×
Ad

ಬೆಂಗಳೂರು ತ್ಯಾಜ್ಯ ನಿರ್ವಹಣೆಗೆ ತಜ್ಞರ ಸಮಿತಿ ರಚಿಸಲು ಹೈಕೋರ್ಟ್ ಆದೇಶ

Update: 2018-04-06 23:21 IST

ಬೆಂಗಳೂರು, ಎ.6: ಬೆಂಗಳೂರು ತ್ಯಾಜ್ಯ ನಿರ್ವಹಣೆ ಸಂಬಂಧ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ತೋಟಗಾರಿಕೆ ಸಂಶೋಧನಾ ಕೇಂದ್ರ, ಕೃಷಿ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಭಾರತೀಯ ವಿಜ್ಞಾನ ವಿಶ್ವವಿದ್ಯಾಲಯ ಸದಸ್ಯರನ್ನೊಳಗೊಂಡ ತಜ್ಞರ ಸಮಿತಿಯನ್ನು ನಾಲ್ಕು ವಾರಗಳಲ್ಲಿ ರಚಿಸಲು ಹೈಕೋರ್ಟ್ ಆದೇಶಿಸಿದೆ.

ಈ ಸಂಬಂಧ ಕವಿತಾ ಶಂಕರ್ ಸೇರಿ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಮತ್ತು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.

ಬೆಂಗಳೂರು ನಗರದಲ್ಲಿ 7 ಕಸ ಸಂಸ್ಕರಣ ಘಟಕಗಳಿದ್ದು, ಈ ಘಟಕಗಳ ಸಮರ್ಪಕ ಕಾರ್ಯನಿರ್ವಹಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಮೇ 28ರಂದು ತಜ್ಞರ ಸಮಿತಿಯನ್ನು ರಚಿಸಿರುವ ಬಗ್ಗೆ ಹಾಗೂ ಕಸ ನಿರ್ವಹಣೆಯ ಬಗ್ಗೆ ನ್ಯಾಯಪೀಠಕ್ಕೆ ವರದಿಯನ್ನು ಸಲ್ಲಿಸಬೇಕೆಂದು ನ್ಯಾಯಪೀಠವು ಸರಕಾರಕ್ಕೆ ತಿಳಿಸಿತು.

ವಲಯ ಜಂಟಿ ಆಯುಕ್ತರು ತ್ಯಾಜ್ಯ ಸಂಸ್ಕರಣ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಹಾಗೂ ಪರಿಸರ ಎಂಜಿನಿಯರ್ಸ್, ಕೆಮಿಕಲ್ ಎಂಜಿನಿಯರ್ಸ್‌ಗಳನ್ನು ಸರಕಾರ ನೇಮಕ ಮಾಡಿ ಆದೇಶ ಹೊರಡಿಸಬೇಕು. ರಾಮನಗರಕ್ಕೆ ಕಸವನ್ನು ಹೊತ್ತುಕೊಂಡು ಹೋಗುವ ಲಾರಿಗಳಿಗೆ ರಾಮನಗರ ಎಸ್ಪಿ ಅವರು ಭದ್ರತೆಯನ್ನು ನೀಡಲು ಆದೇಶಿಸಬೇಕು. ಕಸ ಸಂಸ್ಕರಣ ಘಟಕಗಳಿಗೆ ಸಿಸಿ ಕ್ಯಾಮರಾ ಅಳವಡಿಸಬೇಕು. ಅಲ್ಲದೆ, ಕಸ ಸಂಸ್ಕರಣ ಘಟಕಗಳಿಗೆ ಅನುಮತಿ ಇಲ್ಲದೆ ಪ್ರವೇಶಕ್ಕೆ ನಿರ್ಬಂಧ ಹೇರಬೇಕೆಂದು ನ್ಯಾಯಪೀಠವು ತಿಳಿಸಿತು.

ವಾರ್ಡ್ ಸಮಿತಿಯ ಸಭೆ ನಡೆಸದ 38 ಸಮಿತಿಗಳಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮೇ 28ಕ್ಕೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News