‘ನಾನು ಚೇತನ್ ನಾವೆಲ್ಲರೂ ಚೇತನ್’: ಬಿಜೆಪಿ ವಿರುದ್ಧ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ
ಬೆಂಗಳೂರು, ಏ.7: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಬಿಡುಗಡೆ ಮಾಡಿರುವ ಚುನಾವಣಾ ಚಾರ್ಜ್‌ಶೀಟ್‌ನಲ್ಲಿ ಚಿತ್ರನಟ ಸಾಮಾಜಿಕ ಹೋರಾಟಗಾರ ಚೇತನ್ ಅವರನ್ನು ನಕ್ಸಲ್ ಉಗ್ರರಿಗೆ ಹೋಲಿಸಿರುವುದನ್ನು ಪ್ರಗತಿಪರ ಸಂಘಟನೆಗಳು ಖಂಡಿಸಿವೆ.
ಶನಿವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು, ಜಮಾಯಿಸಿದ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ‘ನಾನು ಚೇತನ್ ನಾವೆಲ್ಲರು ಚೇತನ್’ ಎಂಬ ಶೀರ್ಷಿಕೆಯಡಿ ರಾಜ್ಯ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದರು. ದಿಡ್ಡಳ್ಳಿಯ ಗಿರಿಜನರು ಮತ್ತು ಆದಿವಾಸಿಗಳಿಗೆ ನೆಲೆ ಕಲ್ಪಿಸಲು ನಡೆದ ಹೋರಾಟಕ್ಕೂ ನಕ್ಸಲ್ ಚಟುವಟಿಕೆಗೂ ಯಾವುದೇ ಸಂಬಂಧವಿಲ್ಲ. ಬುದ್ದ, ಬಸವ, ಅಂಬೇಡ್ಕರ್ ಅವರ ತತ್ವದಂತೆ ಪ್ರಗತಿ ಪರ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಚೇತನ್ ಅವರನ್ನು ನಕ್ಸಲ್ ಎಂದು ಆರೋಪ ಮಾಡಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದಲಿತ ಮುಖಂಡ ಸಂಪತ್ ಸುಬ್ಬಯ್ಯ, ಚಿತ್ರನಟ ಚೇತನ್‌ರವರ ಹೋರಾಟದ ಫಲವಾಗಿ ದಿಡ್ಡಹಳ್ಳಿಯ 528 ಆದಿವಾಸಿ ಕುಟುಂಬಗಳಿಗೆ ನೆಲೆ ಸಿಕ್ಕಿದೆ. ಆದರೆ, ಬಿಜೆಪಿ ಬಿಡುಗಡೆ ಮಾಡಿರುವ ಆರೋಪ ಪಟ್ಟಿಯಲ್ಲಿ ನಕ್ಸಲ್ ಎಂದು ಹೇಳಲಾಗಿದೆ. ಚೇತನ್ ತೇಜೋವಧೆ ಮಾಡುವ ದುರುದ್ದೇಶದಿಂದ ಈ ರೀತಿ ಆರೋಪಿಸಲಾಗಿದೆ ಎಂದು ದೂರಿದರು.
ಬಿಜೆಪಿಯವರು ಹೋರಾಟಗಾರರ ಮೇಲೆ ಇಲ್ಲ ಸಲ್ಲದ ಆರೋಪವಹಿಸಿ, ಹೋರಾಟಗಾರರನ್ನು ಹತ್ತಿಕ್ಕುವ ಕೆಲಸದಲ್ಲಿ ತೊಡಗಿದ್ದಾರೆ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಬಂದ ಮೇಲೆ ದಲಿತರು, ಹಿಂದುಳಿದವರು ಹಾಗೂ ಅಮಾಯಕರ ಮೇಲೆ ದೌರ್ಜನ್ಯ, ಹಲ್ಲೆಯಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಅಲ್ಲದೆ, ಬಿಜೆಪಿಯ ಕೇಂದ್ರ ಸಚಿವರು ಸಂವಿಧಾನ ಬದಲಾವಣೆ ಮಾಡುವ ಮಾತುಗಳನ್ನಾಡುತ್ತಾರೆ. ಬಿಜೆಪಿ ನಾಯಕರು ಮೊದಲು ದಲಿತ, ಶೋಷಿತಪರ ಹೋರಾಟಗಾರರು ಯಾರು ಎಂಬುದನ್ನು ಅರಿತುಕೊಳ್ಳಬೇಕಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಬಿಡುಗಡೆ ಮಾಡಿರುವ ಚುನಾವಣಾ ಚಾರ್ಜ್‌ಶೀಟ್‌ನಲ್ಲಿ ಮಾಡಿರುವ ದೂರುಗಳನ್ನು ಬಿಜೆಪಿ ಈ ಕೂಡಲೆ ಹಿಂಪಡೆದು ಬಿಜೆಪಿ ನಾಯಕರು ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದಲ್ಲಿ ರಾಜ್ಯಾಂದ್ಯಂತ ತೀವ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.
ಮುತ್ತಿಗೆ ಇಲ್ಲ: ಬಿಜೆಪಿ ಆರೋಪ ಖಂಡಿಸಿ ಮಲ್ಲೇಶ್ವರಂನ ಬಿಜೆಪಿ ಪ್ರಧಾನ ಕಚೇರಿಗೆ ಮುತ್ತಿಗೆ ಹಾಕಲು ಹೊರಟ ಪ್ರತಿಭಟನಾಕಾರರನ್ನು ಪೊಲೀಸರು ತಡೆದ ಕಾರಣ ಪ್ರತಿಭಟನೆ ಅಂತ್ಯಗೊಳಿಸಿದರು. ಪ್ರತಿಭಟನೆಯಲ್ಲಿ ಸಂಘಟನೆ ಮುಖಂಡರಾದ ಪ್ರವೀಣ್, ಸಿದ್ದಾರ್ಥ, ಮೂರ್ತಿ, ಮೋಹನ್, ವೀವೇಕ್ ಸೇರಿ ಪ್ರಮುಖರಿದ್ದರು.