರ್ಷಗಳವರೆಗೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಮತ್ತು ಅನುತ್ತೀರ್ಣತೆಯ ಗಂಭೀರ ಪರಿಣಾಮ ತಿಳಿಸದೆ ಅವರನ್ನು ಉತ್ತೀರ್ಣ ಮಾಡುತ್ತಾ ಹೋಗಿ 9 ಮತ್ತು 10ನೇ ತರಗತಿಯಲ್ಲಿ ಪರೀಕ್ಷೆಗೆ ಸಿದ್ಧ ಪಡಿಸಿ ಅವರಿಂದ ಉತ್ತಮ ಫಲಿತಾಂಶ ನಿರೀಕ್ಷಿಸಲಾಗುತ್ತಿದೆ. ಆದರೂ ಪ್ರಶ್ನೆ ಪತ್ರಿಕೆ ತಯಾರಿಕೆಯಲ್ಲಿ ಪರಿಣತರಿರುವ ಹಲವಾರು ಸಂಪನ್ಮೂಲ ವ್ಯಕ್ತಿಗಳು ಕ್ಲಸ್ಟರ್ ಹಂತದಲ್ಲಿ, ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಮಾರ್ಗದರ್ಶನ ನೀಡುತ್ತಾ ಕನಿಷ್ಠ ತೇರ್ಗಡೆಯ ಉಪಾಯಗಳು ಹಾಗೂ ಆ ಬಗ್ಗೆ ಹತ್ತಾರು ಟಿಪ್ಸ್ ನೀಡಿ ಪರೀಕ್ಷೆಗೆ ಸಿದ್ಧಗೊಳಿಸಿದ್ದಾರೆ.

ಆದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆ ಕಾಯಿಯಾದ ಎಸೆಸೆಲ್ಸಿಯ ವಿಜ್ಞಾನ ಪ್ರಶ್ನೆ ಪತ್ರಿಕೆಯು ಈ ಬಾರಿ ಮತ್ತಷ್ಟು ಶಾಕ್ ನೀಡಿತು. ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ ತಜ್ಞರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಡಲಿಯೇಟು ನೀಡಿದ್ದಾರೆ. ತಜ್ಞರು ತಮ್ಮ ಬುದ್ಧಿವಂತಿಕೆಯನ್ನು ವಿಜ್ಞಾನ ಪ್ರಶ್ನೆ ಪತ್ರಿಕೆಯ ಮೂಲಕ ಮಕ್ಕಳ ಮೇಲೆ ಹೇರಿದ್ದಾರೆ. ಈ ತಜ್ಞರು ನಗರ ಪ್ರದೇಶದ ವಿದ್ಯಾರ್ಥಿಗಳನ್ನು ಮಾತ್ರ ಗಮನದಲ್ಲಿರಿಸಿ ಪ್ರಶ್ನೆ ಪತ್ರಿಕೆ ತಯಾರಿಸಿದಂತಿದೆ. ಇದು ವಿದ್ಯಾರ್ಥಿಗಳ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು. ಪ್ರಸಕ್ತ ಸಾಲಿನಲ್ಲಿ ಉತ್ತಮ ಅಂಕಗಳ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ವಿಜ್ಞಾನ ಪ್ರಶ್ನೆ ಪತ್ರಿಕೆಯಿಂದ ನಿರಾಶೆ ಕಾದಿದೆ. ಹಾಗಾಗಿ ಎಸೆಸೆಲ್ಸಿ ಪರೀಕ್ಷಾ ಮಂಡಳಿಯ ನಿರ್ದೇಶಕರು 20 ರಿಂದ 25 ಅಂಕದೊಳಗಿರುವ ಎಲ್ಲ ವಿದ್ಯಾರ್ಥಿಗಳಿಗೆ 28 ಅಂಕ ಬರುವಂತೆ ಗ್ರೇಸ್ ಮಾರ್ಕುಗಳ ಮಾನವೀಯತೆ ತೋರಿದರೆ ಗ್ರಾಮೀಣ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿದಂತಾದೀತು.

-ಎಂ.ಕೆ.ಎಂ. ತಿಂಗಳಾಡಿ, ಪುತ್ತೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News