ಪಾಕಿಸ್ತಾನದಲ್ಲಿ ಭಗತ್‌ಸಿಂಗ್ ನೆನಪು

Update: 2018-04-07 12:20 GMT

ಹುತಾತ್ಮ ಭಗತ್ ಸಿಂಗ್‌ರ ಜನ್ಮ ದಿನಾಚರಣೆಯನ್ನು ಲಾಹೋರ್‌ನ ಎರಡು ಪ್ರಮುಖ ಸ್ಥಳಗಳಲ್ಲಿ ಆಚರಿಸಲಾಗುತ್ತದೆ. ರಾಜಕೀಯ ಹಾಗೂ ರಾಜಕೀಯೇತರ ಸಂಘಟನೆಗಳನ್ನೊಳಗೊಂಡ ‘ಭಗತ್ ಸಿಂಗ್ ಮೆಮೋರಿಯಲ್ ಸೊಸೈಟಿ’ ವತಿಯಿಂದ ಈ ವಿಶೇಷ ಸಮಾರಂಭಗಳನ್ನು ಆಯೋಜಿಸಲಾಗುತ್ತದೆ. ಮೊದಲು ಇದನ್ನು ‘ದಾಯಲ್ ಸಿಂಗ್ ಕಾಲನಿ’ಯಲ್ಲಿ ನಡೆಸಲಾಗುತ್ತಿತ್ತು. ಭಾಷಣಕಾರರು ಭಗತ್ ಸಿಂಗ್‌ನ ಹಿರಿಮೆಯನ್ನು, ಆತನ ಶೌರ್ಯವನ್ನು, ವ್ಯಕ್ತಿತ್ವವನ್ನು ಕುರಿತಾಗಿ ವಿವರವಾಗಿ ಚರ್ಚಿಸುತ್ತಿದ್ದರು. ಭಗತ್ ಸಿಂಗ್ ಹಳ್ಳಿಯಾದ ಪಿಂಗಕ್ಕೆ ಸೇರಿದ ಇಕ್ಬಾಲ್ ವಿರ್ಕ ಎಂಬವರು ಒಮ್ಮೆ ಭಗತ್ ಸಿಂಗ್ ವಾಸಿಸುತ್ತಿದ್ದ ಮನೆಯಲ್ಲಿಯೇ ತಾವು ವಾಸಿಸುತ್ತಿದ್ದೇವೆ ಎಂದು ಹೇಳಿದ್ದರು. ಭಗತ್ ಸಿಂಗ್ ತಂದೆಯವರು ಕಟ್ಟಿಸಿದ ಶಾಲೆಯು ಇಂದು ಅತ್ಯಂತ ದುರವಸ್ಥೆಯಲ್ಲಿದೆ ಎಂದು ವಿಷಾದಿಸಿದ್ದರು. 

ಭಗತ್ ಸಿಂಗ್‌ರನ್ನು ಗಲ್ಲಿಗೇರಿಸಿದ ಸ್ಥಳವಾದ ‘ಶಾಡಮನ್ ಚೌಕ್’ನ ಬಳಿ ಮತ್ತೊಂದು ಸಮಾರಂಭವನ್ನು ಆಯೋಜಿಸಲಾಗುತ್ತಿತ್ತು. ಸಾವಿರಾರು ಸಂಖ್ಯೆಯಲ್ಲಿ ಜನರು ಇಲ್ಲಿ ನೆರೆಯುತ್ತಿದ್ದರು. ಈ ಸಂದರ್ಭದಲ್ಲಿ ‘ಭಗತ್ ಸಿಂಗ್ ಮೆಮೋರಿಯಲ್ ಸೊಸೈಟಿ’ಯು ‘ಶಾಡಮನ್ ಚೌಕ್’ನ್ನು ‘ಭಗತ್ ಸಿಂಗ್ ಚೌಕ್’ ಎಂದು ಪುನರ್ ನಾಮಕರಣ ಮಾಡಬೇಕೆಂದು ಹೇಳಿತು. ಪಿಂಗ ಗ್ರಾಮದಲ್ಲಿರುವ ಭಗತ್ ಸಿಂಗ್ ಅವರ ಮನೆಯನ್ನು ‘ಭಗತ್ ಸಿಂಗ್ ಲಿಬರೇಶನ್ ಮ್ಯೂಸಿಯಂ’ನ್ನಾಗಿ ಪರಿವರ್ತಿಸಬೇಕೆಂದು, ಸಾರ್ವಜನಿಕರಿಂದ ಚಂದಾ ಹಣವನ್ನೆತ್ತಿ ಭಗತ್ ಸಿಂಗ್ ತಂದೆಯವರು ಸ್ಥಾಪಿಸಿದ ಶಾಲೆಯನ್ನು ಜೀರ್ಣೋದ್ಧಾರ ಮಾಡಬೇಕೆಂದು ಗೊತ್ತುವಳಿಯನ್ನು ಮಂಡಿಸಿತು. ಅದರ ಎಲ್ಲ ಸದಸ್ಯರು ಮತ್ತು ನೆರೆದಿದ್ದ ಜನಸಮೂಹ ಈ ನಿಲುವಳಿಯನ್ನು ಸಂಪೂರ್ಣವಾಗಿ ಅನುಮೋದಿಸಿದ್ದರು. ನಂತರ ಅಧಿಕಾರಿ ನೂರುಲ್ ಅಮೀನ್ ಮೆಂಗಲ್ ಎಂಬವರು ಲಾಹೋರ್ ನಗರದ ಅಧಿಕಾರಿಗಳಿಗೆ ನಿರ್ದೇಶನವೊಂದನ್ನು ನೀಡಿದರು. ಆ ನಿರ್ದೇಶನದ ಪ್ರಕಾರ ಲಾಹೋರ್‌ನ ‘ಶಾಡಮನ್ ಚೌಕ್’ ಅನ್ನು ‘ಭಗತ್ ಸಿಂಗ್ ಚೌಕ್’ ಎಂದು ಪುನರ್ ನಾಮಕರಣ ಮಾಡಬೇಕೆಂಬುದಾಗಿತ್ತು. ನಂತರ ಮಾತನಾಡುತ್ತ ಆ ಅಧಿಕಾರಿ ನೂರುಲ್ ಅಮೀನ್ ಮೆಂಗಲ್ ಅವರು ‘‘ಭಗತ್ ಸಿಂಗ್ ಯಾರೆಂದು ನಿಮಗೆ ಗೊತ್ತಿದೆ. ಭಗತ್ ಸಿಂಗ್ ಬ್ರಿಟಿಷರ ವಿರುದ್ಧ ಹೋರಾಡುತ್ತ, ಕ್ರಾಂತಿಕಾರಿ ಘೋಷಣೆಗಳನ್ನು ಕೂಗುತ್ತ ಈ ಚೌಕಿನಲ್ಲಿ (ಶಾಡಮನ್ ಚೌಕ್) ಹುತಾತ್ಮರಾದರು. ಪಾಕಿಸ್ತಾನದ ಸಂವಿಧಾನದ ಪ್ರಕಾರ ಪಾಕಿಸ್ತಾನದ ನಾಗರಿಕರು ಅಂದರೆ ಮುಸ್ಲಿಮರು, ಸಿಖ್ಖರು, ಹಿಂದೂಗಳು ಮತ್ತು ಕ್ರಿಶ್ಚಿಯನ್ನರು ಎಲ್ಲರೂ ಈ ಚೌಕನ್ನು ಭಗತ್‌ಸಿಂಗ್ ಹೆಸರಿನಲ್ಲಿ ನಾಮಕರಣ ಮಾಡುವುದನ್ನು ಗೌರವಿಸಬೇಕು, ಯಾರೂ ವಿರೋಧಿಸಬಾರದು, ಏಕೆಂದರೆ ಮೇಲಿನ ಎಲ್ಲ ನಾಗರಿಕರಿಗೆ ಸಂವಿಧಾನಬದ್ಧವಾದ ಆಧಿಕಾರವಿದೆ’’ ಎಂದು ಹೇಳಿದರು. ನಂತರ ತಮ್ಮ ಆಧೀನ ಅಧಿಕಾರಿಗಳಿಗೆ ಈ ಜಾಗದಲ್ಲಿ ಭಗತ್ ಸಿಂಗ್ ಅವರ ಹೆಸರಿನ ನಾಮಫಲಕವನ್ನು ಹಾಕಿಸಬೇಕೆಂದೂ ಆದೇಶಿಸಿದರು. ಮುಂದುವರಿದು ಭಗತ್ ಸಿಂಗ್ ಚೌಕ್ ಎಂದು ಪುನರ್ ನಾಮಕರಣ ಮಾಡುವುದರ ಮೂಲಕ ಹುತಾತ್ಮ ಭಗತ್ ಸಿಂಗ್‌ರ ಚಿರಸ್ಮರಣೆಯನ್ನು ಮಾಡಿದಂತಾಗುತ್ತದೆ ಮತ್ತು ಇದು ಏಶ್ಯಾ ಖಂಡಕ್ಕೆ ಪಾಕಿಸ್ತಾನದ ಪರವಾಗಿ ಭಗತ್ ಸಿಂಗರ ಚೈತನ್ಯಕ್ಕೆ ಗೌರವಿಸಿದಂತಾಗುತ್ತದೆ ಎಂದು ಉದ್ಗರಿಸಿದ್ದರು ಈ ಮೆಂಗಲ್.ನಂತರ ಸಹಜವಾಗಿ ಇದರ ಕುರಿತಾಗಿ ಪರ, ವಿರೋಧದ ಚರ್ಚೆಗಳು ನಡೆಯಿತು.

ಲಾಹೋರ್‌ನ ಚೌಕ್‌ವೊಂದಕ್ಕೆ ಹುತಾತ್ಮ ‘ಭಗತ್ ಸಿಂಗ್’ರ ಹೆಸರನ್ನು ಇಡಬೇಕೆಂಬುದರ ಪರವಾಗಿ ವಾದಿಸುವವರ ಪ್ರಮಾಣವೇ ಹೆಚ್ಚಾಗಿತ್ತು. ಇದರ ವಿರೋಧಿಸುವವರ ಶೇಕಡಾವಾರು ಸಂಖ್ಯೆ ಬಹಳ ಕಡಿಮೆಯಿತ್ತು. ಎಂದಿನಂತೆ ಭಾರತದ ಮಾಧ್ಯಮಗಳು ಇದಕ್ಕೆ ಹೆಚ್ಚಿನ ಒತ್ತನ್ನು ನೀಡಲಿಲ್ಲ. ಭಗತ್ ಸಿಂಗ್‌ರವರ ಜನ್ಮೋತ್ಸವದ ಅಂಗವಾಗಿ ಆಗಿನ ಸ್ವಾತಂತ್ರ ಚಳವಳಿ ಮತ್ತು ಶಹೀದ್ ಭಗತ್ ಸಿಂಗ್ ಕುರಿತಾಗಿ ಸರಣಿ ನಾಟಕೋತ್ಸವಗಳೂ ಪಾಕಿಸ್ತಾನದಲ್ಲಿ ಜರುಗುತ್ತಿವೆ. ಅದು ಇಂದಿಗೂ ಚಾಲ್ತಿಯಲ್ಲಿದೆ. ನಾವು ಅಲಕ್ಷಿಸಿದಂತಹ ವ್ಯಕ್ತಿತ್ವಗಳನ್ನು ಮರಳಿ ನಮ್ಮದಾಗಿಸಿಕೊಳ್ಳಬೇಕು. ಕೆಲವು ವರ್ಷಗಳ ಹಿಂದೆ ಪಾಕಿಸ್ತಾನದ ರಾಜ್ಯವು ಸಾಹಿತಿ ಸಾದತ್ ಹಸನ್ ಮಂಟೋ ಅವರಿಗೆ ಗೌರವ ಸಮರ್ಪಣೆಯನ್ನು ಸಲ್ಲಿಸಿತು, ಈಗ ಲಾಹೋರ್‌ನಲ್ಲಿ ಭಗತ್ ಸಿಂಗ್ ಹೆಸರನ್ನು ಇಲ್ಲಿನ ಚೌಕ್ ಒಂದಕ್ಕೆ ನಾಮಕರಣ ಮಾಡಿದ್ದಾರೆ. ಈ ಲಾಹೋರ್ ಪಟ್ಟಣವು ಇನ್ನೂ ಅನೇಕ ಮುಸ್ಲಿಮೇತರ ಹೀರೋಗಳನ್ನು ನೆನೆಸಿಕೊಳ್ಳಬೇಕಾಗಿದೆ. ಇಂದಿನ ಕಠಿಣವಾದ ಸಂಕೀರ್ಣ ಪರಿಸ್ಥಿತಿಯಲ್ಲಿ ಮೌಲ್ಯಗಳ, ಆತ್ಮಸಾಕ್ಷಿಯ ಪ್ರತಿಪಾದಕರು ಇತಿಹಾಸದ ನಾಯಕರ ನೆನಪಿಗಾಗಿ ದಾರಿಗಳ ಹುಡುಕಾಟದಲ್ಲಿದ್ದಾರೆ. ಇತಿಹಾಸದ ಅಂಚಿನಲ್ಲೇ ಬದುಕಿದ್ದ ಆದರೆ ಆಧುನಿಕ ಲಾಹೋರಿನ ಪಿತಾಮಹನೆಂದೇ ಕರೆಯಲ್ಪಡುವ, ‘‘ಗಂಗಾರಾಮ್’’ ಅವರನ್ನು ಇತ್ತೀಚಿನ ದಿನಗಳಲ್ಲಿ ನೆನಪಿಸಿಕೊಳ್ಳುತ್ತ ಕೈಯಲ್ಲಿ ಹೂವಿನ ಗುಚ್ಛನ್ನು ಹಿಡಿದು ರಾವಿ ರಸ್ತೆಯಲ್ಲಿರುವ ಗಂಗಾರಾಮ್ ಅವರ ಮೆಮೋರಿಯಲ್ ಬಳಿ ಆಗಮಿಸುತ್ತಿರುವ ಕೆಲವು ಜನರೇ ನಮಗೆ ಮುಂದಿನ ದಿನಗಳ ಭವಿಷ್ಯದ ನೆಮ್ಮದಿಯನ್ನು ಮೂಡಿಸುತ್ತಿದ್ದಾರೆ. ಹಿಂದೂಸ್ಥಾನವನ್ನು ಆಳಿದ ಮುಸ್ಲಿಂ ರಾಜರುಗಳ ವೈಭವೋಪೇತ ರಾಜ್ಯಾಡಳಿತವನ್ನು ನೆನಪಿಸುವ ಅಸಂಖ್ಯಾತ ಕತೆಗಳ ತಳದಲ್ಲಿ ಹೂತು ಹೋಗಿರುವ ‘ಮಹಾರಾಜ ರಣಜಿತ್ ಸಿಂಗ್’ ಇಂದು ಕೆಲವರ ಸಂಭಾಷಣೆಗಳಲ್ಲಿ, ಅಪರೂಪಕ್ಕೊಮ್ಮೆ ದಿನಪತ್ರಿಕೆಗಳ ಕಾಲಂನಲ್ಲಿ ಒಬ್ಬ ಸ್ವಯಂ ಆಡಳಿತ ಮತ್ತು ಪಾವಿತ್ರವನ್ನು ಪ್ರತಿಪಾದಿಸಿದ ಆದರ್ಶ ಮಹಾರಾಜನಾಗಿ ಜೀವಂತವಾಗಿದ್ದಾರೆ. ತನ್ನ ಕ್ರಾಂತಿಕಾರಿ ಚಿಂತನೆಗಳು, ಸ್ವಾತಂತ್ರ ಹೋರಾಟಗಾರನಾಗಿ ತರುಣ ವಯಸ್ಸಿನಲ್ಲಿಯೇ ಹುತಾತ್ಮನಾದ ಭಗತ್ ಸಿಂಗ್‌ನ ಹೆಸರಿನ ಅಧಿಕೃತ ಸ್ಮಾರಕವು ನಿಜಕ್ಕೂ ಒಂದು ಮೈಲಿಗಲ್ಲು.

ಹಿಂದೂಸ್ಥಾನವನ್ನು ಆಳಿದ ಮುಸ್ಲಿಂ ರಾಜರುಗಳ ವೈಭವೋಪೇತ ರಾಜ್ಯಾಡಳಿತವನ್ನು ನೆನಪಿಸುವ ಅಸಂಖ್ಯಾತ ಕತೆಗಳ ತಳದಲ್ಲಿ ಹೂತು ಹೋಗಿರುವ ‘ಮಹಾರಾಜ ರಣಜಿತ್ ಸಿಂಗ್’ ಇಂದು ಕೆಲವರ ಸಂಭಾಷಣೆಗಳಲ್ಲಿ, ಅಪರೂಪಕ್ಕೊಮ್ಮೆ ದಿನಪತ್ರಿಕೆಗಳ ಕಾಲಂನಲ್ಲಿ ಒಬ್ಬ ಸ್ವಯಂ ಆಡಳಿತ ಮತ್ತು ಪಾವಿತ್ರವನ್ನು ಪ್ರತಿಪಾದಿಸಿದ ಆದರ್ಶ ಮಹಾರಾಜನಾಗಿ ಜೀವಂತವಾಗಿದ್ದಾರೆ. ತನ್ನ ಕ್ರಾಂತಿಕಾರಿ ಚಿಂತನೆಗಳು, ಸ್ವಾತಂತ್ರ ಹೋರಾಟಗಾರನಾಗಿ ತರುಣ ವಯಸ್ಸಿನಲ್ಲಿಯೇ ಹುತಾತ್ಮನಾದ ಭಗತ್ ಸಿಂಗ್‌ನ ಹೆಸರಿನ ಅಧಿಕೃತ ಸ್ಮಾರಕವು ನಿಜಕ್ಕೂ ಒಂದು ಮೈಲಿಗಲ್ಲು.

Writer - ಬಿ.ಶ್ರೀಪಾದ ಭಟ್

contributor

Editor - ಬಿ.ಶ್ರೀಪಾದ ಭಟ್

contributor

Similar News