ದಲಿತ ಗ್ರಾಮಗಳಲ್ಲಿ ಬಿಜೆಪಿ ಸಂಸದರ ವಾಸ್ತವ್ಯ: ಪ್ರಧಾನಿ ಮೋದಿ ಸೂಚನೆ

Update: 2018-04-07 05:22 GMT

ಹೊಸದಿಲ್ಲಿ, ಎ. 7: ಲೋಕಸಭೆ ಚುನಾವಣೆಗೆ ಒಂದು ವರ್ಷ ಉಳಿದಿರುವಂತೆ ಬಿಜೆಪಿ ದಲಿತರು ಮತ್ತು ಆದಿವಾಸಿಗಳ ಓಲೈಕೆಯ ಪ್ರಯತ್ನ ನಡೆಸಿದೆ. ಪಕ್ಷದ ಎಲ್ಲ ಸಚಿವರು, ಸಂಸದರು ಹಾಗೂ ಹಿರಿಯ ಮುಖಂಡರು ಶೇಕಡ 50ಕ್ಕಿಂತ ಅಧಿಕ ದಲಿತರಿರುವ ಗ್ರಾಮಗಳಲ್ಲಿ ರಾತ್ರಿ ವಾಸ್ತವ್ಯ ಹೂಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಫರ್ಮಾನು ಹೊರಡಿಸಿದ್ದಾರೆ.

ಪಕ್ಷದ ಗ್ರಾಮ ಸ್ವರಾಜ್ ಅಭಿಯಾನ ಯೋಜನೆಯಡಿ ಎ.10ರಿಂದ ಮೇ 5ರವರೆಗೆ ಈ ಗ್ರಾಮ ವಾಸ್ತವ್ಯ ನಡೆಯಲಿದೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಪ್ರಕಟಿಸಿದ್ದಾರೆ. ಬಿಜೆಪಿ ಮುಖಂಡರು ಸಾವಿರಕ್ಕಿಂತ ಅಧಿಕ ಜನಸಂಖ್ಯೆ ಇರುವ ಗ್ರಾಮಗಳಲ್ಲಿ ಸಮೂಹ ಸಂಪರ್ಕ ಕಾರ್ಯಕ್ರಮಗಳನ್ನು ಆಯೋಜಿಸಿ, ಸರ್ಕಾರದ "ಸಪ್ತಋಷಿ" ಯೋಜನೆಯಡಿ ನೋಂದಾಯಿಸಿಕೊಳ್ಳುವುದನ್ನು ಖಾತ್ರಿಪಡಿಸಲಿದ್ದಾರೆ. ಇದರಲ್ಲಿ ಮುಖ್ಯವಾಗಿ ಇಂದ್ರಧನುಷ್, ಜನಧನ್ ಹಾಗೂ ಭೀಮ್ ಆಪ್ ಯೋಜನೆಗಳು ಸೇರುತ್ತವೆ ಎಂದು ವಿವರಿಸಿದ್ದಾರೆ.

ದೇಶದಲ್ಲಿ ಶೇಕಡ 50ಕ್ಕಿಂತ ಹೆಚ್ಚು ದಲಿತ ಜನಸಂಖ್ಯೆ ಇರುವ 20,884 ಗ್ರಾಮಗಳಿದ್ದು, ಈ ಗ್ರಾಮಗಳಲ್ಲಿ ಜನೋಪಯೋಗಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುವುದನ್ನು ಸಂಸದರು ಖಾತ್ರಿಪಡಿಸಬೇಕು ಎಂದು ಮೋದಿ ಸೂಚನೆ ನೀಡಿದ್ದಾಗಿ ಅನಂತ್‌ಕುಮಾರ್ ಹೇಳಿದ್ದಾರೆ.

ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸಲು ಸುಪ್ರೀಂಕೋರ್ಟ್ ತೀರ್ಪು ಯತ್ನಿಸಿದೆ ಮತ್ತು ಸರ್ಕಾರ ಇದರ ವಿರುದ್ಧ ಪರಾಮರ್ಶೆ ಅರ್ಜಿ ಸಲ್ಲಿಸಲು ವಿಳಂಬ ಮಾಡಿದೆ ಎಂಬ ಹಿನ್ನೆಲೆಯಲ್ಲಿ ದಲಿತ ಸಮುದಾಯದಲ್ಲಿ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ದಲಿತರ ಓಲೈಕೆಗೆ ಸರ್ಕಾರ ಮುಂದಾಗಿದೆ. ದೇಶಾದ್ಯಂತ ಎ. 2ರಂದು ನಡೆದ ಸ್ವಯಂಪ್ರೇರಿತ ಬಂದ್ ವೇಳೆ ಹಿಂಸಾಚಾರ ಸಂಭವಿಸಿ 11 ಮಂದಿ ಬಲಿಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News