ಸಮುದ್ರದ ಮೂಲಕ ಉಗ್ರರು ನುಸುಳಬಹುದೆನ್ನುವ ಗುಪ್ತಚರ ಮಾಹಿತಿ: ಗೋವಾದಲ್ಲಿ ಅಲರ್ಟ್

Update: 2018-04-07 06:34 GMT

ಪಣಜಿ, ಎ.7: ಉಗ್ರರು ಮೀನುಗಾರಿಕಾ ಟ್ರಾಲರ್ ಮೂಲಕ ಗೋವಾಕ್ಕೆ ನುಸುಳಬಹುದೆನ್ನುವ ಗುಪ್ತಚರ ಮಾಹಿತಿಯ ಹಿನ್ನೆಲೆಯಲ್ಲಿ ಗೋವಾದ ಎಲ್ಲಾ ಕ್ಯಾಸಿನೋಗಳಿಗೆ ಜಲ ಕ್ರೀಡಾ ಆಯೋಜಕರಿಗೆ ಹಾಗೂ ಬಾರ್ಜುಗಳಿಗೆ ಎಚ್ಚರಿಕೆಯಿಂದಿರುವಂತೆ ಆದೇಶಿಸಲಾಗಿದೆ ಎಂದು ರಾಜ್ಯ ಬಂದರು ಸಚಿವ ಜಯೇಶ್ ಸಾಲ್ಗಾಂವ್ಕರ್ ತಿಳಿಸಿದ್ದಾರೆ.

ದೇಶದ ಪಶ್ಚಿಮ ಕರಾವಳಿಯ ಮೂಲಕ ಉಗ್ರರು ನುಸುಳಬಹುದೆನ್ನುವ ಮಾಹಿತಿಯಿರುವ  ಕಾರಣ ಮುಂಬೈ ಮತ್ತು ಗುಜರಾತ್ ಕರಾವಳಿಗೂ ಈ ಸೂಚನೆ ಅನ್ವಯಿಸುತ್ತದೆ ಹಾಗೂ ಅಲ್ಲಿನ ಸಂಬಂಧಿತರಿಗೂ ಮಾಹಿತಿ ರವಾನಿಸಲಾಗಿದೆ ಎಂದು ಸಾಲ್ಗಾಂವ್ಕರ್ ತಿಳಿಸಿದ್ದಾರೆ.

ಪಾಕಿಸ್ತಾನವು ವಶಪಡಿಸಿಕೊಂಡಿದ್ದ ಭಾರತೀಯ ಮೀನುಗಾರಿಕಾ ಟ್ರಾಲರ್ ಒಂದನ್ನು ಬಿಡುಗಡೆಗೊಳಿಸಲಾಗಿದ್ದು, ಅದು ಹಿಂದಕ್ಕೆ ಬರುವಾಗ ಅದರಲ್ಲಿ ಹಲವಾರು ಉಗ್ರರೂ ಬರಬಹುದೆನ್ನುವ ಮಾಹಿತಿ ಗುಪ್ತಚರ ಸಂಸ್ಥೆಗೆ ದೊರಕಿದೆ ಎನ್ನಲಾಗಿದೆ. ಯಾವುದೇ ಅನುಮಾನಾಸ್ಪದ ಚಲನವಲನಗಳನ್ನು ಕಂಡಲ್ಲಿ ಕೂಡಲೇ ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದೂ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News