ಉದ್ಯೋಗ ಸೃಷ್ಟಿಸದ ನಿಮಗೆ ಮತ ಇಲ್ಲ: ಪ್ರಧಾನಿ ಮೋದಿಗೆ ಎಚ್ಚರಿಕೆ ನೀಡಿದ್ದಾರೆ ಈ ನಗರದ ಜನರು

Update: 2018-04-06 11:56 GMT

ಜೈಪುರ್, ಎ.6: ರಾಜಸ್ಥಾನದ ಕಸ್ಬಾ ಬೊನ್ಲಿ ಎಂಬ ಸಣ್ಣ ಪಟ್ಟಣದ ನಿವಾಸಿಗಳು ಪ್ರಧಾನಿ ಮೋದಿಯ ಆಡಳಿತದ ಬಗ್ಗೆ ತೀವ್ರವಾಗಿ ಭ್ರಮ ನಿರಸನಗೊಂಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಎರಡು ಕೋಟಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದಾಗಿ ಭರವಸೆ ನೀಡಿದ್ದ ಪ್ರಧಾನಿ ಮೋದಿ ಈ ನಿಟ್ಟಿನಲ್ಲಿ ವಿಫಲರಾಗಿದ್ದಾರೆ ಎಂದು ಕಸ್ಬಾ ಬೊನ್ಲಿಯ ಜನರು ಆರೋಪಿಸುತ್ತಾರೆ. ಕಳೆದ ಚುನಾವಣೆಯಲ್ಲಿ ಇಲ್ಲಿ ಹೆಚ್ಚಿನವರು ಬಿಜೆಪಿ ಪರವಾಗಿ ಮತ ಚಲಾಯಿಸಿದ್ದರೂ ಈ ಬಾರಿ ಮಾತ್ರ ತಾವು ಖಂಡಿತಾ ಆ ಪಕ್ಷಕ್ಕೆ ಚಲಾಯಿಸುವುದಿಲ್ಲ ಎಂದು ಹೇಳುತ್ತಿದ್ದಾರೆ.

ಇಲ್ಲಿನ ಹಲವಾರು ಯುವಕರು ತಮ್ಮ ಶೈಕ್ಷಣಿಕ ಅರ್ಹತೆಗೆ ತಕ್ಕಂತೆ ಉದ್ಯೋಗ ಪಡೆದಿಲ್ಲ, ಇನ್ನು ಕೆಲವರಿಗೆ ಉದ್ಯೋಗವೇ ದೊರಕಿಲ್ಲ. ಈ ಪಟ್ಟಣದ ಯುವಕ ರಾಕೇಶ್ ಕುಮಾರ್ (31) ಸ್ನಾತಕೋತ್ತರ ಪದವೀಧರ. ಸೂಕ್ತ ಉದ್ಯೋಗ ದೊರೆಯುವಲ್ಲಿ ಅಸಮರ್ಥನಾಗಿ ಕೊನೆಗೆ ಈತ ಪೈಂಟರ್ ವೃತ್ತಿಯನ್ನು ನಿರ್ವಹಿಸಿ ಕುಟುಂಬವನ್ನು ಸಲಹುತ್ತಿದ್ದಾನೆ. "ಕಳೆದ ಬಾರಿ ನಾನು ಮೋದಿಗೆ ಮತ ನೀಡಿದ್ದೆ. ಅವರು ಉದ್ಯೋಗದ ಭರವಸೆ ನೀಡಿದ್ದರು. ನನಗೆ ಒಳ್ಳೆಯ ಉದ್ಯೋಗ ದೊರೆಯಬಹುದೆಂದು ಅಂದುಕೊಂಡಿದ್ದೆ. ಇನ್ನು ಮುಂದೆ ಅವರಿಗೆ ಮತ ನೀಡುವುದಿಲ್ಲ'' ಎಂದು ಆತ ಖಡಾಖಂಡಿತವಾಗಿ ಹೇಳುತ್ತಾನೆ.

"ನನ್ನ ಇಬ್ಬರು ಪುತ್ರರು ಉತ್ತಮ ಶಿಕ್ಷಣ ಪಡೆದಿದ್ದರೂ ನಿರುದ್ಯೋಗಿಗಳಾಗಿದ್ದಾರೆ,'' ಎಂದು ಪಟ್ಟಣದ ರೈತ ನಾಯಕ ಹನುಮಾನ್ ಪ್ರಸಾದ್ ಮೀನಾ ಹೇಳುತ್ತಾರೆ. "ಹಲವು ರೈತರು ಕಳೆದ ಬಾರಿ ಮೋದಿಗೆ ಮತ ನೀಡಿದ್ದರು. ಈ ಬಾರಿ ಅವರನ್ನು ಬೆಂಬಲಿಸುವವರು ಇಲ್ಲಿ ಯಾರೂ ಇಲ್ಲ'' ಎಂದು ಅವರು ಹೇಳುತ್ತಾರೆ. ನಿರುದ್ಯೋಗ ಸಮಸ್ಯೆಯಿಂದ ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದು ಕಷ್ಟಕರ ಎಂದು ಅಲ್ಲಿನ ಬಿಜೆಪಿ ನಾಯಕರೇ ಒಪ್ಪುತ್ತಾರೆ.

"ಉದ್ಯೋಗ ಹುಡುಕುವುದೇ ನಿರರ್ಥಕ, ಎಲ್ಲಿಯೂ ಉದ್ಯೋಗ ದೊರೆಯುತ್ತಿಲ್ಲ, ನಗರಗಳಿಗೆ ತೆರಳಿ ಅಲ್ಲಿ ಉದ್ಯೋಗ ದೊರೆಯದೆ ಹಿಂದಿರುಗಿದ ಅನೇಕ ಸ್ನೇಹಿತರು ನನಗಿದ್ದಾರೆ'' ಎಂದು ಟೀ ಸ್ಟಾಲ್ ಒಂದನ್ನು ನಡೆಸುವ ಬಬ್ಲು ಸೈನಿ ಎಂಬ ಯುವಕ ಹೇಳುತ್ತಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News