ಎಕೆ-47: ಈ ಮಾರಕ ಆಯುಧದ ಬಗ್ಗೆ ನಿಮಗೆಷ್ಟು ಗೊತ್ತು......?

Update: 2018-04-06 11:07 GMT

ಎಕೆ-47 ರೈಫಲ್‌ನ್ನು ನೋಡಿರದಿದ್ದರೂ ಹೆಚ್ಚಿನವರು ಅದರ ಹೆಸರನ್ನಂತೂ ಕೇಳಿರುತ್ತಾರೆ. ದೇಶಸೇವೆಗಾಗಿ ಹೋರಾಡುವ ಯೋಧರು ವೈರಿಗಳನ್ನು ಮಟ್ಟಹಾಕಲು ಈ ರೈಫಲ್‌ಗಳನ್ನು ಬಯಸಿದರೆ ವಿಧ್ವಂಸಕ ಕೃತ್ಯಗಳನ್ನು ಎಸಗುವ ಭಯೋತ್ಪಾದಕರಿಗೂ ಇದು ಅಚ್ಚುಮೆಚ್ಚಿ ನದ್ದಾಗಿದೆ. ಅಂತಹ ವಿಶೇಷವೇನಿದೆ ಈ ಕಲಾಷ್ನಿಕೊವ್ ರೈಫಲ್‌ಗಳಲ್ಲಿ...?

►ಈ ಮಾರಣಾಂತಿಕ ಶಸ್ತ್ರವನ್ನು ಸೃಷ್ಟಿಸಿದವರು ಯಾರು?

ರೆಡ್ ಆರ್ಮಿಯ ಲೆಫ್ಟಿನೆಂಟ್ ಜನರಲ್ ಆಗಿದ್ದ ಮಿಖಾಯಿಲ್ ಕಲಾಷ್ನಿಕೊವ್ ಎಕೆ-47 ರೈಫಲ್‌ನ ಜನಕ. ಎರಡನೇ ಮಹಾಯುದ್ಧದ ಸಂದರ್ಭ ಜರ್ಮನ್ ದಾಳಿಯ ವಿರುದ್ಧ ರಷ್ಯಾದ ರಕ್ಷಣೆಗಾಗಿ ಹೋರಾಡಿದ್ದ ಈತ ತನ್ನ ದೇಶಕ್ಕಾಗಿ ಕನಸಿನ ಶಸ್ತ್ರವೊಂದನ್ನು ರೂಪಿಸಲು ಬಯಸಿದ್ದ. ಆತನ ಪ್ರಯತ್ನಗಳ ಫಲವಾಗಿ 1949ರಲ್ಲಿ ಜನ್ಮ ತಳೆದಿದ್ದು ಕೊಲಾಷ್ನಿಕೊವ್ ರೈಫಲ್

►ಕೊಲ್ಲಲೆಂದೇ ಹುಟ್ಟಿದ್ದು

ಕೊಲಾಷ್ನಿಕೊವ್ ರೈಫಲ್‌ಗಳು ಅತ್ಯಂತ ಆಧುನಿಕ ಶಸ್ತ್ರಾಸ್ತ್ರಗಳಾಗಿವೆ. ಈ ಸೆಮಿ ಆಟೋಮ್ಯಾಟಿಕ್ ರೈಫಲ್ ಎಕೆ-47, ಎಕೆ 74, ಎಕೆ-101,ಎಕೆ-102 ಇತ್ಯಾದಿ ವಿವಿಧ ಮಾದರಿಗಳಲ್ಲಿ ಹೊರಬಂದಿದ್ದು, ಎಕೆ-15 ಮತ್ತು ಎಕೆ-15ಕೆ ಇವು 2018ನೇ ಇಸವಿಯ ಮಾದರಿಗಳಾಗಿವೆ. ಅತ್ಯಂತ ಇತ್ತೀಚಿನ ಆವೃತ್ತಿಗಳು ರಾತ್ರಿ ಗೋಚರತೆಯ ಸಾಧನಗಳು, ಗ್ರೆನೇಡ್ ಲಾಂಚರ್ ಮತ್ತು ನೈಫ್ ಕಮ್ ಬಯೊನೆಟ್ ಲಾಂಚರ್‌ಗಳಿಂದ ಸುಸಜ್ಜಿತ ವಾಗಿವೆ.

►ಪ್ರತಿಯೊಬ್ಬರಿಗೂ ಬೇಕು

 ಭಾರತ, ಚೀನಾ, ಅಜರ್‌ಬೈಜಾನ್ ಮತ್ತು ಕಝಕಸ್ತಾನ್ ಸೇರಿದಂತೆ ವಿಶ್ವಾದ್ಯಂತ ಈ ರೈಫಲ್‌ಗಳಿಗೆ ಬಲು ಬೇಡಿಕೆಯಿದೆ. ಕಳೆದ ವರ್ಷದ ವರದಿಯೊಂದರಂತೆ 106 ದೇಶಗಳ ಸೇನೆಗಳು ಎಕೆ-47 ರೈಫಲ್‌ಗಳನ್ನು ಪ್ರಮುಖ ಶಸ್ತ್ರಾಸ್ತ್ರವಾಗಿ ಹೊಂದಿವೆ.

►ಭಯೋತ್ಪಾದಕರ ಮೆಚ್ಚಿನ ಅಸ್ತ್ರ

ಈ ಎಲ್ಲ ವರ್ಷಗಳಲ್ಲಿ ಕಲಾಷ್ನಿಕೊವ್ ರೈಫಲ್‌ಗಳ ಅಕ್ರಮ ಮಾರಾಟವು ಹುಲುಸಾದ ದಂಧೆಯಾಗಿ ಬೆಳೆದಿದ್ದು, ಇದರಿದಾಗಿ ವಿಶ್ವಾದ್ಯಂತ ಭಯೋತ್ಪಾದಕ ಗುಂಪುಗಳಿಗೆ ಇವು ಸುಲಭವಾಗಿ ಲಭ್ಯವಾಗುತ್ತಿವೆ. ವಿಶೇಷವಾಗಿ 2015ರ ವೇಳೆಗೆ ಎಕೆ ರೈಫಲ್‌ಗಳು ಭಯೋತ್ಪಾದಕರ ಅವಿಭಾಜ್ಯ ಅಂಗವಾಗಿ ಬೆಳೆದಿದ್ದು, ಆ ವರ್ಷ ನಡೆದಿದ್ದ ಸರಣಿ ಭಯೋತ್ಪಾದಕ ದಾಳಿಗಳಲ್ಲಿ ಕಲಾಷ್ನಿಕೊವ್ ಮಾದರಿಯ ಅಸಾಲ್ಟ್ ರೈಫಲ್‌ಗಳು ವ್ಯಾಪಕವಾಗಿ ಬಳಕೆಯಾಗಿದ್ದವು.

►ಮಾರಣಾಂತಿಕ ಆಯುಧ

ಎಕೆ-47 ರೈಫಲ್ ಪ್ರತಿ ನಿಮಿಷಕ್ಕೆ 600 ಸುತ್ತು ಗುಂಡುಗಳನ್ನು ಹಾರಿಸುವ ಸಾಮರ್ಥ್ಯ ಹೊಂದಿದ್ದು ಅದರ ದಾಳಿವ್ಯಾಪ್ತಿಯು 350 ಮೀಟರ್ ಆಗಿದೆ. ಎಕೆ-103 ಕೂಡ ಇಷ್ಟೇ ಗುಂಡುಗಳನ್ನು ಹಾರಿಸುವ ಸಾಮರ್ಥ್ಯ ಹೊಂದಿದೆಯಾದರೂ ಅದರಿಂದ ಹಾರುವ ಗುಂಡುಗಳು 500 ಮೀಟರ್ ದೂರದವರೆಗೂ ಸಾಗುತ್ತವೆ. ಹೀಗಾಗಿ ಅದು ಅತ್ಯಂತ ಮಾರಣಾಂತಿಕ ಶಸ್ತ್ರಾಸ್ತ್ರಗಳಲ್ಲೊಂದಾಗಿದೆ.

►ಮೇಡ್ ಇನ್ ಇಂಡಿಯಾ ರೈಫಲ್‌ಗಳು

  ಭಾರತ ಸರಕಾರವು ತನ್ನ ಸೇನೆಗಾಗಿ ಭಾರತದಲ್ಲಿಯೇ ಕಲಾಷ್ನಿಕೊವ್ ರೈಫಲ್‌ಗಳ ತಯಾರಿಕೆಗಾಗಿ ರಷ್ಯಾದೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡಿದೆ. ಭಾರತವು ಸ್ವದೇಶಿ ನಿರ್ಮಿತ ಎಕೆ ರೈಫಲ್‌ಗಳನ್ನು ಹೊಂದುವ ಮೊದಲ ದೇಶವೇನಲ್ಲ. ಇಂದು ಸುಮಾರು 30 ದೇಶಗಳಲ್ಲಿ ಕಲಾಷ್ನಿಕೊವ್ ರೈಫಲ್‌ಗಳು ತಯಾರಾಗುತ್ತಿದ್ದು, ಚೀನಾ ಅಗ್ರಸ್ಥಾನದಲ್ಲಿದೆ.

►ಯಾರು ಇದನ್ನು ಬಳಸುತ್ತಾರೆ?

ಒಳನಾಡುಗಳಲ್ಲಿ ನಿಯೋಜನೆಗೊಂಡಿರುವ ಸೇನಾಪಡೆಗಳಿಗೆ ಮತ್ತು ಬಂಡಾಯ ನಿಗ್ರಹ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿರುವ ಯೋಧರಿಗೆ ಎಕೆ ರೈಫಲ್‌ಗಳನ್ನು ಒದಗಿಸುವುದು ಭಾರತ ಸರಕಾರದ ಮೊದಲ ಆದ್ಯತೆಯಾಗಿದೆ. ಕಾಲಕ್ರಮೇಣ ಅರೆ ಮಿಲಿಟರಿ ಪಡೆಗಳ ಬಳಕೆಗೂ ಇವು ಲಭ್ಯವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News