×
Ad

ಲಿಂಗಾಯತರು ಕಾಂಗ್ರೆಸ್ ಬೆಂಬಲಿಸುವಂತೆ ಮಾತೆ ಮಹಾದೇವಿ ಬಹಿರಂಗ ಕರೆ

Update: 2018-04-07 17:43 IST

ಬೆಂಗಳೂರು, ಎ.7: ಲಿಂಗಾಯತ ಸ್ವತಂತ್ರ ಧರ್ಮ ಸ್ಥಾನಮಾನ ಕಲ್ಪಿಸುವ ನಿಟ್ಟಿನಲ್ಲಿ ದೃಢಹೆಜ್ಜೆಯನ್ನಿಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸರಕಾರಕ್ಕೆ ನಾವು ಬೆಂಬಲ ನೀಡಬೇಕಿದೆ ಎಂದು ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಬಹಿರಂಗ ಕರೆ ನೀಡಿದ್ದಾರೆ.

ಶನಿವಾರ ನಗರದ ಬಸವ ಸಮಿತಿ ಸಭಾಂಗಣದಲ್ಲಿ ನಡೆದ ಲಿಂಗಾಯತ ಮಠಾಧಿಪತಿಗಳ ವೇದಿಕೆಯ ಸಮಾವೇಶದಲ್ಲಿ ಮಾತನಾಡಿದ ಅವರು, ಯಾರು ನಮ್ಮ ಬೇಡಿಕೆಯನ್ನು ಗೌರವಿಸಿ ಸಹಕಾರ ನೀಡಿದ್ದಾರೋ, ಅವರಿಗೆ ನಾವು ಬೆಂಬಲ ನೀಡಬೇಕು. ಇದರಲ್ಲಿ ಯಾವುದೆ ಮುಚ್ಚುಮರೆ ಇಲ್ಲ ಎಂದರು.

900 ವರ್ಷಗಳ ನಂತರ ನಮಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ ಧೈರ್ಯ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸರಕಾರವನ್ನು ಬೆಂಬಲಿಸೋಣ. ಮಠಾಧಿಪತಿಗಳಾದ ನಮ್ಮ ಮೇಲೆ ದೊಡ್ಡ ಜವಾಬ್ದಾರಿಯಿದೆ ಎಂದು ಮಾತೆ ಮಹಾದೇವಿ ತಿಳಿಸಿದರು. ಪಂಚಪೀಠಗಳು, ನಮ್ಮ ಅಧೀನದಲ್ಲಿ 1500 ಮಠಗಳಿವೆ. ನಾವು ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು. ಆದರೂ, ಸಿದ್ದರಾಮಯ್ಯ ಅಂಜದೆ, ಅಳುಕದೆ, ಧೈರ್ಯ ಮಾಡಿ, ಬಸವಣ್ಣನ ಅಭಿಮಾನಿಯಾಗಿ ಉತ್ತಮ ತೀರ್ಮಾನ ಕೈಗೊಂಡರು ಎಂದು ಅವರು ಹೇಳಿದರು.

ಸಂಘಪರಿವಾರದವರು ನಮ್ಮ ಬಗ್ಗೆ ಅನೇಕ ಅಪಪ್ರಚಾರ ಮಾಡುತ್ತಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಕ್ಕಾಗಿ ಉಗ್ರರಿಂದ ಹಣ ಹರಿದು ಬರುತ್ತಿದೆ ಎಂದಿದ್ದಾರೆ. ದೇಶ ವಿಭಜನೆ ಮಾಡುತ್ತಿರುವುದಲ್ಲದೆ, ಹಿಂದೂ ಧರ್ಮವನ್ನು ಸೀಳುತ್ತಿದ್ದಾರೆ ಎಂದು ನಮ್ಮ ವಿರುದ್ಧ ಸರಣಿ ಆರೋಪಗಳನ್ನೆ ಮಾಡಿದ್ದಾರೆ ಎಂದು ಮಾತೆ ಮಹಾದೇವಿ ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಅಸ್ಮಿತೆಯನ್ನು ಗುರುತಿಸಲು ನಾವು ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಹೋರಾಟ ಮಾಡುತ್ತಿದ್ದೇವೆಯೆ ಹೊರತು, ನಾವು ಹಿಂದೂ ಧರ್ಮದ ವಿರೋಧಿಗಳಲ್ಲ. ಜೈನ, ಬೌದ್ಧ, ಸಿಖ್ ಧರ್ಮಗಳ ಸ್ಥಾಪನೆಯಿಂದ ದೇಶಕ್ಕೆ ಸಮಾಜಕ್ಕೆ ಏನಾದರೂ ಹಾನಿಯಾಗಿದೆಯೆ? ನಾವು ಶಾಂತಿಪ್ರಿಯರು, ನಮ್ಮ ವಿರುದ್ಧ ಮಾಡಿರುವ ಆರೋಪಗಳನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಅವರು ಹೇಳಿದರು.

12ನೆ ಶತಮಾನದಲ್ಲಿ ಲಿಂಗಾಯತ ಧರ್ಮ ಸ್ಥಾಪನೆಯಾಗುವುದಕ್ಕೆ ಮುಂಚಿತವಾಗಿದ್ದ ಜೈನ, ಬೌದ್ಧ ಧರ್ಮಗಳು ಹಾಗೂ ನಂತರ ಸ್ಥಾಪನೆಯಾದ ಸಿಖ್ ಧರ್ಮಕ್ಕೆ ನಮ್ಮ ದೇಶದಲ್ಲಿ ಪ್ರತ್ಯೇಕ ಧರ್ಮದ ಸ್ಥಾನಮಾನ ಸಿಕ್ಕಿದೆ. ಆದರೆ, 900 ವರ್ಷಗಳ ಇತಿಹಾಸವಿರುವ ನಮಗೆ ಅಂತಹ ಅವಕಾಶ ಸಿಕ್ಕಿರಲಿಲ್ಲ ಎಂದು ಮಾತೆ ಮಹಾದೇವಿ ಹೇಳಿದರು.

21ನೆ ಶತಮಾನದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರದಿಂದ ನಮಗೆ ಸ್ಥಾನಮಾನ ಸಿಕ್ಕಿದೆ. ಅವರಿಗೆ ಎಷ್ಟು ಅಭಿನಂದನೆ ಸಲ್ಲಿಸಿದರೂ ಸಾಲದು. ಈ ವಿಚಾರವನ್ನು ರಾಜಕೀಯದ ಕನ್ನಡಕದಲ್ಲಿ ಹಾಗೂ ಚುನಾವಣೆಯ ದೃಷ್ಟಿಯಿಂದ ನೋಡಬಾರದು ಎಂದು ಅವರು ಮನವಿ ಮಾಡಿದರು. ನ್ಯಾ.ನಾಗಮೋಹನ್‌ದಾಸ್ ನೇತೃತ್ವದ ಸಮಿತಿಯು ಅಧಿಕೃತವಾದ, ಐತಿಹಾಸಿಕವಾದ ವರದಿಯನ್ನು ನೀಡಿದೆ. ಲಿಂಗಾಯತ ಧರ್ಮಕ್ಕೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡುವಂತೆ ಕೋರಿ ರಾಜ್ಯ ಸರಕಾರವು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿದೆ ಎಂದು ಮಾತೆ ಮಹಾದೇವಿ ಹೇಳಿದರು.

12ನೆ ಶತಮಾನದಲ್ಲಿ ಅರಳಿದ ಈ ಸುಂದರ ಧರ್ಮ ಜಾಗತಿಕ ಧರ್ಮಗಳ ಸಾಲಿನಲ್ಲಿ ನಿಲ್ಲಬೇಕು ಎಂಬುದು ನಮ್ಮ ಆಶಯ. ಸಿಖ್ ಧರ್ಮಕ್ಕೆ ಗುರುವಾಣಿ ಇರುವಂತೆ, ಲಿಂಗಾಯತ ಧರ್ಮಕ್ಕೆ ವಚನ ಸಾಹಿತ್ಯವಿದೆ. ಬಸವಣ್ಣ ಎಂಬ ಗುರುವಿದ್ದಾನೆ. ಕೇಂದ್ರ ಸರಕಾರವು ನಮ್ಮ ಬೇಡಿಕೆಗೆ ಸ್ಪಂದಿಸಿ ಎ.18ರಂದು ಬಸವ ಜಯಂತಿ ಸಂದರ್ಭದಲ್ಲಿ ಲಿಂಗಾಯತ ಧರ್ಮದ ಸ್ಥಾನಮಾನ ನೀಡಬೇಕು ಎಂದು ಮಾತೆ ಮಹಾದೇವಿ ತಿಳಿಸಿದರು.

ಕಲಬುರ್ಗಿ ಜಿಲ್ಲೆಯ ಸುಲಫಲ ಮಠದ ಶ್ರೀಗಳು ಮಾತನಾಡಿ, ಪಂಚಾಚಾರ್ಯರಿಗೆ ಭವಿಷ್ಯವಿಲ್ಲ ಎಂದು ಬರೆದಿದ್ದ ಸಂಶೋಧಕ ಚಿದಾನಂದಮೂರ್ತಿ, ಈಗ ರೊಕ್ಕ ತೆಗೆದುಕೊಂಡು ಪಂಚಾಚಾರ್ಯರ ಪರವಾಗಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಜೆ.ಎಚ್.ಪಟೇಲ್, ಎಸ್.ನಿಜಲಿಂಗಪ್ಪ, ಎಸ್.ಆರ್.ಬೊಮ್ಮಾಯಿ, ಯಡಿಯೂರಪ್ಪ ಸೇರಿದಂತೆ ಸಮುದಾಯದ ಯಾವ ಮುಖ್ಯಮಂತ್ರಿಯೂ ಈ ನಿಟ್ಟಿನಲ್ಲಿ ಆಲೋಚನೆ ಮಾಡಿರಲಿಲ್ಲ. ಆದರೆ, ‘ಗಂಡಸು ಎಂದರೆ ಸಿದ್ದರಾಮಯ್ಯ’. ಎದೆಗಾರಿಕೆ, ಧೈರ್ಯ ಇರುವ ವ್ಯಕ್ತಿ. ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಕೇಂದ್ರಕ್ಕೆ ಶಿಫಾರಸ್ಸು ಸಲ್ಲಿಸಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪಂಚಾಚಾರ್ಯರನ್ನು ಶಿವಯೋಗಿ ಮಂದಿರದಲ್ಲಿ ಭೇಟಿಯಾಗಿ ಸಭೆ ನಡೆಸಿದ್ದಾರೆ. ಪಂಚಾಚಾರ್ಯರಿಂದ ಶಿವಯೋಗಿ ಮಂದಿರ ಅಪವಿತ್ರವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News